ಟಿಟಿವಿ ದಿನಕರನ್ ಆಪ್ತನ ಕಟ್ಟಡದ ಮೇಲೆ ಐಟಿ ದಾಳಿ: 1.48 ಕೋ. ರೂ. ಬೇನಾಮಿ ಹಣ ವಶಕ್ಕೆ

Update: 2019-04-17 15:28 GMT

ಚೆನ್ನೈ, ಎ.17: ಗುರುವಾರ ವಿಧಾನಸಭೆ ಉಪಚುನಾವಣೆ ನಡೆಯಲಿರುವ ಥೇನೀ ಜಿಲ್ಲೆಯ ಅಂಡಿಪಟ್ಟಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಟ್ಟಡವೊಂದರಲ್ಲಿ ಸಂಗ್ರಹಿಸಿಟ್ಟಿದ್ದ 1.48 ಕೋಟಿ ರೂ. ಬೇನಾಮಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಕಟ್ಟಡದಲ್ಲಿ ಟಿಟಿವಿ ದಿನಕರನ್ ಅವರ ಎಎಂಎಂಕೆ ಪಕ್ಷದ ಕಚೇರಿಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಣವನ್ನು 94 ಪ್ಯಾಕೆಟ್‌ಗಳಲ್ಲಿ ತುಂಬಿಸಿಡಲಾಗಿತ್ತು. ಪ್ಯಾಕೆಟ್‌ನ ಮೇಲೆ ವಾರ್ಡ್ ನಂಬರ್, ಮತದಾರರ ಸಂಖ್ಯೆ ಹಾಗೂ ಪ್ರತಿಯೊಬ್ಬ ಮತದಾರನಿಗೂ ತಲಾ 300 ರೂ.ಯಂತೆ ಲೆಕ್ಕ ಹಾಕಿ ಹಣ ತುಂಬಿಸಿಡಲಾಗಿದೆ. ಈ ಎಲ್ಲಾ ವಾರ್ಡ್‌ಗಳೂ ಅಂಡಿಪಟ್ಟಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು ಗುರುವಾರ ಮತದಾನ ನಡೆಯಲಿದೆ ಎಂದು ಆದಾಯ ತೆರಿಗೆ ಮಹಾ ನಿರ್ದೇಶಕ ಬಿ. ಮುರಳಿ ಕುಮಾರ್ ಹೇಳಿದ್ದಾರೆ.

ಈ ಕಟ್ಟಡವು ಎಎಂಎಂಕೆ ಪಕ್ಷದ ಕಾರ್ಯಕರ್ತನಿಗೆ ಸೇರಿದ್ದು ಇದೇ ಕಟ್ಟಡದ ನೆಲ ಅಂತಸ್ತಿನಲ್ಲಿ ಎಎಂಎಂಕೆ ಪಕ್ಷದ ಕಚೇರಿಯಿದೆ. ಇಲ್ಲಿ ಅಕ್ರಮ ಹಣದ ವ್ಯವಹಾರ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆಯ ಬಗ್ಗೆ ಸಿಬಿಡಿಟಿ ಮತ್ತು ಚುನಾವಣಾ ಆಯೋಗಕ್ಕೆ ವಿವರವಾದ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ದಿನಕರನ್ ನೇತೃತ್ವದ ಎಎಂಎಂಕೆ ಪಕ್ಷದ ಕಾರ್ಯಕರ್ತರು ಐಟಿ ಅಧಿಕಾರಿಗಳ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಅವರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಅಂಡಿಪಟ್ಟಿ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಹಂಚಲು 2 ಕೋಟಿ ರೂ. ನಗದು ಹಣವನ್ನು ಎಪ್ರಿಲ್ 16ರಂದು ತರಲಾಗಿದೆ ಎಂದು ಕಟ್ಟಡದಲ್ಲಿದ್ದ ಜನರು ತಿಳಿಸಿದ್ದು ಇವರ ಹೇಳಿಕೆಯನ್ನು ಐಟಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಗೆ ಅಡ್ಡಿಪಡಿಸಿದ ಎಎಂಎಂಕೆ ಕಾರ್ಯಕರ್ತರು ಅಧಿಕಾರಿಗಳನ್ನು ತಡೆದರು. ಅಲ್ಲದೆ ಬಲವಂತವಾಗಿ ಒಳನುಗ್ಗಿ ಅಲ್ಲಿದ್ದ ಕೆಲವು (ಹಣ ತುಂಬಿಸಿದ್ದ) ಪ್ಯಾಕೆಟ್‌ಗಳನ್ನು ಕಸಿದುಕೊಂಡು ಪರಾರಿಯಾದರು. ಬಳಿಕ ಅಲ್ಲಿ ಉಳಿದಿದ್ದ 94 ಪ್ಯಾಕೆಟ್(1.48 ಕೋಟಿ ರೂ.) ಹಣವನ್ನು ಅಧಿಕಾರಿಗಳು ಜಫ್ತಿ ಮಾಡಿಕೊಂಡರು.

 ಘಟನೆಗೆ ಸಂಬಂಧಿಸಿ ಎಎಂಎಂಕೆಯ ನಾಲ್ವರು ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಸ್ಥಳದಲ್ಲಿ ಎಎಂಎಂಕೆ ಅಭ್ಯರ್ಥಿಗೆ ಮತ ಚಲಾಯಿಸಿದ ಬಗ್ಗೆ ಅಂಚೆಮತ ಲಭಿಸಿದೆ . ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಧಾವಿಸಿದ್ದು ಹಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News