ದಿಲ್ಲಿ ದರ್ಬಾರ್

Update: 2019-04-20 18:33 GMT

ಪ್ರಿಯಾಂಕಾ ಕಾಂಗ್ರೆಸ್ ತೊರೆಯಲು ನೆಪ
ಕಾಂಗ್ರೆಸ್ ಪಕ್ಷದ ಮಾಜಿ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಶುಕ್ರವಾರ ಶಿವಸೇನೆ ಸೇರಿದ್ದಾರೆ. ಎಪ್ರಿಲ್ 28ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಮುಂಬೈ ಕಾಂಗ್ರೆಸ್‌ಗೆ ಇದು ನಿಜಕ್ಕೂ ಆಘಾತ ತಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಸ್ಥಾನ ಹೊಂದಿದ್ದ ಪ್ರಿಯಾಂಕಾ, ಸಾಮಾಜಿಕ ಜಾಲತಾಣಗಳ ಮೂಲಕ ಯುವ ಸಮೂಹದ ಮೇಲೆ ಪ್ರಭಾವ ಬೀರುವಲ್ಲಿ ನೆರವಾಗಿದ್ದರು. ಪ್ರಿಯಾಂಕಾ ಪಕ್ಷ ತೊರೆಯಲು ಮುಖ್ಯ ಕಾರಣ, ಮಥುರಾದಲ್ಲಿ ತಮ್ಮಿಂದಿಗೆ ಅನುಚಿತವಾಗಿ ವರ್ತಿಸಿದ ಕಾರ್ಯಕರ್ತರನ್ನು ಮತ್ತೆ ಸೇರಿಸಿಕೊಂಡಿರುವುದು. ಆದರೆ ಅವರು ಪಕ್ಷ ತೊರೆಯಲು ಇದೊಂದೇ ಕಾರಣವೇ ಅಥವಾ ಉತ್ತರ ಮುಂಬೈನಿಂದ ಪಕ್ಷ ಅವರಿಗೆ ಟಿಕೆಟ್ ನೀಡದಿದ್ದುದು ಕೂಡಾ ಕಾರಣವೇ? ಆದರೆ ಕೆಲವರು ಹೇಳುವಂತೆ ಚತುರ್ವೇದಿ ಶಿವಸೇನೆ ಸೇರುವ ಬಗ್ಗೆ ಆ ಪಕ್ಷದ ಜತೆ ಮಾತುಕತೆ ನಡೆಯುತ್ತಿರುವ ನಡುವೆಯೇ ಮಥುರಾ ಅಹಿತಕರ ಘಟನೆ ನಡೆದಿದೆ. ಶಿವಸೇನೆ ಸೇರುವುದಾಗಿ ಚತುರ್ವೇದಿ ಘೋಷಿಸುವ ಎರಡು ದಿನ ಮೊದಲೇ ಈ ಬಗ್ಗೆ ಗಾಳಿ ಸುದ್ದಿ ಹಬ್ಬಿತ್ತು. ಯಾವ ರಾಜಕೀಯ ಹಿನ್ನೆಲೆಯೂ ಇಲ್ಲದ ಚತುರ್ವೇದಿ, ನಿರೀಕ್ಷೆಗಿಂತಲೂ ವೇಗವಾಗಿ ಮುಂಬೈ ಕಾಂಗ್ರೆಸ್‌ನಲ್ಲಿ ಬೆಳೆದರು; ಮಾತ್ರವಲ್ಲದೇ ದಿಲ್ಲಿಯಲ್ಲಿ ಕೂಡಾ ತಾರಾ ವಕ್ತಾರರಾಗಿ ಮಿಂಚಿದರು. ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವವರು ಎಂಬ ಹೆಸರನ್ನು ಅವರು ಗಳಿಸಿದ್ದರು. ಅವರು ಬಹುಶಃ ಉತ್ತರ ಮುಂಬೈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದರು. ಆದರೆ ಮಾಜಿ ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಟಿಕೆಟ್ ಸಿಕ್ಕಿತು. ಆದ್ದರಿಂದ ಕಾಂಗ್ರೆಸ್‌ಗೆ ಹೊಡೆತ ನೀಡಲು ಸೂಕ್ತ ಕಾರಣಕ್ಕಾಗಿ ಹುಡುಕುತ್ತಿದ್ದ ಅವರಿಗೆ ಮಥುರಾ ಘಟನೆ ನೆಪವಾಯಿತು.


ತಮ್ಮದೇ ಚಾನಲ್‌ನಲ್ಲಿ ಆದ್ಯತೆ ಸಿಗಲಿಲ್ಲ
ರದ್ದುಗೊಂಡ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದ ಗಡುವು ಮುಗಿದ ಬಳಿಕವೂ ಹಲವು ಮಂದಿ ಸರಕಾರಿ ಅಧಿಕಾರಿಗಳು ಹಾಗೂ ಬಿಜೆಪಿ ನಾಯಕರು ಶೇ. 40ರಷ್ಟು ಕಮಿಷನ್ ಪಡೆದು ವಿನಿಮಯ ದಂಧೆ ಮುಂದುವರಿಸಿದ್ದಾರೆ ಎನ್ನುವುದು ಕಾಂಗ್ರೆಸ್ ಪಕ್ಷದ ಆರೋಪ. ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್, ದೇಶದ ಉದ್ದಗಲಕ್ಕೂ ಓಡಾಡಿ ಹಲವು ಕಡೆ ಪತ್ರಿಕಾಗೋಷ್ಠಿಗಳಲ್ಲಿ ಈ ವಿಷಯವನ್ನು ಬಿಂಬಿಸಿದ್ದಾರೆ. ಆದರೆ ಇದಕ್ಕೆ ಕಾಂಗ್ರೆಸ್ ಪಕ್ಷ ನಿರೀಕ್ಷಿಸಿದಂತೆ ಮಾಧ್ಯಮಗಳಲ್ಲಿ ಸ್ಪಂದನೆ ಸಿಗಲಿಲ್ಲ. ಎಷ್ಟೇ ಪುರಾವೆಯನ್ನು ಒದಗಿಸಿದರೂ, ಸುದ್ದಿವಾಹಿನಿಗಳು ಬಿಜೆಪಿಯ ಒತ್ತಡಕ್ಕೆ ಒಳಗಾಗಿ, ಈ ಹಗರಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಕೈಬಿಡುತ್ತಿವೆ ಎಂದು ಇತ್ತೀಚೆಗೆ ಸಿಬಾಲ್ ದಿಲ್ಲಿಯಲ್ಲಿ ಮಾಧ್ಯಮ ಬಗ್ಗೆ ಕಿಡಿ ಕಾರಿದರು. ಆದರೆ ಇದು ಮಾಧ್ಯಮ ಮಂದಿಗೆ ಪಥ್ಯವಾಗಲಿಲ್ಲ ಹಾಗೂ ಕಾಂಗ್ರೆಸ್ ಆರೋಪಗಳು ಅಷ್ಟೊಂದು ಪ್ರಬಲವಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. ಮತ್ತೊಂದೆಡೆ ಕಪಿಲ್ ಸಿಬಲ್ ಬಹುತೇಕ ಷೇರುಗಳನ್ನು ಹೊಂದಿದ ಒಂದು ಖಾಸಗಿ ಇಂಗ್ಲಿಷ್ ಚಾನೆಲ್ ಕೂಡಾ ಈ ಸುದ್ದಿಗೆ ಸೂಕ್ತ ಮಹತ್ವ ನೀಡಿಲ್ಲ ಎಂದು ಕೆಲವರು ಚುಚ್ಚಿದರು. ಈ ಹಗರಣಕ್ಕೆ ತಮ್ಮ ಚಾನಲ್‌ನಲ್ಲೇ ಏಕೆ ಆದ್ಯತೆ ಸಿಕ್ಕಿಲ್ಲ ಎನ್ನುವುದನ್ನು ಸಿಬಾಲ್ ಮೊದಲು ಪತ್ತೆ ಮಾಡಲಿ ಎಂದು ಕೆಲವರು ಗೊಣಗುತ್ತಿದ್ದರು.


ಮುಲಾಯಂ ತಿಪ್ಪರಲಾಗ
ಮುಲಾಯಂ ಸಿಂಗ್ ಯಾದವ್ ನಿಗೂಢತೆಯ ಸುಳಿಯಲ್ಲಿ ಸಿಲುಕಿದ್ದಾರೆ. ಒಂದು ದಿನ ಗರಂ ಆಗುವ ಅವರು ಮರುದಿನ ಕೂಲ್ ಆಗುತ್ತಾರೆ. ಇದು ಹಲವು ವರ್ಷಗಳಿಂದ ನಡೆದುಬಂದಿದೆ. ಸಮಾಜವಾದಿ ಪಕ್ಷದ ಪೋಷಕನ ಪರವಾಗಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಶುಕ್ರವಾರ ಮುಲಾಯಂ ಸ್ವಕ್ಷೇತ್ರ ಮೈನ್‌ಪುರಿಯಲ್ಲಿ ಮತಯಾಚನೆ ಮಾಡಿದರು. ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಬದ್ಧ ವೈರಿಗಳು ಎಸ್ಪಿ-ಬಿಎಸ್ಪಿರ್ಯಾಲಿಯಲ್ಲಿ ವೇದಿಕೆ ಹಂಚಿಕೊಂಡು, ಪರಸ್ಪರ ಹೊಗಳಿಕೊಂಡರು. ಈ ಮೂಲಕ ಉತ್ತರ ಪ್ರದೇಶದಲ್ಲಿ ಗಮನಾರ್ಹ ರಾಜಕೀಯ ವರ್ಗಾಂತರಕ್ಕೆ ಕಾರಣವಾದರು. ಇದೇ ವೇದಿಕೆಯಲ್ಲಿದ್ದ ಎಸ್ಪಿಮುಖಂಡ ಅಖಿಲೇಶ್ ಯಾದವ್, ‘‘ಮಾಯಾವತಿ ನನ್ನ ತಂದೆಯ ಪರವಾಗಿ ಮತ ಯಾಚಿಸಿದ್ದು ಐತಿಹಾಸಿಕ ಘಟನೆ’’ ಎಂದು ಬಣ್ಣಿಸಿದರು. ಮುಲಾಯಂ ಸಿಂಗ್ ಅವರ ಸೈಕಲ್ ಚಿಹ್ನೆಯನ್ನು ಬೆಂಬಲಿಸಿದ ಮಾಯಾವತಿ, ‘‘ಮುಲಾಯಂ ಅವರು ಹಿಂದುಳಿದ ವರ್ಗದವರ ನೈಜ ನಾಯಕ; ಹಿಂದುಳಿದ ವರ್ಗದವರ ನಕಲಿ ಅಥವಾ ಸುಳ್ಳು ನಾಯಕ ಮೋದಿಯವರಂತೆ ಅಲ್ಲ’’ ಎಂದು ಬಣ್ಣಿಸಿದರು. ಆದರೆ ಮುಲಾಯಂ ಸ್ವತಃ ತಮ್ಮ ಸಹೋದರ ಶಿವಪಾಲ್ ಯಾದವ್ ಅವರ ಪರ ಪ್ರಚಾರ ಮಾಡುವುದಾಗಿ ಭರವಸೆ ನೀಡಿದ್ದರು. ಮಾತ್ರವಲ್ಲದೆ, ಮಾಯಾವತಿ ಜತೆ ಕೈಜೋಡಿಸಿರುವ ಮಗನ ಮೇಲಿನ ಸಿಟ್ಟನ್ನು ಕಳೆದವಾರದ ವರೆಗೂ ಸ್ಪಷ್ಟವಾಗಿ ಬಹಿರಂಗಪಡಿಸುತ್ತಿದ್ದರು. ಹಾಗಾದರೆ ಈಗ ಮನಸ್ಸು ಬದಲಾಯಿಸಿದ್ದೇಕೆ? ಪಕ್ಷದ ಒಳಗಿನವರೇ ಹೇಳುವಂತೆ, ಮುಲಾಯಂ ಅವರ ರಾಜಕೀಯ ಅವರಿಗಷ್ಟೇ ಗೊತ್ತು; ಅವರ ಮಗನಿಗೆ ಕೂಡಾ ಅದರ ಸುಳಿವು ಸಿಗಲಾರದು. ಆದ್ದರಿಂದ ಕೆಲವೇ ದಿನಗಳಲ್ಲಿ ತಮ್ಮ ಮಗ ಹಾಗೂ ಮಾಯಾವತಿ ವಿರುದ್ಧ ಮಾತಿನ ಚಾಟಿ ಬೀಸಿದರೂ ಅಚ್ಚರಿ ಇಲ್ಲ.


ಮಥುರಾ ಮೇಲೆ ದಿಢೀರ್ ಪ್ರೀತಿ
ಕೃಷ್ಣನ ಮೇಲಿನ ಅಪಾರ ಭಕ್ತಿಯ ಫಲವಾಗಿ ಮಥುರಾ ಕ್ಷೇತ್ರ ಹೇಮಮಾಲಿನಿಗೆ ಒಲಿಯಿತು ಎನ್ನುವುದು ಬಿಜೆಪಿ ಮುಖಂಡರ ಹೇಳಿಕೆ. ಮಥುರಾದಿಂದ ಈ ಮಾಜಿ ನಟಿ ಮರು ಆಯ್ಕೆಯಾಗುವ ಸಾಧ್ಯತೆ ವಿರಳ ಎಂದು ಆಂತರಿಕ ಸಮೀಕ್ಷೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲು ಅಥವಾ ಮತ್ತೊಂದು ಕ್ಷೇತ್ರಕ್ಕೆ ವರ್ಗಾಯಿಸಲು ಮೊದಲು ಬಿಜೆಪಿ ಮುಖಂಡರು ನಿರ್ಧರಿಸಿದ್ದರು. ತಮ್ಮ ಸಂಸದೆ ಬಹುತೇಕ ಸಮಯ ಮುಂಬೈನಲ್ಲಿರುತ್ತಾರೆ ಎಂಬ ಸಿಟ್ಟು ಮತದಾರರಿಗೆ ಇದ್ದಂತಿದೆ. ಇಷ್ಟು ಮಾತ್ರವಲ್ಲದೆ, ಯೋಗಿ ಆದಿತ್ಯನಾಥ್ ಸರಕಾರದ ಪ್ರಭಾವಿ ಸಚಿವ ಹಾಗೂ ಮಥುರಾ ಶಾಸಕ ಶ್ರೀಕಾಂತ್ ಶರ್ಮಾ ಈ ಕ್ಷೇತ್ರದ ಮೇಲೆ ಕಣ್ಣಿಟ್ಟು ತೀವ್ರ ಲಾಬಿ ನಡೆಸಿದ್ದರು. ಆದರೆ ತಾವೀಗ ಕೃಷ್ಣನ ಭಕ್ತೆ; ಬಹುತೇಕ ಸಮಯವನ್ನು ಮಥುರಾ ಮತ್ತು ವೃಂದಾವನದಲ್ಲಿ ಕಳೆಯಲು ಬಯಸಿರುವುದಾಗಿ ಹೇಮಮಾಲಿನಿ ಬಿಜೆಪಿ ಮುಖಂಡರಿಗೆ ತಿಳಿಸಿದರು. ಇಷ್ಟು ಮಾತ್ರವಲ್ಲದೆ ಈ ದೇಗುಲ ನಗರಿಯಲ್ಲಿ ಮನೆ ಖರೀದಿಸಿರುವುದಾಗಿಯೂ ಹೇಳಿದರು. ಅಂತಿಮವಾಗಿ ಪಕ್ಷದ ಮುಖಂಡರು ಹೇಮಮಾಲಿನಿಯವರಿಗೆ, ಕೃಷ್ಣಭಕ್ತಿಯನ್ನು ಕ್ಷೇತ್ರದ ಮತದಾರರಿಗೆ ಮನವರಿಕೆ ಮಾಡಿಕೊಡುವಂತೆ ಸೂಚಿಸಿದರು. ಕ್ಷೇತ್ರಕ್ಕೆ ಭೇಟಿಯನ್ನೇ ನೀಡದ ಹೇಮಮಾಲಿನಿ ಬಗ್ಗೆ ಜನರಲ್ಲಿ ವ್ಯಾಪಕ ಆಕ್ರೋಶವಿದ್ದು, ಅವರ ಪ್ರಚಾರವೈಖರಿ ಬಗ್ಗೆಯೂ ಟೀಕೆಗಳಿವೆ. ಆದರೆ ಹೇಮಮಾಲಿನಿ ತಮ್ಮ ಪತಿ ಧರ್ಮೇಂದ್ರ ಅವರನ್ನು ಕರೆತಂದು ಪ್ರಚಾರ ಮಾಡಿಸಿ ಹೇಗಾದರೂ ಗೆಲ್ಲಲೇಬೇಕು ಎಂಬ ಪಣ ತೊಟ್ಟಂತಿದೆ. ಮತದಾರರು ಇವರಿಗೆ ಮತ್ತೊಂದು ಅವಕಾಶ ನೀಡುತ್ತಾರೆಯೇ? ಮೇ 23ರವರೆಗೆ ಕಾದು ನೋಡಬೇಕು.


ಕಾಂಗ್ರೆಸ್ ಆಸೆಗೆ ಮಾಯಾ ತಣ್ಣೀರು?
ಚುನಾವಣಾ ಫಲಿತಾಂಶ ಬಗ್ಗೆ ಕಾಂಗ್ರೆಸ್ ನಾಯಕರು ಧನಾತ್ಮಕ ಭಾವನೆ ಹೊಂದಿದ್ದಾರೆ. ಆಂತರಿಕ ಸಮೀಕ್ಷೆಗಳು ಕೂಡಾ ಇದಕ್ಕೆ ಪುಷ್ಟಿ ನೀಡಿವೆ. ಆದಾಗ್ಯೂ ಇವರ ಆಸೆಗೆ ತಣ್ಣೀರು ಎರಚುವವರಿದ್ದಾರೆ. ಕಾಂಗ್ರೆಸ್‌ನ ರಣತಂತ್ರ ರೂಪಿಸುವ ಮುಖಂಡರ ಪ್ರಕಾರ, ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಎಸ್ಪಿ ನಾಯಕಿ ಮಾಯಾವತಿ ನಿರಾಕರಿಸಿದ ಕಾರಣದಿಂದಾಗಿ ಪಕ್ಷದ ಗೆಲುವಿನ ಸಾಧ್ಯತೆ ಇದ್ದ ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ಬಿಹಾರದಲ್ಲಿ ಕನಿಷ್ಠ 40 ಸ್ಥಾನಗಳು ಕಾಂಗ್ರೆಸ್ ಕೈತಪ್ಪಲಿವೆ. ಮಾಯಾವತಿಯವರ ಈ ವಿಶ್ವಾಸದ್ರೋಹದ ನಡುವೆಯೂ, ಪಕ್ಷದ ಕೋರ್ ಕಮಿಟಿ, ಫಲಿತಾಂಶ ತಮ್ಮ ಪರವಾಗಿರುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಇತ್ತೀಚಿನ ಆಂತರಿಕ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ 150ರ ಗಡಿ ದಾಟಲಿದೆ. ಅದರೆ ಪಕ್ಷದಲ್ಲೇ ಕೆಲ ಮುಖಂಡರು ಈ ಸಮೀಕ್ಷೆಯನ್ನು ಒಪ್ಪುವುದಿಲ್ಲ ಹಾಗೂ ಪಕ್ಷದ ವರಿಷ್ಠರನ್ನು ಓಲೈಸುವ ಸಲುವಾಗಿ ಹೀಗೆ ಮಾಡಲಾಗಿದೆ ಎಂದು ಪ್ರತಿಪಾದಿಸುತ್ತಾರೆ. ಆದರೆ ಫಲಿತಾಂಶ ಏನೇ ಬಂದರೂ, ಕಾಂಗ್ರೆಸ್ ಹಾಗೂ ಮಾಯಾವತಿ ನಡುವಿನ ಅಂತರ ಮತ್ತಷ್ಟು ಬೆಳೆಯಲಿದೆ. ಇದನ್ನು ಪಕ್ಷದ ಒಳಗಿನವರು ಕೂಡಾ ಒಪ್ಪಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News