ಮತ್ತೆ ಫೈಟರ್ ಜೆಟ್ ಏರಲಿರುವ ಅಭಿನಂದನ್ ವರ್ಧಮಾನ್

Update: 2019-04-20 16:20 GMT

ಹೊಸದಿಲ್ಲಿ, ಎ. 20: ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಮತ್ತೆ ಫೈಟರ್ ಜೆಟ್ ಹಾರಿಸಲಿದ್ದಾರೆ. ಬೆಂಗಳೂರು ಮೂಲದ ಇನ್‌ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಅವರಿಗೆ ಅಂತಿಮ ಅನುಮತಿ ನೀಡಬೇಕಾಗಿದೆ. ಅದಕ್ಕಾಗಿ ಅವರು ಮುಂದಿನ ವಾರ ಈ ಸಂಸ್ಥೆಯಲ್ಲಿ ಸರಣಿ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

 ಫೆಬ್ರವರಿ 27ರಂದು ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ವಾಯು ಪಡೆಯೊಂದಿಗೆ ನಡೆದ ವೈಮಾನಿಕ ಸಂಘರ್ಷದಲ್ಲಿ ವರ್ಧಮಾನ್ ಅವರು ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು. ಅನಂತರ ಕ್ಷಿಪಣಿ ದಾಳಿಗೆ ಒಳಗಾದ ಅವರ ಮಿಗ್-21 ಬಿಸನ್ ವಿಮಾನ ಪತನಗೊಂಡಿತ್ತು. ಅವರು ಪಾಕಿಸ್ತಾನದ ಸೈನಿಕರ ವಶಕ್ಕೆ ಒಳಗಾಗಿದ್ದರು. ವರ್ಧಮಾನ್ ಅವರು ಕಳೆದ ವಾರ ದಿಲ್ಲಿಯ ವಾಯು ಪಡೆಯ ಕೇಂದ್ರ ವೈದ್ಯಕೀಯ ಸಂಸ್ಥೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು.

ಇಂತಹ ಪ್ರಕರಣಗಳಲ್ಲಿ ತಜ್ಞರು ಸಾಮಾನ್ಯವಾಗಿ ಹಾರಾಟಕ್ಕೆ ಅನುಮತಿ ನೀಡುವುದಕ್ಕಿಂತ ಮುನ್ನ 12 ವಾರಗಳ ಕಾಲ ಪೈಲೆಟ್‌ಗಳ ಆರೋಗ್ಯ ಪರಿಶೀಲಿಸುತ್ತಾರೆ. ಆದುದರಿಂದ ಮೇ ಅಂತ್ಯದ ಒಳಗೆ ನಾವು ಅಭಿನಂದನ್ ಆರೋಗ್ಯ ಸ್ಥಿತಿ ತಿಳಿಯಲಿದ್ದೇವೆ. ಪ್ರಸಕ್ತ ಅವರ ದೇಹ ಸ್ಥಿತಿ ಗಮನಿಸಿದಾಗ ಅವರು ಶೀಘ್ರ ಫೈಟರ್ ಜೆಟ್ ಹಾರಾಟ ನಡೆಸಲಿದ್ದಾರೆ ಎಂಬ ಭರವಸೆ ನಮಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News