ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ರಾಜಕೀಯಕರಣ: ಮೋದಿ ವಿರುದ್ಧ ಅಮರಿಂದರ್ ಸಿಂಗ್ ಆಕ್ರೋಶ

Update: 2019-04-14 15:50 GMT

ಚಂಡೀಗಡ,ಎ.14: ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಶತಮಾನೋತ್ಸವ ಸಂದರ್ಭದಲ್ಲಿ ಇತಿಹಾಸದ ಈ ದುರಂತ ಘಟನೆಯನ್ನು ರಾಜಕೀಯಗೊಳಿಸುತ್ತಿರುವ ಕಾರಣಕ್ಕೆ ಪ್ರಧಾನಿ ಮೋದಿಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ರವಿವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಜಲಿಯನ್‌ವಾಲಾ ಬಾಗ್ ಘಟನೆಯ ಸ್ಮರಣಾರ್ಥವಾಗಿ ಕೇಂದ್ರ ಸರಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಅಮರಿಂದರ್ ಸಿಂಗ್ ವಿರುದ್ಧ ಹರಿಹಾಯ್ದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಂಗ್, ಕೇಂದ್ರ ಸರಕಾರ ರಾಜ್ಯ ಸರಕಾರ ಆಯೋಜಿಸಿರುವ ಕಾರ್ಯಕ್ರಮಗಳು ಮತ್ತು ಅಭಿಯಾನಗಳಿಗೆ ಬೆಂಬಲ ನೀಡುವ ಬದಲು ಜಲಿಯನ್‌ವಾಲಾ ಘಟನೆಯ ಬಗ್ಗೆ ತನ್ನದೇ ಆದ ಸಮಾನಾಂತರ ಕಾರ್ಯಕ್ರಮಗಳನ್ನು ಉದ್ದೇಶಪೂರ್ವಕವಾಗಿ ಆಯೋಜಿಸಿದೆ ಎಂದು ಆರೋಪಿಸಿದ್ದಾರೆ.

ಜಲಿಯನ್‌ವಾಲಾ ಬಾಗ್ ಘಟನೆಯ ಸ್ಮರಣಾರ್ಥ ಜೊತೆಯಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಜಗತ್ತಿಗೆ ಉತ್ತಮ ಸಂದೇಶ ನೀಡುವ ಎಂದು ಪ್ರಧಾನಿ ಮೋದಿಯವರನ್ನು ಹಲವು ಬಾರಿ ಭೇಟಿಯಾಗಿ ಮನವಿ ಮಾಡಿಕೊಂಡಿದ್ದೆ. ಆದರೆ ಈಗ ಕೇಂದ್ರ ಸರಕಾರ ತನ್ನದೇ ಆದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನನ್ನ ಮನವಿಯನ್ನು ನಿರ್ಲಕ್ಷಿಸಿದೆ ಎಂದು ಸಿಂಗ್ ಆರೋಪಿಸಿದ್ದಾರೆ.

ಈ ಘಟನೆಯನ್ನು ಕೇಂದ್ರ ಸರಕಾರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯಗೊಳಿಸಿ ಮತಗಳನ್ನು ಪಡೆಯಲು ಬಯಸಿದೆ. ಅದರಲ್ಲೂ ಪ್ರಧಾನಿ ಮೋದಿ ಜಲಿಯನ್‌ವಾಲಾಬಾಗ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದು ಈ ನಿರ್ಧಾರ ತಳೆದಿರುವುದು ಆಘಾತ ನೀಡಿದೆ ಎಂದು ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

ಕೇಂದ್ರ ಸರಕಾರ ಆಯೋಜಿಸಿರುವ ಕಾರ್ಯಕ್ರಮಕ್ಕೆ ತೆರಳದಂತೆ ಹೈಕಮಾಂಡ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ಗೆ ಸೂಚಿಸಿದೆ ಎಂಬ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ಕ್ಯಾಪ್ಟನ್, ರಾಜ್ಯ ಸರಕಾರಗಳಿಗೆ ಆದೇಶ ನೀಡುವ ಪ್ರವೃತ್ತಿ ಕಾಂಗ್ರೆಸ್‌ನಲ್ಲಿಲ್ಲ, ಅದೇನಿದ್ದರೂ ಬಿಜೆಪಿ ಸಂಪ್ರದಾಯ. ನೀವು ನಿರ್ದಿಷ್ಟವಾಗಿ ಸರ್ವಾಧಿಕಾರಿ ಶೈಲಿಯ ಸರಕಾರ ನಡೆಸುತ್ತಿದ್ದೀರಿ ಎಂದು ಮೋದಿಗೆ ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News