ನಮೋ ಟಿವಿ ಚುನಾವಣಾ ವಿಷಯ ಬಿತ್ತರಿಸುವಂತಿಲ್ಲ: ಚು.ಆಯೋಗ

Update: 2019-04-17 15:33 GMT

ಹೊಸದಿಲ್ಲಿ, ಎ.17: ಚುನಾವಣಾ ಕಾನೂನಿನಲ್ಲಿ ಹೇಳಿರುವಂತೆ ಬಿಜೆಪಿಯಿಂದ ಪ್ರಾಯೋಜಿತ ನಮೋ ಟಿವಿಯು ಚುನಾವಣೆಯ ನಿರ್ದಿಷ್ಟ ಹಂತದಲ್ಲಿ ಮತದಾನ ಅಂತ್ಯಗೊಳ್ಳುವ ಮೊದಲಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಚುನಾವಣಾ ವಿಷಯಗಳನ್ನು ತೋರಿಸುವಂತಿಲ್ಲ ಎಂದು ಚುನಾವಣಾ ಆಯೋಗವು ಆದೇಶಿಸಿದೆ.

ಪ್ರಸಕ್ತ ಲೋಕಸಭಾ ಚುನಾವಣೆಯ ಉಳಿದ ಆರು ಹಂತಗಳ ಪೈಕಿ ಪ್ರತಿಯೊಂದರಲ್ಲೂ ತನ್ನ ನಿರ್ದೇಶಗಳು ಪಾಲನೆಯಾಗುವಂತೆ ನೋಡಿಕೊಳ್ಳಲು ಆಯೋಗವು ರಾಷ್ಟ್ರಮಟ್ಟದಲ್ಲಿ ಪ್ರಸಾರವಾಗುವ ಟಿವಿ ವಾಹಿನಿಗಳು ಮತ್ತು ಅಂತಹುದೇ ವೇದಿಕೆಗಳಲ್ಲಿನ ರಾಜಕೀಯ ವಿಷಯಗಳನ್ನು ಪೂರ್ವ ಪ್ರಮಾಣೀಕರಿಸುವ ನೋಡಲ್ ಅಧಿಕಾರಿಯಾಗಿರುವ ದಿಲ್ಲಿಯ ಮುಖ್ಯ ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.

ನಿರ್ದಿಷ್ಟ ಮತಕ್ಷೇತ್ರದಲ್ಲಿ ಮತದಾನವು ಅಂತ್ಯಗೊಳ್ಳುವ ಮುನ್ನ 48 ಗಂಟೆಗಳ ಅವಧಿಯಲ್ಲಿ ಸಿನಿಮಾಟೋಗ್ರಫಿ,ಟಿವಿ ಮತ್ತು ಇಂತಹುದೇ ಇತರ ಸಾಧನಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ತೋರಿಸುವುದನ್ನು ಜನತಾ ಪ್ರಾತಿನಿಧ್ಯ ಕಾಯ್ದೆಯ ಕಲಂ 126 ನಿಷೇಧಿಸಿದೆ. ಈ ಹಂತವು ಮತದಾರರು ರಾಜಕೀಯ ಪ್ರಚಾರದ ಪ್ರಭಾವವಿಲ್ಲದೆ ತಾವು ಯಾರಿಗೆ ಮತ ಹಾಕಬೇಕು ಎನ್ನುವುದನ್ನು ನಿರ್ಧರಿಸಲು ಅವಕಾಶ ನೀಡುವುದರಿಂದ ಈ ೪೮ ಗಂಟೆಗಳನ್ನು ‘ಮೌನ ಅವಧಿ’ ಎಂದು ಕರೆಯಲಾಗುತ್ತದೆ.

ಕಲಂ 126 ಮುದ್ರಣ ಮಾಧ್ಯಮಗಳಿಗೆ ಅನ್ವಯಗೊಳ್ಳುವುದಿಲ್ಲ. ನಮೋ ಟಿವಿಗೆ ‘ಮೌನ ಅವಧಿ’ಯ ಅನ್ವಯತೆಯ ಕುರಿತು ಸ್ಪಷ್ಟಪಡಿಸಲು ಆಯೋಗವು ಈ ನಿರ್ದೇಶವನ್ನು ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News