ನೆಹರೂರನ್ನು ಕೀಳಾಗಿಸಲು ಪಟೇಲ್ ಪ್ರತಿಮೆ ನಿರ್ಮಿಸಿಲ್ಲ: ಪ್ರಧಾನಿ ಮೋದಿ

Update: 2019-04-18 12:44 GMT

ಅಮ್ರೇಲಿ, ಎ.18: `ಪಂಡಿತ್ ನೆಹರೂ ಅವರನ್ನು ಕೀಳಾಗಿಸಲು' ತಾವು ಸರ್ದಾರ್ ಪಟೇಲ್ ಅವರ ಪ್ರತಿಮೆ ನಿರ್ಮಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುರುವಾರ ಗುಜರಾತ್ ನ ಅಮ್ರೇಲಿ ಎಂಬಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ವಿಪಕ್ಷದವರು ಪಟೇಲ್ ತಮ್ಮವರೆಂದು ಹೇಳಿಕೊಳ್ಳುತ್ತಿದ್ದರೂ ಅವರಲ್ಲಿ ಯಾರೂ ಸರ್ದಾರ್ ಪಟೇಲ್ ಅವರ ಏಕತೆಯ ಪ್ರತಿಮೆ ನೋಡಲು ಆಗಮಿಸಿಲ್ಲ ಎಂದರು.

“ಪಟೇಲ್ ಅವರ ಪ್ರತಿಮೆ ಅದೆಷ್ಟು ಎತ್ತರವಿದೆಯೆಂದರೆ ಇತರರನ್ನು ಸಣ್ಣದಾಗಿಸಲು ನೀವು ಹೆಚ್ಚು ಶ್ರಮ ಪಡಬೇಕಾಗಿಲ್ಲ'' ಎಂದು ಅವರು ಹೇಳಿದರು. ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಎಂದು ಗೂಗಲ್ ಸರ್ಚ್ ಮಾಡುವ ವೇಳೆ ಸರ್ದಾರ್ ಪಟೇಲ್ ಅವರ ಪ್ರತಿಮೆ ಹಾಗೂ ಗುಜರಾತ್ ಹೆಸರು  ನೋಡಲು ನಿಮಗೆ ಹೆಮ್ಮೆಯುಂಟಾಗುವುದೇ ಎಂದು ಮೋದಿ ಸಭಿಕರನ್ನು ಕೇಳಿದರು.

ಕಾಶ್ಮೀರದಲ್ಲಿ ಉಗ್ರವಾದವನ್ನು ಕೇವಲ ಎರಡೂವರೆ ಜಿಲ್ಲೆಗಳಿಗೆ ಸೀಮಿತಗೊಳಿಸಲು ಸರಕಾರ ಯಶಸ್ವಿಯಾಗಿದೆ ಎಂದ ಅವರು, ಕಾಶ್ಮೀರ ಸಮಸ್ಯೆಗೆ ಹಿಂದಿನ ಕಾಂಗ್ರೆಸ್ ನೇತೃತ್ವದ ನೀತಿಗಳೇ ಕಾರಣ ಎಂದು ದೂರಿದರು.

ಬಾಲಕೋಟ್ ವಾಯುದಾಳಿಯನ್ನು ಉಲ್ಲೇಖಿಸಿ, ಪಾಕಿಸ್ತಾನ ಈಗ ಎಂತಹ ಸ್ಥಿತಿಯಲ್ಲಿದೆಯೆಂದರೆ ನಮಗೆ ಫೋನ್ ಕರೆ ಸ್ವೀಕರಿಸುವಂತೆ ಗೋಗರೆಯುತ್ತಿದೆ. ``ಇದು ಮೋದಿ ಎಂದು ಅವರಿಗೆ ಮರೆತು ಹೋಗಿದೆ. ಪಾಕಿಸ್ತಾನ ಅಳುತ್ತಿರುವುದನ್ನು ನೀವು ಮೊದಲ ಬಾರಿ ನೋಡಿರಬಹುದು. ಫೋನ್ ಕರೆ ಸ್ವೀಕರಿಸಲು ಅವರು ಮೋದಿಗೆ ಗೋಗರೆಯುತ್ತಿದ್ದರು. ಪಾಕಿಸ್ತಾನವನ್ನು ಅಂತಹ ಪರಿಸ್ಥಿತಿಗೆ ತಂದಿದ್ದೇವೆ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News