ಮೋದಿ ಅಥವಾ ಬ್ಯಾಂಕ್, ಇಬ್ಬರಲ್ಲಿ ಸುಳ್ಳು ಹೇಳುತ್ತಿರುವುದು ಯಾರು: ಮಲ್ಯ ಪ್ರಶ್ನೆ

Update: 2019-04-18 12:22 GMT

ಹೊಸದಿಲ್ಲಿ, ಎ.18: ತನ್ನ ಒಡೆತನದಲ್ಲಿದ್ದ ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ ಸಾವಿರಾರು ಕೋಟಿ ರೂ. ಬ್ಯಾಂಕ್ ಸಾಲ ಪಡೆದು ಅವುಗಳನ್ನು ತೀರಿಸದೆ ಇಂಗ್ಲೆಂಡಿಗೆ ಪಲಾಯನಗೈದಿರುವ ವಿಜಯ್ ಮಲ್ಯ ಗುರುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

‘‘ನಾನು ಸಾರ್ವಜನಿಕ ರಂಗದ ಬ್ಯಾಂಕುಗಳಿಗೆ ಪಾವತಿಸಲು ಬಾಕಿಯಿದೆಯೆನ್ನಲಾದ ರೂ 9,000 ಕೋಟಿಗಿಂತಲೂ ಹೆಚ್ಚು ಹಣವನ್ನು ಆಸ್ತಿ ಜಫ್ತಿ ಮೂಲಕ ಪಡೆಯಲಾಗಿದೆ ಎಂದು ಸ್ವತಃ ಪ್ರಧಾನಿಯೇ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ಅದೇ ಬ್ಯಾಂಕ್ ಇಂಗ್ಲೆಂಡ್ ನ್ಯಾಯಾಲಯಗಳಲ್ಲಿ ಬೇರೆಯೇ ಹೇಳುತ್ತಿದೆ. ಯಾರನ್ನು ನಂಬುವುದು ? ಇಬ್ಬರಲ್ಲಿ ಒಬ್ಬರು ಸುಳ್ಳು ಹೇಳುತ್ತಿದ್ದಾರೆ’’ ಎಂದು ಮಲ್ಯ ಟ್ವೀಟ್ ಮಾಡಿದ್ದಾರೆ.

ತಮ್ಮ ರೂ.14,000 ಕೋಟಿ ಮೌಲ್ಯದ ಆಸ್ತಿಯನ್ನು ಜಫ್ತಿಗೊಳಿಸಿರುವ ಬಗ್ಗೆ ಪ್ರಧಾನಿಯ ಹೇಳಿಕೆಗಳು ತಮ್ಮನ್ನು ಆರೋಪಗಳಿಂದ ಮುಕ್ತಗೊಳಿಸಿದೆ ಎಂದು ಮಲ್ಯ ಈ ಹಿಂದೆ ಕೂಡ ಹೇಳಿದ್ದರು.

ನಷ್ಟದಲ್ಲಿರುವ ಜೆಟ್ ಏರ್ ವೇಸ್ ತನ್ನ ಎಲ್ಲಾ ಕಾರ್ಯಾಚರಣೆಗಳನ್ನೂ ಸ್ಥಗಿತಗೊಳಿಸಿದ ಬೆನ್ನಲ್ಲೇ ಮಲ್ಯ ಹೇಳಿಕೆ ಬಂದಿದೆ. ಮಲ್ಯ ಅವರು ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯೆಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರಲ್ಲದೆ, ಸರಕಾರವು ಖಾಸಗಿ ವಿಮಾನಯಾನ ಸಂಸ್ಥೆಗಳ ಬಗ್ಗೆ ತಾರತಮ್ಯ ನಿಲುವು ಹೊಂದಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News