ಹಿಂದಿನ ರಾಜರ ಬಗ್ಗೆ ತೀರ್ಪು ನೀಡುವುದು: ತಪ್ಪೋ? ಅಥವಾ ಒಂದು ಕಹಿ ಸತ್ಯವೋ?

Update: 2019-04-19 18:35 GMT

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನೂರನೇ ವರ್ಷದ ಸಂದರ್ಭದಲ್ಲಿ ಬ್ರಿಟಿಷ್ ಸರಕಾರ ಅಧಿಕೃತವಾಗಿ ಕ್ಷಮೆ ಕೋರಬೇಕೆಂದು ಭಾರತ ಒತ್ತಾಯಿಸಿದೆ. ಇದೇ ವೇಳೆ, ಅಂದು ಭಾರತದ ಒಳಗೆ ಐಶಾರಾಮಿ ಜೀವನ ನಡೆಸುತ್ತ ತಮ್ಮ ಪಾಡಿಗೆ ತಾವು ಮಜವಾಗಿದ್ದ ಬಹುಪಾಲು ರಾಜರು ಮತ್ತು ಮಹಾರಾಜರು ಆ ಭಯಾನಕ ನರಮೇಧವನ್ನು ಖಂಡಿಸಲು ನಿರಾಕರಿಸಿದ್ದರು ಮತ್ತು ಅವರಲ್ಲಿ ಕೆಲವರು ಬ್ರಿಟಿಷರ ಪರವಾಗಿಯೇ ವಾದಿಸಿದ್ದರೆಂದು ಇತಿಹಾಸಕಾರರು ಹೇಳುತ್ತಾರೆ. ಕೆಲವು ರಾಜರಂತೂ ಬ್ರಿಟಿಷರು ನಡೆಸಿದ್ದ ಬರ್ಬರ ಹತ್ಯಾಕಾಂಡಕ್ಕಾಗಿ ಅವರನ್ನು ಹೊಗಳುವ ಮಟ್ಟಕ್ಕೂ ಹೋಗಿದ್ದರು. ಅಂತಹ ರಾಜರಲ್ಲಿ ಪಂಜಾಬಿನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್‌ರವರ ಅಜ್ಜ ಪಟಿಯಾಲದ ಮಹಾರಾಜ ಭೂಪೇಂದರ್ ಸಿಂಗ್ ಕೂಡಾ ಸೇರಿದ್ದರು.

ಚಂಡಿಗಡದ ಪಂಜಾಬ್ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಎಮ್. ರಾಜೀವಲೋಚನ್ ಹೇಳುವಂತೆ, ಪಂಜಾಬಿನ ರಾಜರು ಮತ್ತು ಮಹಾರಾಜರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರನ್ನು ರೌಡಿಗಳೆಂದು ಘೋಷಿಸಿದ್ದರು ಮತ್ತು ಅವರನ್ನು ಕೊಂದದ್ದಕ್ಕಾಗಿ ಬ್ರಿಟಿಷರನ್ನು ಹೊಗಳಿದ್ದರು. ಹತ್ಯಾಕಾಂಡವನ್ನು ಖಂಡಿಸಿ, 1919ರಲ್ಲಿ ಅದನ್ನು ಅನೈತಿಕವೆಂದು ಘೋಷಿಸಿದವರು ಮಹಾತ್ಮಾ ಗಾಂಧಿಯೇ ಹೊರತು ಆ ರಾಜ ಮಹಾರಾಜರಲ್ಲ. ಪಂಜಾಬಿನ ಗಣ್ಯ, ಕೆನೆಪದರಿನ ಪಂಜಾಬಿಗಳು ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡಯರ್‌ನನ್ನು ಹಾಡಿ ಹೊಗಳಿ ಗೌರವಿಸುವುದನ್ನು ಮುಂದುವರಿಸಿದರು. ಯಾಕೆಂದರೆ ಬ್ರಿಟಿಷರ ಪರವಾಗಿ ನಿಂತು ತಮ್ಮ ಕುರ್ಚಿ ಮತ್ತು ಹುದ್ದೆಗಳನ್ನು ಉಳಿಸಿಕೊಳ್ಳುವುದು ಅವರಿಗೆ ಮುಖ್ಯವಾಗಿತ್ತು. ಸಿಖ್ಖರು ಬ್ರಿಟಿಷರ ವಿರುದ್ಧ ಹೋರಾಡಬೇಕು, ಪ್ರತಿಭಟಿಸಬೇಕು ಎಂದು ಹೇಳಿದ ಒಬ್ಬ ಪ್ರಮುಖ ಸಿಖ್ ನಾಯಕನೆಂದರೆ ಪ್ರತಾಪ್ ಸಿಂಗ್ ಖೈರಾನ್ ಎನ್ನುತ್ತಾರೆ ರಾಜೀವಲೋಚನ್.

1919ರ ಎಪ್ರಿಲ್ 13ರಂದು ಡಯರ್ ಜಲಿಯನ್‌ವಾಲಾಬಾಗ್‌ನಲ್ಲಿ 379 ಮಂದಿಯನ್ನು ಹತ್ಯೆಗೈದಿದ್ದ. ಆ ಹತ್ಯಾಕಾಂಡ ಬ್ರಿಟಿಷ್ ಸಾಮ್ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕರಾಳವಾದ ಒಂದು ಘಟನೆ. ಇಂತಹ ಹತ್ಯಾಕಾಂಡಕ್ಕೆ ಕಾರಣವಾದ ಡಯರ್‌ನನ್ನು ಸೇನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಿ ಆತನನ್ನು ಸೇನೆಯಿಂದ ವಜಾಗೊಳಿಸುವುದಕ್ಕೆ ಬದಲಾಗಿ ಆತನನ್ನು ಹಾಡಿ ಹೊಗಳಿ, ಅವನಿಗಾಗಿ ಇಂಗ್ಲೆಂಡಿನಲ್ಲಿ ಒಂದು ನಿಧಿಯನ್ನು ಎತ್ತಲಾಯಿತು.

ಬ್ರಿಟಿಷ್ ಸರಕಾರ ಆಗ ಮಾರ್ಶಲ್ ಲಾ ಜಾರಿ ಮಾಡಿದ್ದರೂ ಕೂಡ ಪಂಜಾಬಿನ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆದವು. ಆಗ ಕೂಡಾ ಮಹಾರಾಜ ಭೂಪೇಂದರ್ ಸಿಂಗ್ ಬ್ರಿಟನ್ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದ. ಅಂದಿನ ಲೆಫ್ಟಿನೆಂಟ್ ಗವರ್ನರ್ ಒಡ್ವಯರ್ ತನ್ನ ಆತ್ಮಕಥೆಯಲ್ಲಿ ಇದನ್ನು ದಾಖಲಿಸಿದ್ದಾನೆ.

ಅಂದು ಸ್ವರ್ಣಮಂದಿರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅರುರ್ ಸಿಂಗ್ ಮತ್ತು ಸುಂದರ್ ಸಿಂಗ್ ಮಜಿತಿಯಾ, ಡಯರ್‌ಗೆ ಸ್ವರ್ಣಮಂದಿರದಲ್ಲಿ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಪಾತ್ರವಹಿಸಿದ್ದರೆಂದು ಕೂಡ ಸಿಖ್ ವ್ಯವಹಾರಗಳ ತಜ್ಞರು ಹೇಳುತ್ತಾರೆ. ಮಜಿತಿಯಾ ಮುಂದಕ್ಕೆ, 1936ರಲ್ಲಿ ಖಾಲ್ಸಾ ರಾಷ್ಟ್ರೀಯ ಪಕ್ಷವನ್ನು ಸ್ಥಾಪಿಸಿ, ಚುನಾವಣೆಗಳಲ್ಲಿ ಗೆದ್ದು ಬ್ರಿಟಿಷ್ ಸರಕಾರದಲ್ಲಿ ಕಂದಾಯ ಸಚಿವನೂ ಆಗಿ, 1941ರಲ್ಲಿ ಆತ ಸಾಯುವವರೆಗೂ ಕಂದಾಯ ಸಚಿವನಾಗಿಯೇ ಇದ್ದ.

ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (ಎಸ್‌ಜಿಪಿಸಿ) ಮಾಜಿ ಮಹಾಕಾರ್ಯದರ್ಶಿ ಸುಖದೇವ್ ಸಿಂಗ್ ಭವೂರ್ ಗತಕಾಲದ ಘಟನೆಯನ್ನು ಈಗ ಎತ್ತಿ ಏನೂ ಪ್ರಯೋಜನವಿಲ್ಲ ಎನ್ನುತ್ತಾರೆ. ಆದರೆ ಯಾರ ಪೂರ್ವಿಕರು ಆಗ ತಪ್ಪು ಎಸಗಿದ್ದರೋ ಅವರ ಇಂದಿನ ತಲೆಮಾರಿನವರು ಕ್ಷಮಾಯಾಚನೆ ಮಾಡಲು ಹಿಂಜರಿಯಬಾರದು. ಅವರು ಮಜಿತಿಯಾ ಇರಲಿ ಅಥವಾ ಅಮರೀಂದರ್ ಇರಲಿ, ಕ್ಷಮಾಯಾಚನೆ ಮಾಡಬೇಕು. ಬ್ರಿಟನನ್ನು ನಾವು ಕ್ಷಮಾಯಾಚನೆಗೆ ಒತ್ತಾಯಿಸುವ ಮೊದಲು ನಮ್ಮ ದೇಶದ ಒಳಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಸಮರ್ಥಿಸಿದವರು ಹಾಗೂ ಬ್ರಿಟಿಷರ ಪರವಾಗಿ ನಿಂತವರು ಇದ್ದರು ಎಂಬುದನ್ನು ನಾವು ಮರೆಯಬಾರದು.

ಮಜಿತಿಯಾ ಕುಟುಂಬದ ಪೂರ್ವಿಕರಲ್ಲಿ ಕನಿಷ್ಠ 16 ಮಂದಿ ಮಹಾರಾಜ ರಣಜಿತ್ ಸಿಂಗ್‌ನ ಸೇನೆಯಲ್ಲಿ ಅಧಿಕಾರಿ (ಜನರಲ್)ಗಳಾಗಿದ್ದರು ಮತ್ತು ಅವರ ಮುತ್ತಜ್ಜ ಸುಂದರ ಸಿಂಗ್ ಮಜಿತಿಯಾ ಅಂದಿನ ಸಮಾಜಕ್ಕೆ ಸಲ್ಲಿಸಿದ್ದ ಸೇವೆ ಸರಿಯಾಗಿಯೇ ದಾಖಲಾಗಿದೆ. ಈತನಿಗೆ ಬ್ರಿಟಿಷ್ ಸರಕಾರ ನೈಟ್‌ಗುಡ್ ಪದವಿ ನೀಡಿ ‘ಸರ್ದಾರ್ ಬಹದ್ದೂರ್’ ಎಂಬ ಬಿರುದು ನೀಡಿತ್ತು.

ಶಿರೋಮಣಿ ಅಕಾಲಿ ದಳದ ಬಿಕ್ರಮ್ ಸಿಂಗ್ ಮಜಿತಿಯರವರ ಕುಟುಂಬದ ಆ 16 ಮಂದಿ ಪರಾಕ್ರಮದಿಂದ ಹೋರಾಡಿದ್ದರು ಮತ್ತು ಅವರಲ್ಲಿ ಕೆಲವರು ಹುತಾತ್ಮರಾಗಿದ್ದರು. ಮಜಿತಿಯಾ ಹೇಳುತ್ತಾರೆ: ‘‘ನನ್ನ ಅಜ್ಜ ಸಂಜಿಗತ್ ಸಿಂಗ್ ಮಜಿತಿಯ ಭಾರತೀಯ ವಾಯು ಸೇನೆಯಲ್ಲಿ ಓರ್ವ ಸ್ಕ್ವಾಡ್ರಲ್ ಲೀಡರ್ ಆಗಿದ್ದರು. ಆದ್ದರಿಂದ ವಾಸ್ತವವನ್ನು ತಿಳಿದುಕೊಳ್ಳದೆ ನನ್ನ ಮತ್ತು ನನ್ನ ಹಿಂದಿನ ತಲೆಮಾರಿನವರ ಬಗ್ಗೆ ಆಪಾದನೆಗಳನ್ನು ಮಾಡುವುದು ಸರಿಯಲ್ಲ. ನನ್ನ ಅಜ್ಜ ಸಿಖ್ ಸಮುದಾಯದ ಒಳಿತಿಗೆ ಏನನ್ನೂ ಮಾಡದ ಅಷ್ಟೊಂದು ಕೆಟ್ಟ ವ್ಯಕ್ತಿಯಾಗಿದ್ದರೆ 1920ರಲ್ಲಿ ಅವರನ್ನು ಯಾಕೆ ಮತ್ತು ಹೇಗೆ ಎಸ್‌ಜಿಪಿಯ ಮೊದಲ ಅಧ್ಯಕ್ಷರನ್ನಾಗಿ ಚುನಾಯಿಸಲಾಗಿತ್ತು?’’.

‘‘ನನ್ನ ಅಜ್ಜ ಬ್ರಿಟಿಷ್ ಸರಕಾರದ ಜೊತೆ ಕೆಲಸ ಮಾಡಿದ್ದರೆಂಬುದು ನಿಜ. ಆದರೆ ಅವರು ಬ್ರಿಟಿಷರ ಪರವಾಗಿ ಇದ್ದರು ಎಂಬುದು ಅದರ ಅರ್ಥವಲ್ಲ. ಅಷ್ಟೇ ಅಲ್ಲದೆ ನಾನು ಕೇಳುತ್ತೇನೆ, ನಮ್ಮ (ಮಜಿತಿಯಾಗಳ) ಆಸ್ತಿಯನ್ನು ಮಾತ್ರ ಯಾಕೆ ಬ್ರಿಟಿಷ್ ಸರಕಾರ ಮುಟ್ಟುಗೋಲು ಹಾಕಿಕೊಂಡಿತ್ತು? ಯಾಕೆಂದರೆ ಸರಕಾರವು ಮಹಾರಾಜ ರಣಜಿತ್ ಸಿಂಗ್‌ಗೆ ನಿಕಟವಾಗಿದ್ದ ಕುಟುಂಬಗಳನ್ನು ಗುರುತು ಮಾಡಿತ್ತು. ನನ್ನನ್ನು ಗುರಿ ಮಾಡಲು ಕಾಂಗ್ರೆಸ್ ನಾಯಕರು ಒಂದು ನೂರು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಕೆದಕುವುದು ಮೂರ್ಖತನವಲ್ಲದೆ ಬೇರೆ ಇನ್ನೇನೂ ಅಲ್ಲ’’ ಎನ್ನುತ್ತಾರೆ ಅವರು.


ಕೃಪೆ: indianexpress.com

Writer - ದಿವ್ಯಾ ಗೋಯಲ್

contributor

Editor - ದಿವ್ಯಾ ಗೋಯಲ್

contributor

Similar News