8,000 ರನ್ ಪೂರೆಸಿದ ಭಾರತದ 3ನೇ ದಾಂಡಿಗ ರೋಹಿತ್

Update: 2019-04-19 18:50 GMT

ಮುಂಬೈ, ಎ.19: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 8,000 ರನ್ ಪೂರೈಸಿದ ಭಾರತದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುರುವಾರ ದಿಲ್ಲಿಯಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ರೋಹಿತ್ ಈ ಮೈಲುಗಲ್ಲು ತಲುಪಿದರು. ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸುವ ಮೊದಲು 22 ಎಸೆತಗಳಲ್ಲಿ 30 ರನ್ ಗಳಿಸಿದರು. ಅಮಿತ್ ಐಪಿಎಲ್‌ನಲ್ಲಿ 150ವಿಕೆಟ್‌ಗಳನ್ನು ಉರುಳಿಸಿದ ಭಾರತದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.

ಡೆಲ್ಲಿ ಪಂದ್ಯಕ್ಕಿಂತ ಮೊದಲು ರೋಹಿತ್‌ಗೆ 8 ಸಾವಿರ ರನ್ ಪೂರೈಸಲು ಕೇವಲ 12 ರನ್ ಅಗತ್ಯವಿತ್ತು. ಬಲಗೈ ದಾಂಡಿಗ ರೋಹಿತ್‌ಗೆ ಈ ಗುರಿ ತಲುಪಲು ಹೆಚ್ಚು ಸಮಸ್ಯೆ ಎದುರಾಗಲಿಲ್ಲ. ಐಪಿಎಲ್‌ನಲ್ಲಿ 176 ಇನಿಂಗ್ಸ್ ಆಡಿರುವ ರೋಹಿತ್ 4,716 ರನ್ಕಲೆ ಹಾಕಿದ್ದಾರೆ. ವಿಶ್ವದ ಶ್ರೀಮಂತ ಟಿ-20 ಲೀಗ್‌ನಲ್ಲಿ ಮೂರನೇ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. 5,526 ರನ್ ಗಳಿಸಿರುವ ವಿರಾಟ್ ಕೊಹ್ಲಿ ಗರಿಷ್ಠ ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಸುರೇಶ್ ರೈನಾ(5,192 ರನ್)ಎರಡನೇಸ್ಥಾನದಲ್ಲಿದ್ದಾರೆ.

ಮುಂಬೈ ತಂಡ ಡೆಲ್ಲಿ ವಿರುದ್ಧ 40 ರನ್‌ಗಳಿಂದ ಜಯ ಸಾಧಿಸಿ ಐಪಿಎಲ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News