9ನೇ ತರಗತಿಯ ಪಠ್ಯ ಪುಸ್ತಕದಿಂದ ಪ್ರಜಾಪ್ರಭುತ್ವದ ಪಠ್ಯ ಕೈಬಿಟ್ಟ ಎನ್‌ಸಿಇಆರ್‌ಟಿ !

Update: 2019-04-17 16:46 GMT

ಹೊಸದಿಲ್ಲಿ, ಎ. 17: ಎನ್‌ಸಿಇಆರ್‌ಟಿ 9ನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯ ಪುಸ್ತಕದ ‘ಸಮಕಾಲೀನ ಜಗತ್ತಿನಲ್ಲಿ ಪ್ರಜಾಪ್ರಭುತ್ವ’ ಎಂಬ ಸಂಪೂರ್ಣ ಅಧ್ಯಾಯವನ್ನು ಕೈಬಿಡುವ ಮೂಲಕ ಕೇಂದ್ರ ಸರಕಾರ ಹೊಸ ವಿವಾದ ಸೃಷ್ಟಿಸಿದೆ.

ಹಳೆಯ ಪಠ್ಯ ಪುಸ್ತಕದ ಮೊದಲನೇ ಅಧ್ಯಾಯವನ್ನು ಕೈಬಿಡಲಾಗಿದೆ. ಅದರ ಬದಲಿಗೆ ಎರಡನೇ ಅಧ್ಯಾಯವನ್ನು ಅಗತ್ಯದ ಬದಲಾವಣೆಯೊಂದಿಗೆ ಒಂದನೇ ಅಧ್ಯಾಯವನ್ನಾಗಿ ಮಾಡಲಾಗಿದೆ. ಆದರೆ, ಒಂದನೇ ಅಧ್ಯಾಯವನ್ನು ಕೈಬಿಟ್ಟಿರುವುದಕ್ಕೆ ಕಾರಣವನ್ನು ಹೊಸ ಪಠ್ಯ ಪುಸ್ತಕದಲ್ಲಿ ಉಲ್ಲೇಖಿಸಿಲ್ಲ. ಅಲ್ಲದೆ ಈ ಬಗ್ಗೆ ನಿರ್ಧಾರ ತೆಗೆದುಕೊಂಡ ಎನ್‌ಸಿಇಆರ್‌ಟಿ ಸಮಿತಿ ತಜ್ಞರನ್ನು ಒಳಗೊಂಡಿಲ್ಲ.

ಚುನಾವಣೆ ಸಂದರ್ಭ ಈ ಸ್ವೇಚ್ಛಾಚಾರ ಉತ್ತಮ ಸಂದೇಶವನ್ನು ರವಾನಿಸದು. ಅಲ್ಲದೆ, ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದ ಒಂದು ಅಧ್ಯಾಯವನ್ನು ಕೈಬಿಟ್ಟಿರುವುದು ಸಮಂಜಸವಲ್ಲ ಎಂದು ಎನ್‌ಸಿಇಆರ್‌ಟಿ ಸಲಹಾ ಸಮಿತಿಯ ಮುಖ್ಯಸ್ಥ, ಇತಿಹಾಸಕಾರ ಹರಿ ವಾಸುದೇವನ್ ತಿಳಿಸಿದ್ದಾರೆ.

 ಯುಪಿಎ ಸರಕಾರದ ಅವಧಿಯಲ್ಲಿ ಕೂಡ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಕೆಲವು ವ್ಯಂಗ್ಯಚಿತ್ರಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಪಾಲ್ಗೊಂಡ ತಜ್ಞರು ಹಾಗೂ ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಪುನರ್ ಪರಿಶೀಲನಾ ಸಮಿತಿ ರೂಪಿಸಲಾಗಿತ್ತು ಎಂದು ವಾಸುದೇವನ್ ತಿಳಿಸಿದ್ದಾರೆ.

ಇದುವರೆಗೆ ಯಾರೊಬ್ಬರೂ ಮಾಹಿತಿ ನೀಡದೇ ಇರುವುದು ಒಂದು ರೀತಿ ವಿಚಿತ್ರವಾದುದು. ಎನ್‌ಸಿಇಆರ್‌ಟಿ ಇಂದಿನ ದಿನಗಳಲ್ಲಿ ಲಭ್ಯವಿರುವ ಸ್ಕೈಪ್ ಹಾಗೂ ಇತರ ಮಾಧ್ಯಮಗಳ ಮೂಲಕ ಕರೆ ನೀಡಬಹುದಿತ್ತು. ಇದು ಅರ್ಧ ಗಂಟೆಯ ಕೆಲಸ ಎಂದು ವಾಸುದೇವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News