ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಗೆ ಥಳಿತ: ಸೇನಾ ತಂಡದ ವಿರುದ್ಧ ದೂರು

Update: 2019-04-17 16:17 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ಎ.17: ದ.ಕಾಶ್ಮೀರದ ಕಾಜಿಗುಂಡದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದಾಗ ದೋರು ಉಪವಿಭಾಗಾಧಿಕಾರಿ ಗುಲಾಂ ರಸೂಲ್ ವಾನಿ ಮತ್ತು ಇತರ ನಾಲ್ವರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಪೊಲೀಸರು ಬುಧವಾರ ಸೇನಾ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

 ಚುನಾವಣಾ ಸಂಬಂಧಿತ ಸಭೆಗಾಗಿ ತಾನು ಇತರ ನಾಲ್ವರು ಅಧಿಕಾರಿಗಳೊಂದಿಗೆ ತನ್ನ ಕಚೇರಿ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಕಾಜಿಗುಂದದ ಉಜ್ರೂ ಬಳಿ ಸೇನೆಯ ತಂಡವೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ. ವಾಹನವನ್ನು ಹಾನಿಗೊಳಿಸಿ,ಚಾಲಕನನ್ನ್ನೂ ಥಳಿಸಿದೆ ಎಂದು ವಾನಿ ಮಂಗಳವಾರ ಆರೋಪಿಸಿದ್ದರು.

ಸೇನಾ ತಂಡವು ತನ್ನ ಚಾಲಕನನ್ನು ವಾಹನದಿಂದ ಹೊರಗೆಳೆದು ಥಳಿಸುತ್ತಿದ್ದಾಗ ಮಧ್ಯಪ್ರವೇಶಿಲು ಯತ್ನಿಸಿದ್ದ ತನ್ನನ್ನು ಕಾಲರ್ ಹಿಡಿದು ಹೊರಗೆಳೆದು ಥಳಿಸಲಾಗಿತ್ತು ಮತ್ತು ನಿಂದಿಸಲಾಗಿತ್ತು. ಬಂದೂಕುಗಳನ್ನು ತೋರಿಸಿ ತಮ್ಮನ್ನು ಕೊಲ್ಲುವ ಬೆದರಿಕೆ ಒಡ್ಡಲಾಗಿತ್ತು. ಅನಂತನಾಗ್ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ತಲುಪಿದ ಬಳಿಕವಷ್ಟೇ ತಮ್ಮನ್ನು ಬಿಡುಗಡೆಗೊಳಿಸಲಾಗಿತ್ತು ಎಂದು ವಾನಿ ಸೇನೆಗೂ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ನಿಯೋಜಿತ ಸೇನಾ ಸಿಬ್ಬಂದಿಗಳು ಎಲ್ಲ ನಾಗರಿಕ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದ್ದರು. ತಾನು ತನ್ನ ಪರಿಚಯವನ್ನು ಹೇಳಿಕೊಂಡಾಗ ಮುಂದೆ ಸಾಗಲು ಅವಕಾಶ ನೀಡಿದ್ದರು. ಆದರೆ ಮಾರ್ಗದಲ್ಲಿದ್ದ ಇನ್ನೊಂದು ಸೇನಾ ತಂಡವು ತಮ್ಮನ್ನು ಥಳಿಸಿತ್ತು ಎಂದೂ ಅವರು ತಿಳಿಸಿದ್ದಾರೆ.

ಪ್ರತಿ ಬುಧವಾರ ಮತ್ತು ರವಿವಾರ ಹೆದ್ದಾರಿಯಲ್ಲಿ ನಾಗರಿಕ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೇವಲ ಸೇನಾ ವಾಹನಗಳು ಮಾತ್ರ ಸಂಚರಿಸಬಹುದಾಗಿದೆ. ಮಂಗಳವಾರ ಹೆದ್ದಾರಿಯು ನಾಗರಿಕ ವಾಹನಗಳಿಗೆ ಮುಕ್ತವಾಗಿದ್ದರೂ ಸೇನಾ ವಾಹನಗಳ ಸಾಲು ಸಾಗಲು ಸಂಚಾರವನ್ನು ತಡೆಹಿಡಿಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News