ಎರಡನೆ ಹಂತ: ಶೇ.66ರಷ್ಟು ಮತದಾನ

Update: 2019-04-18 16:53 GMT

ಹೊಸದಿಲ್ಲಿ,ಎ.18: ಲೋಕಸಭೆಗೆ ಮಂಗಳವಾರ ನಡೆದ  ಎರಡನೆ ಹಂತದ ಚುನಾವಣೆಯಲ್ಲಿ ದೇಶಾದ್ಯಂತ 11 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ಸೇರಿದಂತೆ ಒಟ್ಟು 95 ಕ್ಷೇತ್ರಗಳಲ್ಲಿ ಮತದಾನವಾಗಿದ್ದು, 66 ಶೇಕಡಕ್ಕೂ ಅಧಿಕ ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಣದಲ್ಲಿದ್ದ 1606 ಅಭ್ಯರ್ಥಿಗಳ ಭವಿಷ್ಯ ಇಂದು  ಇವಿಎಂ ಮತಯಂತ್ರಗಳನ್ನು ಸೇರಿದೆ.

ಪಶ್ಚಿಮಬಂಗಾಳ  ಹಾಗೂ ಶ್ರೀನಗರದಲ್ಲಿ    ನಡೆದ ಹಿಂಸಾಚಾರದ ಘಟನೆಗಳನ್ನು ಉಳಿದೆಡೆ ಮತದಾನ ಬಹುತೇಕ ಶಾಂತಿಯುತ ವಾಗಿತ್ತೆಂದು ವರದಿಗಳು ತಿಳಿಸಿವೆ.

ಪಶ್ಚಿಮ ಬಂಗಾಳದಲ್ಲಿ ಗರಿಷ್ಠ 75.27 ಶೇಕಡ ಮತದಾನವಾಗಿದ್ದರೆ, ಜಮ್ಮುಕಾಶ್ಮೀರದಲ್ಲಿ ಕನಿಷ್ಠ ಶೇ.43.37 ಶೇಕಡ ಮತದಾನವಾಗಿದೆ.

ತಮಿಳುನಾಡಿನ 38, ಕರ್ನಾಟಕದ 14, ಮಹಾರಾಷ್ಟ್ರದ 10, ಉತ್ತರ ಪ್ರದೇಶದ 8, ಅಸ್ಸಾಂ, ಬಿಹಾರ ಹಾಗೂ ಒಡಿಶಾಗಳಲ್ಲಿ ತಲಾ 5, ಚತ್ತೀಸ್‌ಗಢ ಹಾಗೂ ಪಶ್ಚಿಮಬಂಗಾಳದ ತಲಾ ಮೂರು, ಜಮ್ಮುಕಾಶ್ಮೀರದ ಎರಡು ಹಾಗೂ ಮಣಿಪುರ ಮತ್ತು ಪುದುಚೇರಿಯ ತಲಾ 1 ಸ್ಥಾನಗಳಿಗೆ ಇಂದು ಮತದಾನ ನಡೆಯಿತು.

 ಪಶ್ಚಿಮಬಂಗಾಳದ ರಾಯ್‌ಗಂಜ್ ಕ್ಷೇತ್ರದ ಇಸ್ಲಾಂಪುರದಲ್ಲಿ ಹಾಲಿ ಸಂಸದ ಹಾಗೂ ಸಿಪಿಎಂ ಅಭ್ಯರ್ಥಿ ಮುಹಮ್ಮದ್ ಸಲೀಂ ಅವರ ಮೇಲೆ ಟಿಎಂಸಿ ಕಾರ್ಯಕರ್ತರೆನ್ನಲಾದವರ ಗುಂಪೊಂದು ದಾಳಿ ನಡೆಸಿದೆ.ನಕಲಿ ಮತದಾನ ನಡೆಯುತ್ತಿರುವ ಬಗ್ಗೆ ವರದಿಗಳು ಬಂದ ಹಿನ್ನೆಲೆಯಲ್ಲಿ ಮತಗಟ್ಟೆಯೊಂದಕ್ಕೆ ಪರಿಶೀಲನೆ ನಡೆಸಲು ತೆರಳಿದ ಸಲೀಂ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆಯೆಂದು ವರದಿಗಳು ತಿಳಿಸಿವೆ.

ಜಮ್ಮುಕಾಶ್ಮೀರದ ರಾಜಧಾನಿ ಶ್ರೀನಗರದ  ಮತಗಟ್ಟೆಯೊಂದರ ಬಳಿ ದುಷ್ಕರ್ಮಿಗಳ ಕಲ್ಲೆಸೆತದಿಂದಾಗಿ ಓರ್ವ ಪೊಲೀಸ್ ಗಾಯಗೊಂಡಿ ದ್ದಾರೆ. ಶ್ರೀನಗರದ ವಿವಿಧ ಮತಗಟ್ಟೆಗಳಲ್ಲಿ ನೀರಸ ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಲೋಕಸಭಾ ಚುನಾವಣೆಯನ್ನು ಬಹಿಷ್ಕರಿ ಸುವಂತೆ ಜಮ್ಮುಕಾಶ್ಮೀರದ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದರು.

ಇದನ್ನು ಹೊರತುಪಡಿಸಿ ಉಳಿದೆಡೆ ಮತದಾನವು ಬಹುತೇಕ ಶಾಂತಿಯುತವಾಗಿತ್ತು. ಆದರೆ ಅಸ್ಸಾಂ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ಕೆಲವು ಮತಗಟ್ಟೆಗಳಲ್ಲಿ ಇವಿಎಂ ಮತಯಂತ್ರಗಳಲ್ಲಿ ತಾಂತ್ರಿಕ ಲೋಪ ಕಂಡುಬಂದಿದ್ದರಿಂದ ಮತದಾನ ತುಸು ಹೊತ್ತು ಸ್ಥಗಿತಗೊಂಡಿತ್ತೆಂದು ವರದಿಗಳು ತಿಳಿಸಿವೆ.

ತಮಿಳುನಾಡಿನ  39 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಿಗೆ ಇಂದು ಬಿರುಸಿನ ಮತದಾನ ನಡೆಯಿತು. ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿಯ ಬಂಧುಗಳ ಮನೆಯಲ್ಲಿ ಅಪಾರ ಪ್ರಮಾಣದ ಅಕ್ರಮ ಹಣ ಪತ್ತೆಯಾದ ಬಳಿಕ ಚುನಾವಣೆಯನ್ನು ಮುಂದೂಡಲಾಗಿದೆ.

ತಮಿಳುನಾಡಿನಲ್ಲಿ ಉಪಚುನಾವಣೆಯನ್ನೆದುರಿಸುತ್ತಿರುವ 18 ವಿಧಾನಸಭಾ ಕ್ಷೇತ್ರಗಳಿಗೂ  ಇಂದು ಮತದಾನ ನಡೆದಿದೆ.

ಒಡಿಶಾದಲ್ಲಿ ಮತದಾನ ಆರಂಭದಲ್ಲಿ ನೀರಸವಾಗಿತ್ತಾಗಿದರೂ, ಮಧ್ಯಾಹ್ನದ ವೇಳೆಗೆ ಬಿರುಸುಗೊಂಡಿತು. ವಿಧಾನಸಭಾ ಚುನಾವಣೆಗೂ ತೆರಳಿರುವ ಒಡಿಶಾದಲ್ಲಿ  5 ಲೋಕಸಭಾ ಕ್ಷೇತ್ರಗಳ ಜೊತೆಗೆ 35 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ನಡೆಯಿತು. ಇಲ್ಲಿ ಆಡಳಿತಾರೂಢ ಬಿಜೆಡಿ ಹಾಗೂ ಬಿಜೆಪಿ ಮಧ್ಯೆ ತೀವ್ರ ಸ್ಪರ್ಧೆಯೇರ್ಪಟ್ಟಿದೆ.

 ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಇಂದು ಐದು ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಮೂಲಭೂತ ಸೌಲಭ್ಯಗಳಿಂದ  ವಂಚಿತರಾಗಿ ದ್ದೇವೆಂದು ಆರೋಪಿಸಿ ಈ ಐದೂ ಕ್ಷೇತ್ರಗಳಲ್ಲಿ 12ಕ್ಕೂ ಅಧಿಕ ಗ್ರಾಮಗಳ ಜನರು ಮತದಾನವನ್ನು ಬಹಿಷ್ಕರಿಸಿದ್ದರು.

ಉತ್ತರಪ್ರದೇಶದಲ್ಲಿ ಮಥುರಾ, ಹತ್ರಾಸ್, ಅಮ್ರೋಹಾ ಸೇರಿದಂತೆ ಎಂಟು ಕ್ಷೇತ್ರಗಳಲ್ಲಿ ಇಂದು ಮತದಾನ ನಡೆದಿದೆ. ತ್ರಿಪುರದ ಖೊವೈ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ರಾಜವಂಶಸ್ಥೆ ಪ್ರಗ್ಯಾ ದೇವ್ ಬರ್ಮನ್ ಅವರಿದ್ದ ವಾಹನಸಾಲಿನ ಮೇಲೆ ಕಲ್ಲುತೂರಾಟವಾಗಿದೆ. ಘಟನೆಗೆ ಸಂಬಂಧಿಸಿ ಆಡಳಿತಾರೂಢ ಬಿಜೆಪಿ  ಮೈತ್ರಿಕೂಟದ ಪಾಲುದಾರ ಪಕ್ಷವಾದ ಐಪಿಎಫ್‌ಟಿಯ ಬೆಂಬಲಿಗನೊಬ್ಬನನ್ನು ಬಂಧಿಸಲಾಗಿದೆ.

ಇದು ನಡೆದ ಚುನಾವಣೆಯಲ್ಲಿ  ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್, ಜುವಾಲ್ ಒರಂ ,ಸದಾನಂದ ಗೌಡ ಹಾಗೂ ಪೊನ್ ರಾಧಾಕೃಷ್ಣನ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಿಎಂಕೆ ನಾಯಕಿ ಕನಿಮೋಳಿ, ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News