ಹೆಲಿಕಾಪ್ಟರ್ ನಲ್ಲಿದ್ದ ಏನನ್ನು ಭಾರತ ನೋಡಬಾರದೆಂದು ಮೋದಿ ಬಯಸಿದ್ದಾರೆ: ಆಪ್ ಪ್ರಶ್ನೆ

Update: 2019-04-18 14:54 GMT

ಹೊಸದಿಲ್ಲಿ,ಎ.18: ಒಡಿಶಾದ ಸಂಬಲಪುರ ಲೋಕಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ಮುಹಮ್ಮದ್ ಮೊಹ್ಸಿನ್ ಅವರನ್ನು ಚುನಾವಣಾ ಆಯೋಗ(ಇಸಿ)ವು ಮುಂದಿನ ಆದೇಶದವರೆಗೆ ಅಮಾನತುಗೊಳಿಸಿರುವುದನ್ನು ಕಾಂಗ್ರೆಸ್ ಮತ್ತು ಆಪ್ ಪ್ರಶ್ನಿಸಿವೆ.

ಎ.16ರಂದು ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಬಲಪುರ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭ ಫ್ಲೈಯಿಂಗ್ ಸ್ಕ್ವಾಡ್ ತಂಡವೊಂದು ಅವರ ಹೆಲಿಕಾಪ್ಟರ್‌ನ್ನು ತಪಾಸಣೆಗೊಳಪಡಿಸಿದ್ದ ಹಿನ್ನೆಲೆಯಲ್ಲಿ ಆಯೋಗವು ಮೊಹ್ಸಿನ್ ಅವರನ್ನು ಅಮಾನತುಗೊಳಿಸಿ ಆದೇಶವನ್ನು ಹೊರಡಿಸಿದ್ದು,ಇದು ತಕ್ಷಣದಿಂದಲೇ ಜಾರಿಗೊಂಡಿತ್ತು.

ಎಸ್‌ಪಿಜಿ ರಕ್ಷಣೆಯಲ್ಲಿರುವ ಗಣ್ಯರ ಕುರಿತಂತೆ ನೀಡಲಾಗಿದ್ದ  ನಿರ್ದೇಶಗಳನ್ನು ಮೊಹ್ಸಿನ್ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರು ಕರ್ತವ್ಯಲೋಪವನ್ನೆಸಗಿರುವುದು ಮೇಲ್ನೋಟಕ್ಕೆ  ಕಂಡುಬಂದಿದೆ ಎಂದು ಆಯೋಗವು ಹೇಳಿತ್ತು.  

ಆಯೋಗದ ಕ್ರಮವನ್ನು ಟೀಕಿಸಿರುವ ಕಾಂಗ್ರೆಸ್,ಅಧಿಕಾರಿಯನ್ನು ಶಿಕ್ಷಿಸಲು ಅದು ಉಲ್ಲೇಖಿಸಿರುವ ನಿಯಮಗಳು ಪ್ರಧಾನಿಯವರ ವಾಹನಕ್ಕೆ  ಶೋಧ ಕಾರ್ಯಾಚರಣೆಯಿಂದ ವಿನಾಯಿತಿ ನೀಡುವುದಿಲ್ಲ ಎಂದು ಟ್ವೀಟಿಸಿದೆ.

ಭಾರತವು ನೋಡುವುದನ್ನು ಮೋದಿ ಬಯಸದ ಏನನ್ನು ಅವರು ಹೆಲಿಕಾಪ್ಟರ್‌ನಲ್ಲಿ ಸಾಗಿಸುತ್ತಿದ್ದರು ಎಂದು ಅದು ಪ್ರಶ್ನಿಸಿದೆ.

ಪ್ರಧಾನಿಯ ಹೆಲಿಕಾಪ್ಟರ್‌ನ್ನು  ತಪಾಸಣೆಗೊಳಪಡಿಸಿದ್ದಕ್ಕಾಗಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಚೌಕಿದಾರ ತನ್ನದೇ ಆದ ಸಂರಕ್ಷಿತ ಕವಚದಲ್ಲಿ ಬದುಕುತ್ತಿದ್ದಾರೆ. ಚೌಕಿದಾರರು ಏನನ್ನಾದರೂ ಬಚ್ಚಿಡಲು ಯತ್ನಿಸುತ್ತಿದ್ದಾರೆಯೇ ಎಂದು ಆಪ್ ಟ್ವೀಟ್‌ನಲ್ಲಿ ಪ್ರಶ್ನಿಸಿದೆ.

ಸಂಬಲಪುರ ಜಿಲ್ಲಾಧಿಕಾರಿ ಮತ್ತು ಡಿಐಜಿ ವರದಿಗಳ ಆಧಾರದಲ್ಲಿ ಆಯೋಗವು ಮೊಹ್ಸಿನ್ ವಿರುದ್ಧ ಕ್ರಮವನ್ನು ಕೈಗೊಂಡಿದೆ. ತಪಾಸಣೆಯಿಂದಾಗಿ ಮೋದಿ ಅವರು ಸುಮಾರು 15 ನಿಮಿಷಗಳ ಕಾಲ ಸಂಬಲಪುರದಲ್ಲಿ ತಡೆ ಹಿಡಿಯಲ್ಪಟ್ಟಿದ್ದರು ಎನ್ನಲಾಗಿದೆ.

ಚುನಾವಣಾ ಆಯೋಗದ ಕ್ರಮವನ್ನು ತೀವ್ರವಾಗಿ ಆಕ್ಷೇಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು,ಅದು ಈ ಮೂಲಕ ಯಾವ ಸಂದೇಶವನ್ನು ರವಾನಿಸಲು ಬಯಸಿದೆ ಎಂದು ಪ್ರಶ್ನಿಸಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News