ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿದ ಮುಖೇಶ್ ಅಂಬಾನಿ !

Update: 2019-04-18 15:06 GMT

ಮುಂಬೈ: ನರೇಂದ್ರ ಮೋದಿ ಸರಕಾರದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಮಾಡುತ್ತಿರುವ ಪ್ರಮುಖ ಆರೋಪಗಳಲ್ಲಿ ಅಗ್ರಸ್ಥಾನದಲ್ಲಿರುವುದು ರಫೇಲ್ ವ್ಯವಹಾರ ಮತ್ತು ಅನಿಲ್ ಅಂಬಾನಿ.  ರಫೆಲ್ ಹಗರಣದಲ್ಲಿ ಅನಿಲ್ ಅಂಬಾನಿಗೆ ಲಾಭ ಮಾಡಿಸಲು ಪ್ರಧಾನಿ ದೇಶದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂಬುದು ರಾಹುಲ್ ಗಾಂಧಿಯ ಪ್ರಮುಖ ಆರೋಪ . ಇನ್ನು ಮೋದಿ ಅಂಬಾನಿಯಂತಹ ಪ್ರಮುಖ ಬಂಡವಾಳಶಾಹಿಗಳಿಗೆ ಮಾತ್ರ ಉಪಕಾರ ಮಾಡುತ್ತಿದ್ದಾರೆ ಎಂಬುದು ಅವರ ಇನ್ನೊಂದು ದೂರು. 

ಆದರೆ ಇಲ್ಲೊಂದು ವಿಚಿತ್ರ ಬೆಳವಣಿಗೆಯಾಗಿದೆ. ಮುಂಬೈ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಿಲಿಂದ್ ದೇವ್ರಾ ಅವರಿಗೆ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ವಿಡಿಯೋ ಒಂದರಲ್ಲಿ ಮಾತನಾಡಿರುವ ಮುಖೇಶ್ " ಮಿಲಿಂದ್ ಗೆ ದಕ್ಷಿಣ ಮುಂಬೈಯ ಎಲ್ಲ ವಿಭಾಗಗಳ ಬಗ್ಗೆ ಆಳವಾದ ಜ್ಞಾನವಿದೆ. ಅವರು ಈ ಕ್ಷೇತ್ರಕ್ಕೆ ಅತ್ಯಂತ ಸೂಕ್ತ ವ್ಯಕ್ತಿ " ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ !

ಇದು ಈಗ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮೋದಿ ಅವರಿಗೆ ಅತ್ಯಂತ ಆಪ್ತ ಎಂದೇ ಪರಿಗಣಿಸಲಾದ ಮುಖೇಶ್ ಹೀಗೆ ಬಹಿರಂಗವಾಗಿ ಯಾವುದೇ ರಾಜಕಾರಣಿ ಪರ ವಕಾಲತ್ತು ವಹಿಸಿರುವುದು ಅತ್ಯಂತ ವಿರಳ. ಅದೂ ಚುನಾವಣಾ ಕಣದಲ್ಲಿರುವ, ತನ್ನ ಸೋದರನ ವಿರುದ್ಧ ಪ್ರತಿದಿನ ಕಿಡಿಕಾರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಗ್ಗೆ ಶಿಫಾರಸು ಮಾಡಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ. 

ಮಿಲಿಂದ್ ದೊಡ್ಡ ಉದ್ಯಮ ಕುಟುಂಬದಿಂದಲೇ ಬಂದವರು. ಅಂಬಾನಿ ಅಲ್ಲದೆ ಉದಯ್ ಕೋಟಕ್ ಸಹಿತ ಹಲವು ಉದ್ಯಮಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.  ಮುಂಬೈ ದಕ್ಷಿಣದಿಂದ ಶಿವಸೇನೆಯ ಹಾಲಿ ಸಂಸದ ಅರವಿಂದ್ ಸಾವಂತ್ ಕಣದಲ್ಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News