ಮುಸ್ಲಿಂ ವಿರೋಧಿ ಹೇಳಿಕೆ: ಕೇರಳ ಬಿಜೆಪಿ ಅಧ್ಯಕ್ಷರ ವಿರುದ್ಧ ಪ್ರಕರಣ ದಾಖಲು

Update: 2019-04-18 16:46 GMT

ತಿರುವನಂತಪುರ,ಎ.18: ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಸಿಪಿಎಂ ನಾಯಕ ವಿ.ಸಿವನ್‌ಕುಟ್ಟಿ  ಅವರ ದೂರಿನ ಮೇರೆಗೆ ಐಪಿಸಿಯ ಕಲಂ 153 ಮತ್ತು 153 ಎ ಅಡಿ ಈ ಪ್ರಕರಣ ದಾಖಲಾಗಿದೆ.

ಎ.14ರಂದು ತಿರುವನಂತಪುರ ಜಿಲ್ಲೆಯ ಅಟ್ಟಿಂಗಾಲ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶೋಭಾ ಸುರೇಂದ್ರನ್ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪಿಳ್ಳೈ, ಬಾಲಕೋಟ್ ವಾಯುದಾಳಿಯನ್ನು ಪ್ರಸ್ತಾಪಿಸಿ ಮುಸ್ಲಿಂ ಸಮುದಾಯದ ವಿರುದ್ಧ ಕೆಲವು ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕೇರಳದ ಮುಖ್ಯ ಚುನಾವಣಾಧಿಕಾರಿ ಟೀಕಾರಾಮ ಮೀನಾ ಅವರು ಈ ಟೀಕೆಗಳಿಗಾಗಿ ಪಿಳ್ಳೈ ವಿರುದ್ಧ  ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ.

ಬಾಲಾಕೋಟ್ ವಾಯುದಾಳಿಯಲ್ಲಿ ಸತ್ತವರ ಸಂಖ್ಯೆಯ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಎತ್ತಿದ್ದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದ ಸಂದರ್ಭ ಪಿಳ್ಳೈ ಈ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಮೀನಾ ತಿಳಿಸಿದರು.

ಅಟ್ಟಿಂಗಾಲ್‌ನಲ್ಲಿ ಬಿಜೆಪಿ ಸಭೆಗೆ ಅನುಮತಿಯನ್ನು ಪಡೆದುಕೊಂಡಿರಲಿಲ್ಲ ಮತ್ತು ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮೀನಾ ತನ್ನ ಎ.16ರ ವರದಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News