4 ರಾಜ್ಯಗಳಲ್ಲಿ ಮಳೆಯ ಆರ್ಭಟ: ಮೃತರ ಸಂಖ್ಯೆ 53ಕ್ಕೆ ಏರಿಕೆ

Update: 2019-04-18 17:06 GMT

ಅಹ್ಮದಾಬಾದ್, ಎ.18: ರಾಜಸ್ತಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಬುಧವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 53 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕಾಲಿಕ ಮಳೆಯಿಂದ ಅತ್ಯಂತ ಹೆಚ್ಚು ನಾಶ ನಷ್ಟಕ್ಕೊಳಗಾದ ರಾಜಸ್ತಾನದಲ್ಲಿ 25 ಮಂದಿ, ಮಧ್ಯಪ್ರದೇಶದಲ್ಲಿ 15, ಗುಜರಾತ್‌ನಲ್ಲಿ 10 ಮತ್ತು ಮಹಾರಾಷ್ಟ್ರದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು ಮಳೆ ಸಂಬಂಧಿ ದುರ್ಘಟನೆಯಲ್ಲಿ ಹಲವು ಜಾನುವಾರುಗಳು ಸಾವನ್ನಪ್ಪಿವೆ.

 ಪಂಜಾಬ್ ಮತ್ತು ಹರ್ಯಾನದಲ್ಲೂ ವ್ಯಾಪಕ ಮಳೆಯಾಗಿದ್ದು ಬೆಳೆಗಳಿಗೆ ಹಾನಿಯಾಗಿದೆ. ಬೆಳೆಹಾನಿ ಮತ್ತು ನಷ್ಟದ ಪ್ರಮಾಣವನ್ನು ತಕ್ಷಣ ಖಚಿತಪಡಿಸಿಕೊಂಡು ಸಂತ್ರಸ್ತ ರೈತರಿಗೆ ಶೀಘ್ರ ಪರಿಹಾರ ಪಾವತಿಗೆ ವ್ಯವಸ್ಥೆ ಮಾಡುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಮಧ್ಯೆ, ಪ್ರಧಾನಿ ಮೋದಿ ಗುಜರಾತ್ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದಾರೆ ಎಂಬ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್ ಆಕ್ಷೇಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಮಳೆ ಮತ್ತು ಬಿರುಗಾಳಿಯಿಂದಾದ ಹಾನಿಯ ವಿಷಯದಲ್ಲೂ ರಾಜಕೀಯ ಮಾಡಬೇಡಿ. ಪ್ರಾಕೃತಿಕ ವಿಪತ್ತು ಸಂಭವಿಸಿದಾಗ ಮೊದಲು ರಾಜ್ಯ ಸರಕಾರಗಳು ರಾಜ್ಯದಲ್ಲಿ ಆಗಿರುವ ನಾಶ ನಷ್ಟದ ಬಗ್ಗೆ ವಿವರ ನೀಡುವ ಪದ್ದತಿಯಿದೆ. ಆದರೆ ಇದನ್ನು ಮಾಡದ ಕಮಲನಾಥ್, ಇಲ್ಲೂ ರಾಜಕೀಯ ಮಾಡಲು ಹೊರಟಿರುವುದು ದುರದೃಷ್ಟಕರ ಎಂದು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News