ವೇತನ ಬಾಕಿ ಪಾವತಿ: ರಾಷ್ಟ್ರಪತಿಗಳ ಹಸ್ತಕ್ಷೇಪ ಕೋರಿದ ಜೆಟ್ ಏರ್‌ವೇಸ್ ಸಿಬ್ಬಂದಿ

Update: 2019-04-20 15:42 GMT

ಹೊಸದಿಲ್ಲಿ,ಎ.20: ತನ್ನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ನಿಂದ ತಮ್ಮ ವೇತನ ಬಾಕಿ ಪಾವತಿ ಮತ್ತು ಸಂಸ್ಥೆಗೆ ತುರ್ತು ಆರ್ಥಿಕ ನೆರವು ಒದಗಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಪ್ರವೇಶವನ್ನು ಕೋರಿ ಜೆಟ್‌ನ  ಉದ್ಯೋಗಿಗಳು ಅವರಿಗೆ ಪತ್ರಗಳನ್ನು ಬರೆದಿದ್ದಾರೆ.

ತೀವ್ರ ಹಣಕಾಸು ಮುಗ್ಗಟ್ಟನ್ನು ಎದುರಿಸುತ್ತಿರುವ ಜೆಟ್ ಏರ್‌ವೇಸ್ ಸುಮಾರು 23,000 ಉದ್ಯೋಗಿಗಳನ್ನು ಹೊಂದಿದ್ದು,ಪೈಲಟ್‌ಗಳು ಸೇರಿದಂತೆ ಸಿಬ್ಬಂದಿಗಳ ವೇತನ ಪಾವತಿಯನ್ನು ವಿಳಂಬಿಸುತ್ತಿದೆ.

ಸಂಸ್ಥೆಯ ಭವಿಷ್ಯದ ಕುರಿತು ಅನಿಶ್ಚಿತತೆಯ ನಡುವೆಯೇ ಎರಡು ನೌಕರರ ಒಕ್ಕೂಟಗಳಾದ ಸೊಸೈಟಿ ಫಾರ್ ವೆಲ್ಫೇರ್ ಆಫ್ ಇಂಡಿಯನ್ ಪೈಲಟ್ಸ್ ಮತ್ತು ಜೆಟ್ ಏರ್‌ಕ್ರಾಫ್ಟ್ ಮೆಂಟೇನನ್ಸ್ ಇಂಜಿನಿಯರ್ಸ್ ವೆಲ್ಫೇರ್ ಅಸೋಸಿಯೇಷನ್ ರಾಷ್ಟ್ರಪತಿ ಮತ್ತು ಪ್ರಧಾನಿಗಳಿಗೆ ಒಂದೇ ಧಾಟಿಯಲ್ಲಿ ಪ್ರತ್ಯೇಕ ಪತ್ರಗಳನ್ನು ಬರೆದಿವೆ.

ನೌಕರರ ಒಂದು ವರ್ಗಕ್ಕೆ ಕಳೆದ ಏಳು ತಿಂಗಳುಗಳಿಂದಲೂ ಸಕಾಲಕ್ಕೆ ವೇತನ ಪಾವತಿಯಾಗಿಲ್ಲ ಮತ್ತು ಕಳೆದ ತಿಂಗಳು ಈ ಹತಾಶ ಸ್ಥಿತಿಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಗಮನಕ್ಕೂ ತರಲಾಗಿತ್ತು ಎಂದು ಈ ಯೂನಿಯನ್‌ಗಳು ಪತ್ರಗಳಲ್ಲಿ ಬೆಟ್ಟು ಮಾಡಿವೆ.

ಜೆಟ್ ಏರ್‌ವೇಸ್‌ನ ಆಡಳಿತವು ವೇತನ ಬಾಕಿ ಪಾವತಿಗೆ ತಾನು ನಿಗದಿ ಪಡಿಸಿದ್ದ ಗಡುವಿನಿಂದ ಹಿಂದೆ ಸರಿದಿದೆ. ಪೈಲಟ್‌ಗಳು ಮತ್ತು ಇಂಜಿನಿಯರ್‌ಗಳಿಗೆ ಮೂರು ತಿಂಗಳ ವೇತನ ಹಾಗೂ ಇತರ ಎಲ್ಲ ಸಿಬ್ಬಂದಿಗಳಿಗೆ ಒಂದು ತಿಂಗಳ ವೇತನ ಬಾಕಿಯಾಗಿದೆ ಎಂದಿರುವ ಅವು,ಜೆಟ್ ಏರ್‌ವೇಸ್ ಸ್ಥಗಿತಗೊಂಡಿರುವದರಿಂದ ಸಂಸ್ಥೆಯ 23,000 ಉದ್ಯೋಗಗಳ ಜೊತೆಗೆ,ನಮ್ಮೊಂದಿಗೆ ಗುರುತಿಸಿಕೊಂಡವರು,ವಿಮಾನ ನಿಲ್ದಾಣಗಳಲ್ಲಿಯ ವ್ಯಾಪಾರಿಗಳು,ಪ್ರಯಾಣಿಕರು ಸೇರಿದಂತೆ ಹಲವಾರು ಜನರು  ಬವಣೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿವೆ.

ವಿಮಾನ ಪ್ರಯಾಣ ದರಗಳು ಗಗನಕ್ಕೇರುತ್ತಿರುವ ಬಗ್ಗೆಯೂ ಅವು ಕಳವಳ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News