82.11ಕೋ.ರೂ.ಮೌಲ್ಯದ 146.89 ಕೆ.ಜಿ ಚಿನ್ನಾಭರಣ ವಶಪಡಿಸಿಕೊಂಡ ಈ.ಡಿ.

Update: 2019-04-18 17:18 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.18: ನೋಟು ನಿಷೇಧದ ನಂತರದ ಅಕ್ರಮ ಹಣ ವಹಿವಾಟು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಚಿನ್ನಾಭರಣ ವ್ಯಾಪಾರಿ ಮತ್ತು ಆತನ ಸಹವರ್ತಿಗಳ ಮಳಿಗೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಜಾರಿ ನಿರ್ದೇಶನಾಲಯ(ಈ.ಡಿ)ವು 82.11 ಕೋ.ರೂ.ಮೌಲ್ಯದ 146.89 ಕೆ.ಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಕಳೆದ ಕೆಲವು ದಿನಗಳಲ್ಲಿ ಮುಸದ್ದಿಲಾಲ್ ಜ್ಯುವೆಲರ್ಸ್‌ನ ಹೈದರಾಬಾದ್ ಮತ್ತು ವಿಜಯವಾಡಾ ಶೋರೂಮ್‌ಗಳು,ಅದರ ಪ್ರವರ್ತಕ ಕೈಲಾಷ ಗುಪ್ತಾ,ಬಾಲಾಜಿ ಗೋಲ್ಡ್ ಮತ್ತು ಅದರ ಪಾಲುದಾರ ಪವನ್ ಅಗರವಾಲ್,ಅಷ್ಟಲಕ್ಷ್ಮಿ ಗೋಲ್ಡ್ ಮತ್ತು ಅದರ ಮಾಲಿಕ ನೀಲ್ ಸುಂದರ ಥರದ್ ಹಾಗೂ ಚಾರ್ಟ್‌ರ್ಡ್ ಅಕೌಂಟಂಟ್ ಸಂಜಯ ಸಾದ್ರಾ ಅವರ ವಿರುದ್ಧ ದಾಳಿ ಕಾರ್ಯಾಚರಣೆಗಳನ್ನು ನಡೆಸಲಾಗಿತ್ತು ಎಂದು ಈ.ಡಿ.ಹೇಳಿದೆ.

ಭಾರೀ ಮೊತ್ತದ ಕಪ್ಪುಹಣವನ್ನು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡುವ ಮೂಲಕ ನೋಟು ನಿಷೇಧ ಯೋಜನೆಯನ್ನು ರಾಜಾರೋಷವಾಗಿ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ತೆಲಂಗಾಣ ಪೊಲೀಸರ ಎಫ್‌ಐಆರ್ ಮತ್ತು ಆದಾಯ ತೆರಿಗೆ ಇಲಾಖೆಯ ದೂರಿನ ಆಧಾರದಲ್ಲಿ ಈ ಜನರ ವಿರುದ್ಧ ಈ.ಡಿ.ಅಕ್ರಮ ಹಣ ವಹಿವಾಟಿನ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಇದಕ್ಕಾಗಿ ಆರೋಪಿಗಳು ಪಾನ್ ವಿವರಗಳನ್ನು ಸಲ್ಲಿಸುವುದನ್ನು ನಿವಾರಿಸಲು ಎರಡು ಲ.ರೂ.ಗೂ ಕಡಿಮೆ ಮೊತ್ತದ ಸುಮಾರು 5,200 ಅಡ್ವಾನ್ಸ್ ಸೇಲ್ ಬಿಲ್‌ಗಳನ್ನು 2016,ನ.8ರ ಹಿಂದಿನ ದಿನಾಂಕದೊಂದಿಗೆ ಅಕ್ರಮವಾಗಿ ಸೃಷ್ಟಿಸಿದ್ದರು ಎಂದು ಈ.ಡಿ.ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News