ಪಕ್ಷದ ಚಿಹ್ನೆಯೊಂದಿಗೆ ಮತಗಟ್ಟೆ ಪ್ರವೇಶಿಸಿದ ಬಿಜೆಪಿ ಸಂಸದನಿಗೆ ಗೃಹಬಂಧನದ ಶಿಕ್ಷೆ

Update: 2019-04-18 15:14 GMT

ಲಕ್ನೊ, ಎ.18: ಬುಲಂದ್‌ಶಹರ್ ಸಂಸದೀಯ ಕ್ಷೇತ್ರದ ಹಾಲಿ ಸಂಸದ ಭೋಲಾ ಸಿಂಗ್ ಬಿಜೆಪಿ ಪಕ್ಷದ ಚಿಹ್ನೆ ಇರುವ ಶಾಲನ್ನು ಹೊದ್ದುಕೊಂಡು ಮತಗಟ್ಟೆ ಪ್ರವೇಶಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವಂತೆಯೇ ಈ ಬಗ್ಗೆ

ಕ್ರಮ ಕೈಗೊಂಡಿರುವ ಬುಲಂದ್‌ಶಹರ್ ಜಿಲ್ಲಾಧಿಕಾರಿ , ಸಂಸದರನ್ನು 24 ಗಂಟೆ ಗೃಹಬಂಧನದಲ್ಲಿ ಇರಿಸುವಂತೆ ಸೂಚಿಸಿದ್ದಾರೆ.

ಪ್ರಕರಣದ ಬಗ್ಗೆ ಹೆಚ್ಚಿನ ವಿವರ ಒದಗಿಸುವಂತೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಆದೇಶಿಸಿದ್ದಾರೆ. ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಬುಲಂದ್‌ಶಹರ್ ಸಹಿತ ಉತ್ತರಪ್ರದೇಶದ ಎಂಟು ಸ್ಥಾನಗಳಿಗೆ ಗುರುವಾರ ಮತದಾನ ನಡೆದಿದೆ. ಬೆಳಿಗ್ಗೆ ಬಿಜೆಪಿ ಚಿಹ್ನೆಯಿದ್ದ ಶಾಲನ್ನು ಹೊದ್ದುಕೊಂಡು ಮತದಾನ ಕೇಂದ್ರಕ್ಕೆ ಬಂದ ಭೋಲಾ ಸಿಂಗ್‌ರನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಆದರೆ ಬಳಿಕ ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಸಿಂಗ್‌ರನ್ನು ಮತದಾನ ಕೇಂದ್ರದ ಒಳಗೆ ಬಿಡಲಾಗಿದೆ ಎಂದು ವರದಿಯಾಗಿದೆ. ಕಮಲದ ಚಿಹ್ನೆ ಇದ್ದ ಕೇಸರಿ ಶಾಲನ್ನು ಹೊದ್ದುಕೊಂಡು ಮತಗಟ್ಟೆಯೊಳಗೆ ಸಿಂಗ್ ಪ್ರವೇಶಿಸಿದ ಘಟನೆಯ ವೀಡಿಯೊ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಬಳಿಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News