ಬಿಜೆಪಿ ಸೇರಿದ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ: ಭೋಪಾಲದಿಂದ ಸ್ಪರ್ಧೆ ಸಾಧ್ಯತೆ

Update: 2019-04-17 09:49 GMT

ಭೋಪಾಲ್, ಎ.17: ತಾನು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆ ಸ್ಪರ್ಧಿಸಿ ಗೆಲ್ಲುವುದಾಗಿ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ. ಅವರು ಮಧ್ಯ ಪ್ರದೇಶದ ರಾಜಧಾನಿ ಭೋಪಾಲದಿಂದ ಸ್ಪರ್ಧಿಸಬಹುದೆಂಬ ನಿರೀಕ್ಷೆಯಿದೆ. ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

``ನಾನು ಔಪಚಾರಿಕವಾಗಿ ಬಿಜೆಪಿ ಸೇರಿದ್ದೇನೆ. ನಾನು ಚುನಾವಣೆ ಸ್ಪರ್ಧಿಸಿ ಖಂಡಿತವಾಗಿಯೂ ಗೆಲ್ಲುತ್ತೇನೆ. ಅದು ನನಗೆ ಕಷ್ಟವಾಗದು'' ಎಂದು ಭೋಪಾಲದಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿ ಸಂಸ್ಥೆಯೊಂದರ ಜತೆ ಮಾಆತನಾಡಿದ ಸಾಧ್ವಿ ಪ್ರಜ್ಞಾ ಹೇಳಿದರು. ಆಕೆ ಹಿರಿಯ ಪಕ್ಷ ನಾಯಕರಾದ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ರಾಮಲಾಲ್ ಅವರನ್ನು ಭೇಟಿಯಾಗಿದ್ದಾರೆಂದು ಹೇಳಲಾಗಿದೆ.

``ದೇಶದ ವಿರುದ್ಧ ಸಂಚು ಹೂಡುತ್ತಿರುವವರೆಲ್ಲರ ವಿರುದ್ಧ ನಾವೆಲ್ಲ ಜತೆಯಾಗಿ ಹೋರಾಡಿ ಅವರನ್ನು ಸೋಲಿಸೋಣ'' ಎಂದು ಹೇಳಿದ ಆಕೆ ತನ್ನನ್ನು ಸಿಕ್ಕಿಸಿ ಹಾಕುವ ಯತ್ನ ನಡೆಯತ್ತಿದೆ ಎಂದು ಆರೋಪಿಸಿದ್ದಾರೆ.

ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಸಾಧ್ವಿ ಪ್ರಜ್ಞಾ ಎಬಿವಿಪಿ ಹಾಗೂ ಅದರ ಮಹಿಳಾ ಘಟಕ ದುರ್ಗಾ ವಾಹಿನಿ ಜತೆ ನಂಟು ಹೊಂದಿದ್ದು, ಆಕೆಯ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯನ್ವಯದ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿದ್ದರೂ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯಿದೆಯನ್ವಯ ವಿಚಾರಣೆ ನಡೆಯುತ್ತಿದೆ.

ಏಳು ಜನರನ್ನು ಬಲಿ ಪಡೆದು ಸುಮಾರು 100 ಮಂದಿಯನ್ನು ಗಾಯಗೊಳಿಸಿದ್ದ ಸೆಪ್ಟೆಂಬರ್ 29, 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಜತೆ ಲೆ. ಕರ್ನಲ್ ಪ್ರಶಾಂತ್ ಶ್ರೀಕಾಂತ್ ಕಿಶೋರ್ ಕೂಡ ಆರೋಪ ಎದುರಿಸುತ್ತಿದ್ದು, ಇಬ್ಬರೂ ಜಾಮೀನಿನ ಮೇಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News