ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಗಡಿ ವ್ಯಾಪಾರ ಅಮಾನತು

Update: 2019-04-18 17:20 GMT

ಹೊಸದಿಲ್ಲಿ,ಎ.18: ಕೇಂದ್ರ ಸರಕಾರವು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದೊಂದಿಗಿನ ಗಡಿ ವ್ಯಾಪಾರವನ್ನು ಗುರುವಾರ ಮಧ್ಯರಾತ್ರಿಯಿಂದ ಅಮಾನತುಗೊಳಿಸಲಿದೆ. ಪಾಕಿಸ್ತಾನದಲ್ಲಿನ ಕೆಲವು ಶಕ್ತಿಗಳು ಅಕ್ರಮ ಶಸ್ತ್ರಾಸ್ತ್ರಗಳು,ಮಾದಕ ದ್ರವ್ಯಗಳು ಮತ್ತು ನಕಲಿ ನೋಟುಗಳನ್ನು ಸಾಗಿಸಲು ಗಡಿ ವ್ಯಾಪಾರವನ್ನು ಭಾರೀ ಪ್ರಮಾಣದಲ್ಲಿ ದುರುಪಯೋಗ ಮಾಡಿಕೊಳ್ಳುತ್ತಿವೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಂಡಿರುವುದಾಗಿ ಗೃಹ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಜಮ್ಮು-ಕಾಶ್ಮೀರದಲ್ಲಿಯ ನಿಯಂತ್ರಣ ರೇಖೆಯ ಇಕ್ಕೆಲಗಳ ಸ್ಥಳೀಯರ ನಡುವೆ ಸಾಮಾನ್ಯ ಬಳಕೆಯ ವಸ್ತುಗಳ ವಿನಿಮಯಕ್ಕೆ ಅನುಕೂಲ ಕಲ್ಪಿಸುವುದು ಗಡಿ ವ್ಯಾಪಾರದ ಉದ್ದೇಶವಾಗಿದೆ. ಬಾರಾಮುಲ್ಲಾ ಜಿಲ್ಲೆಯ ಸಲಾಮಬಾದ್ ಮತ್ತು ಪೂಂಛ್ ಜಿಲ್ಲೆಯ ಚಾಕನ್-ದಾ-ಬಾಘ್‌ನಲ್ಲಿ ಸ್ಥಾಪಿಸಲಾಗಿರುವ ಎರಡು ವ್ಯಾಪಾರ ಕೇಂದ್ರಗಳ ಮೂಲಕ ಈ ಗಡಿ ವ್ಯಾಪಾರವು ವಾರದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿತ್ತು. ಇಲ್ಲಿ ವ್ಯಾಪಾರಕ್ಕೆ ಯಾವುದೇ ಶುಲ್ಕವನ್ನು ವಿಧಿಸಲಾಗುತ್ತಿರಲಿಲ್ಲ ಮತ್ತು ಅದು ವಸ್ತುಗಳ ವಿನಿಮಯ ಪದ್ಧತಿಯ ಆಧಾರದಲ್ಲಿ ನಡೆಯುತ್ತಿತ್ತು.

ವ್ಯಾಪಾರದ ಸ್ವರೂಪವು ಹೆಚ್ಚಿನಂಶ ಮೂರನೇ ಪಾರ್ಟಿ ವ್ಯಾಪಾರಕ್ಕೆ ಪರಿವರ್ತನೆಗೊಂಡಿರುವುದು ಮತ್ತು ವಿದೇಶಗಳು ಸೇರಿದಂತೆ ಇತರ ಪ್ರದೇಶಗಳ ಉತ್ಪನ್ನಗಳು ಗಡಿ ವ್ಯಾಪಾರದಲ್ಲಿ ನುಸುಳಿಕೊಂಡಿರುವುದನ್ನು ಸಹ ಸರಕಾರದ ಗಮನಕ್ಕೆ ತರಲಾಗಿತ್ತು. ನೀತಿಬಾಹಿರ ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ಗಡಿ ವ್ಯಾಪಾರದ ಸೋಗಿನಲ್ಲಿ ಹವಾಲಾ ಹಣ,ಮಾದಕ ದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದವು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಗಡಿ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಹೆಚ್ಚಿನವರು ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ನಿಕಟವಾಗಿ ಗುರುತಿಸಿಕೊಂಡಿರುವ ವ್ಯಕ್ತಿಗಳಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯೂ ಗೃಹಸಚಿವಾಲಯಕ್ಕೆ ಮಾಹಿತಿಗಳನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News