ಆರೋಗ್ಯ ರಂಗದ ರಾಷ್ಟ್ರೀಕರಣವಾಗಲಿ

Update: 2019-04-15 18:35 GMT

ಮಾನ್ಯರೇ,

ಇತ್ತೀಚೆಗೆ ಅಪಘಾತಗಳು ಕರಾವಳಿಯ ಹೆದ್ದಾರಿಗಳಲ್ಲಿ ನಿತ್ಯದ ಘಟನೆಗಳೆಂಬಂತಾಗಿದೆ. ಹಲವಾರು ಮನುಷ್ಯ ಜೀವಗಳು ಈ ಅಪಘಾತಗಳಲ್ಲಿ ಇನ್ನಿಲ್ಲವಾದರೆ, ಇನ್ನು ಹಲವರು ಜೀವನ ಮರಣಗಳ ಮಧ್ಯೆ ಜೀವಚ್ಛವಗಳಾಗಿರುತ್ತಾರೆ. ಇವೆಲ್ಲವುಗಳಿಗಿಂತಲೂ ಹೆಚ್ಚಾಗಿ ಅಪಘಾತಕ್ಕೀಡಾದ ವ್ಯಕ್ತಿಯ ಕುಟುಂಬವು ಜೀವಮಾನದ ಸಂಪಾದನೆಯನ್ನೆಲ್ಲಾ ಆಸ್ಪತ್ರೆಗಳಿಗೆ ಧಾರೆಯೆರೆದು ಕಂಗಾಲಾಗಿ ಹೋಗುತ್ತಾರೆ. ಸರಕಾರಗಳು ‘ಆಯುಷ್ಮಾನ್ ಭಾರತ್’, ‘ಆರೋಗ್ಯ ಕರ್ನಾಟಕ’ದಂತಹ ಯೋಜನೆಗಳನ್ನು ಜಾರಿಗೊಳಿಸಿರುವ ಕುರಿತು ಬಡಾಯಿ ಕೊಚ್ಚಿಕೊಂಡರೂ ಅವುಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿವೆ. ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಯೋಜನೆಗಳಲ್ಲಿ ನೋಂದಾಯಿಸಿಕೊಂಡರೂ ಒಂದಿಲ್ಲೊಂದು ನೆಪ ಹೇಳಿ ನಾಗರಿಕರಿಗೆ ಸರಕಾರಿ ಸೌಲಭ್ಯಗಳು ಲಭಿಸದಂತೆ ನೋಡಿಕೊಳ್ಳುತ್ತವೆ. ನನ್ನ ಸಂಬಂಧಿಕನಾದ ಯುವಕನೊಬ್ಬ ತಿಂಗಳ ಹಿಂದೆ ಮಂಗಳೂರಿನ ಕಾನೂನು ಕಾಲೇಜಿನ ಹತ್ತಿರ ದ್ವಿಚಕ್ರ ವಾಹನದಲ್ಲಿ ಅಪಘಾತಕ್ಕೀಡಾದ.
ಹತ್ತಿರದಲ್ಲಿದ್ದ ಸಾರ್ವಜನಿಕರು ಆತನನ್ನು ಹತ್ತಿರವಿರುವ ‘ಮಲ್ಟಿ ಸ್ಪೆಶಾಲಿಟಿ’ ಆಸ್ಪತ್ರೆಯೊಂದಕ್ಕೆ ತುರ್ತಾಗಿ ಸೇರಿಸಿದರು. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಇದ್ದು ಆಸ್ಪತ್ರೆಯಿಂದ ಕೋಮಾ ಸ್ಥಿತಿಯಲ್ಲೇ ಬಿಡುಗಡೆಯಾಗುವ ವೇಳೆಯಲ್ಲಿ ಆಸ್ಪತ್ರೆ ವೆಚ್ಚ 10 ಲಕ್ಷ ರೂಪಾಯಿ ಮೀರಿತ್ತು. ಮಧ್ಯಮ ಬಡ ಕುಟುಂಬ, ‘ಆಯುಷ್ಮಾನ್ ಭಾರತ್ ಕಾರ್ಡ್’ ಕೂಡ ಹೊಂದಿತ್ತು, ಆ ‘ಮಲ್ಟಿ ಸ್ಪೆಶಾಲಿಟಿ’ ಆಸ್ಪತ್ರೆ ಆರೋಗ್ಯ ಕರ್ನಾಟಕದಡಿ ನೋಂದಾಯಿತ ಆಸ್ಪತ್ರೆಯಾಗಿತ್ತು. ಆದರೂ ಅಪಘಾತದ ರೋಗಿಗೆ ಈ ಆಸ್ಪತ್ರೆಯಲ್ಲಿ ಯೋಜನೆಯ ಲಾಭ ಪಡೆಯಲಾಗದು ಎಂದು ಒಂದು ಪೈಸೆಯ ರಿಯಾಯಿತಿಯನ್ನೂ ನೀಡದೆ ಸಂಪೂರ್ಣ ಬಿಲ್ಲನ್ನು ವಸೂಲು ಮಾಡಲಾಯಿತು. ಕನಿಷ್ಠ ಪಕ್ಷ ಅಪಘಾತದ ರೋಗಿಗಳಿಗೆ ನೀಡಲಾಗುವ ‘ಹರೀಶ್ ಸಾಂತ್ವನ ಯೋಜನೆ’ಯನ್ನಾದರೂ ನೀಡಿ ಎಂದಾಗ ಆ ಯೋಜನೆಯನ್ನು ಸರಕಾರ ಈಗಾಗಲೇ ಆರೋಗ್ಯ ಕರ್ನಾಟಕದೊಂದಿಗೆ ವಿಲೀನಗೊಳಿಸಿದ ಕಾರಣ ಆ ಯೋಜನೆ ಜಾರಿಯಲ್ಲಿಲ್ಲ ಎಂದುಬಿಟ್ಟರು.

ಸರಕಾರ ಆರೋಗ್ಯ ಯೋಜನೆಗಳನ್ನು ಜಾರಿಗೊಳಿಸುವಾಗ ಎಷ್ಟೊಂದು ಅಡೆತಡೆಗಳನ್ನು ಇಟ್ಟಿರುತ್ತದೆಯೆಂದರೆ ಯೋಜನೆಯ ಲಾಭ ಪಡೆಯಲು ಪ್ರಯತ್ನಿಸುವ ರೋಗಿ ಅಲೆದು ಬೆಂಡಾಗಿ ಸತ್ತೇ ಬಿಡುತ್ತಾನೆ. ಇದೀಗ ‘ಆಯುಷ್ಮಾನ್ ಭಾರತ್’, ‘ಆರೋಗ್ಯ ಕರ್ನಾಟಕ’ವನ್ನೇ ನೋಡಿ, ಈ ಯೋಜನೆಯಡಿ ನೀವು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದು. ನಿಮಗೆ ಅವಶ್ಯವಿರುವ ಚಿಕಿತ್ಸೆ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದ ಸ್ಥಿತಿಯಲ್ಲಿ ಮಾತ್ರ ನೀವು ಖಾಸಗಿ ಆಸ್ಪತ್ರೆಗಳಿಗೆ ತೆರಳಬಹುದು. ಅದಕ್ಕೂ ಒಂದು ಕಂಡೀಶನ್ ಇದೆ. ಸರಕಾರಿ ಆಸ್ಪತ್ರೆಯಿಂದ ಚಿಕಿತ್ಸೆಗಾಗಿ ಅನುಮೋದನಾ ಪತ್ರವನ್ನು ಪಡೆದು ಅದನ್ನು ಖಾಸಗಿ ಆಸ್ಪತ್ರೆಗೆ ಸಲ್ಲಿಸಬೇಕು. ಸರಕಾರಿ ನೌಕರಶಾಹಿ ಜನರನ್ನು ಎಷ್ಟೊಂದು ಸತಾಯಿಸುತ್ತವೆಯೆಂದು ಎಲ್ಲರಿಗೂ ತಿಳಿದೇ ಇದೆ. ಅದಕ್ಕೂ ಮೊದಲು ನೀವು ಬಯಸುವ ಚಿಕಿತ್ಸೆ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಯೋಜನೆಯ ಪಟ್ಟಿಯಲ್ಲಿ ಒಳಗೊಂಡಿದೆಯೆಂಬುವುದನ್ನು ದೃಢಪಡಿಸಿಕೊಳ್ಳಬೇಕು. ಇಷ್ಟೆಲ್ಲಾ ಮುಗಿಯುವಾಗ ರೋಗಿ ಸತ್ತೇ ಹೋಗಿರುತ್ತಾನೆ. ಇಲ್ಲಿ ಸರಕಾರಗಳು ಇಂತಹ ಆರೋಗ್ಯ ಯೋಜನೆಗಳನ್ನು ಜನರ ಕಣ್ಣಿಗೆ ಮಣ್ಣೆರೆಚುವ ಉದ್ದೇಶದಿಂದ ಜಾರಿಗೊಳಿಸುತ್ತದೆಯೇ ಹೊರತು ಅದರಲ್ಲಿ ಯಾವುದೇ ಬದ್ಧತೆಯಿರುವುದಿಲ್ಲ. ಆರೋಗ್ಯರಂಗವನ್ನು ಸಂಪೂರ್ಣವಾಗಿ ರಾಷ್ಟ್ರೀಕರಣಗೊಳಿಸಿದರೆ ಮಾತ್ರ ಬಡ ರೋಗಿಗಳು ಬದುಕಿಕೊಳ್ಳಬಹುದೇನೋ. 

Writer - -ಹಾರಿಸ್ ನಂದಾವರ

contributor

Editor - -ಹಾರಿಸ್ ನಂದಾವರ

contributor

Similar News