ಒಂದು ದಿನ ವಿಳಂಬವಾಗಿ ಇವಿಎಂ ಮರಳಿಸಿದ ಚುನಾವಣಾಧಿಕಾರಿ

Update: 2019-04-18 17:14 GMT

ಅಮರಾವತಿ,ಎ.18: ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ಎ.11ರಂದು ನಡೆದಿದ್ದ ಮತದಾನದಲ್ಲಿ ಬಳಕೆಯಾಗಿದ್ದ  ಇವಿಎಂ ಯಂತ್ರವನ್ನು ಚುನಾವಣಾಧಿಕಾರಿ ಒಂದು ದಿನ ವಿಳಂಬವಾಗಿ ಮರಳಿಸಿದ ಘಟನೆ ಬೆಳಕಿಗೆ ಬಂದಿದೆ. ಮತದಾನ ಮುಗಿದ ಬಳಿಕ ತಾನು ಮತ್ತು ತನ್ನ ತಂಡದ ಸದಸ್ಯರು ನಿದ್ರೆಯಲ್ಲಿ ಮುಳುಗಿದ್ದರಿಂದ ಇವಿಎಂ ಅನ್ನು ಮರಳಿಸಲು ವಿಳಂಬವಾಗಿದೆ ಎಂಬ ಸಮಜಾಯಿಷಿಯನ್ನು ಈ ಅಧಿಕಾರಿ ನೀಡಿದ್ದಾರೆ.

ಪೆನಮಲೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಮತದಾನದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದರಿಂದ ಮತದಾನಕ್ಕೆ ಮೊದಲು ಮೂರು ದಿನಗಳ ಕಾಲ ತನ್ನ ತಂಡವು ಸರಿಯಾಗಿ ನಿದ್ರಿಸಿರಲಿಲ್ಲ ಎಂದು ವಿವರಿಸಿದ್ದಾರೆ.

303 ಮತಗಟ್ಟೆಗಳನ್ನು ಹೊಂದಿದ್ದ ಈ ಕ್ಷೇತ್ರದಲ್ಲಿ ಕೆಲವೆಡೆ ಇವಿಎಮ್‌ಗಳಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ಮತದಾನವು ಎ.11ರಂದು ತಡರಾತ್ರಿಯವರೆಗೂ ನಡೆದಿತ್ತು. ಕನೂರು ಮತ್ತು ವಣುಕುರುವಿನ ತಲಾ ಒಂದು ಮತ್ತು ಯನಮಲಕುದುರಿನ ಎರಡು ಮತಗಟ್ಟೆಗಳು ಇವುಗಳಲ್ಲಿ ಸೇರಿದ್ದವು.

ನಿಗದಿತ ಪದ್ಧತಿಯಂತೆ ಇವಿಎಮ್‌ಗಳು ಅಂದೇ ರಾತ್ರಿ ಕೃಷ್ಣಾ ವಿವಿ ಕ್ಯಾಂಪಸ್‌ನಲ್ಲಿಯ ಭದ್ರತಾ ಕೊಠಡಿಯನ್ನು ಸೇರಬೇಕಿತ್ತು. ಆದರೆ ಈ ಇವಿಎಂ ಮಾತ್ರ ಎ.12ರಂದು ತಡಸಂಜೆ ಅಲ್ಲಿಗೆ ತಲುಪಿತ್ತು. ಇದು ಸ್ಥಳೀಯ ವಿಧಾನಸಭಾ ಮತ್ತು ಲೋಕಸಭಾ ವೀಕ್ಷಕರಿಗೆ ಆಘಾತವನ್ನುಂಟು ಮಾಡಿತ್ತು. ಆಯಾಸದಿಂದ ತಾವು ಗಾಢನಿದ್ರೆಯಲ್ಲಿದ್ದೆವು ಎಂದು ಚುನಾವಣಾಧಿಕಾರಿ ವಿವರಿಸಿದ್ದ. ಅಧಿಕಾರಿಗಳು ನಂತರ ಇವಿಎಂ ಅನ್ನು ಸ್ವೀಕರಿಸಿ ಅದನ್ನು ಭದ್ರತಾ ಕೊಠಡಿಯಲ್ಲಿರಿಸಿದ್ದರು.

ಆಂಧ್ರಪ್ರದೇಶದ  ಮುಖ್ಯ ಚುನಾವಣಾಧಿಕಾರಿ ಗೋಪಾಲಕೃಷ್ಣ  ದ್ವಿವೇದಿ ಅವರು ವಿಳಂಬದ ಕುರಿತು ವರದಿಯನ್ನು ಸಲ್ಲಿಸುವಂತೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News