ಜೆಟ್ ಏರ್‌ವೇಸ್ ಸಮಸ್ಯೆ: ಕಾನೂನು ಚೌಕಟ್ಟಿನ ಹೊರಗೆ ಇರ್ತ್ಯಥಕ್ಕೆ ಬ್ಯಾಂಕ್‌ಗಳ ಯೋಜನೆ

Update: 2019-04-21 16:30 GMT

ಹೊಸದಿಲ್ಲಿ, ಎ.21: ಆರ್ಥಿಕ ಸಂಕಷ್ಟದಲ್ಲಿರುವ ಜೆಟ್ ‌ಏರ್‌ವೇಸ್‌ನಿಂದ ಬರಬೇಕಿರುವ ಸಾಲವನ್ನು ವಸೂಲಿ ಮಾಡುವ ವಿಧಾನಗಳ ಬಗ್ಗೆ ಚಿಂತನೆ ನಡೆಸಿರುವ ಸಾಲದಾತರು, ಇದೀಗ ಚಾಲನೆ ದೊರೆತಿರುವ ಬಿಡ್ಡಿಂಗ್ ಪ್ರಕ್ರಿಯೆ ವಿಫಲವಾದರೆ ದಿವಾಳಿತನ ಕಾನೂನಿನ ಚೌಕಟ್ಟಿನಿಂದ ಹೊರಗಡೆ ಒಂದು ಸೂಕ್ತ ತೀರ್ಮಾನ ಕೈಗೊಳ್ಳಲು ಒಲವು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 8,500 ಕೋಟಿ ರೂ.ಗೂ ಅಧಿಕ ಸಾಲದ ಹೊರೆಯಲ್ಲಿರುವ ಜೆಟ್‌ಏರ್‌ವೇಸ್‌ಗೆ ಹೆಚ್ಚುವರಿ ತುರ್ತು ಹಣ ಒದಗಿಸಲು ಸಾಲದಾತರು ನಿರಾಕರಿಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಾಲ ನೀಡಿರುವ ಏಳು ಸ್ಥಳೀಯ ಬ್ಯಾಂಕ್‌ಗಳಲ್ಲಿ ಪ್ರಮುಖ ಸಾಲದಾತನಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಜೆಟ್‌ಏರ್‌ವೇಸ್‌ನ ಶೇರುಗಳ ಮಾರಾಟಕ್ಕೆ ಬಿಡ್ಡಿಂಗ್ ಪ್ರಕ್ರಿಯೆ ಆರಂಭಿಸಿದ್ದು ಮುಂದಿನ ತಿಂಗಳು ಸಂಭಾವ್ಯ ಬಿಡ್ಡರ್‌ಗಳ ಬಗ್ಗೆ ಸ್ಪಷ್ಟ ಚಿತ್ರಣ ದೊರಕಲಿದೆ ಎಂದು ತಿಳಿಸಿದೆ.

 ಸಾಲ ನೀಡಿರುವ ಬ್ಯಾಂಕ್‌ಗಳು ಬಿಡ್ಡಿಂಗ್ ಪ್ರಕ್ರಿಯೆ ಯಶಸ್ವಿಯಾಗುವ ಬಗ್ಗೆ ಭರವಸೆ ಹೊಂದಿವೆ. ಒಂದು ವೇಳೆ ಯಶಸ್ವಿಯಾಗದಿದ್ದರೆ ಆಗ ಅನುಸರಿಸಬೇಕಾದ ‘ಬಿ’ ಯೋಜನೆಯನ್ನು ರೂಪಿಸಲಾಗುತ್ತಿದೆ. ಎಂದು ಮೂಲಗಳು ತಿಳಿಸಿವೆ. ಅಸ್ತಿತ್ವದಲ್ಲಿರುವ ಸೆಕ್ಯುರಿಟಿ (ಶೇರು, ಡಿಬೆಂಚರ್, ಬಾಂಡ್‌ಗಳು ಇತ್ಯಾದಿ) ಮತ್ತು ಭೌತಿಕ ಆಸ್ತಿಗಳನ್ನು ಆಧಾರವಾಗಿಟ್ಟುಕೊಂಡು ವಸೂಲಿ ಮಾಡುವುದಕ್ಕೆ ಹೆಚ್ಚಿನ ಒಲವು ವ್ಯಕ್ತವಾಗಿದೆ.

 ಹಾಲಿ ಕಾನೂನಿನಂತೆ ಯಾವುದೇ ಪ್ರಕ್ರಿಯೆ ಆರಂಭಿಸಲು ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯುನಲ್(ಎನ್‌ಸಿಎಲ್‌ಟಿ)ನ ಅನುಮೋದನೆ ಪಡೆಯಬೇಕಿದೆ. ಆದರೆ ಬಿ ಯೋಜನೆ ಎನ್‌ಸಿಎಲ್‌ಟಿಯ ವ್ಯಾಪ್ತಿಗಿಂತ ಹೊರತಾಗಿದೆ. ಬಿ ಯೋಜನೆಯಿಂದ ಜೆಟ್‌ಏರ್‌ವೇಸ್‌ನ ವಿಮಾನಗಳು ಹಾಗೂ ಇತರ ಭೌತಿಕ ಆಸ್ತಿಗಳಿಗೆ ಅಧಿಕ ವೌಲ್ಯ ದೊರಕಬಹುದು ಎಂದು ನಿರೀಕ್ಷಿಸಲಾಗಿದೆ. ಎತಿಹಾದ್ ಏರ್‌ವೇಸ್, ಟಿಪಿಜಿ ಕ್ಯಾಪಿಟಲ್, ಇಂಡಿಗೊ ಪಾಟ್ನರ್ಸ್ ಹಾಗೂ ನ್ಯಾಷನಲ್ ಇನ್‌ವೆಸ್ಟ್‌ಮೆಂಟ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಫಂಡ್(ಎನ್‌ಐಐಎಫ್) ಜೆಟ್ ಏರ್‌ವೇಸ್‌ನ ಮೇಲೆ ಹಕ್ಕು ಸಾಧಿಸಲು ಆಸಕ್ತಿ ಹೊಂದಿವೆ ಎನ್ನಲಾಗಿದೆ. ಮೇ 10ರಂದು ಬಿಡ್ಡಿಂಗ್ ಪ್ರಕ್ರಿಯೆಯ ಫಲಿತಾಂಶ ದೊರಕಲಿದ್ದು, ಈ ಮಧ್ಯೆ ಜೆಟ್ ಏರ್‌ವೇಸ್‌ನ 16 ಸ್ವಂತ ವಿಮಾನಗಳನ್ನು ಬಳಸಿಕೊಳ್ಳುವುದೂ ಸೇರಿದಂತೆ ಇತರ ವಿಧಾನಗಳಿಂದ ಆರ್ಥಿಕ ಸಂಪನ್ಮೂಲ ಗಳಿಸಿಕೊಳ್ಳಲು ಸಾಲದಾತ ಬ್ಯಾಂಕ್‌ಗಳು ನಿರ್ಧರಿಸಿವೆ.

ಜೆಟ್ ಏರ್‌ವೇಸ್ ನಷ್ಟದತ್ತ ಜಾರುವಾಗಲೇ ಸಾಲದಾತ ಬ್ಯಾಂಕ್‌ಗಳು ಸಂಸ್ಥೆಯ ಜೊತೆ ಸಂಪರ್ಕದಲ್ಲಿದ್ದು, ನಿರ್ದಿಷ್ಟ ಯೋಜನೆಯನ್ನು ರೂಪಿಸಿ ನಿರ್ಣಯ ಕೈಗೊಳ್ಳುವಂತೆ ಕಳೆದ 9 ತಿಂಗಳಿಂದ ಜೆಟ್ ಏರ್‌ವೇಸ್‌ನ ಆಡಳಿತ ಮಂಡಳಿಯನ್ನು ಆಗ್ರಹಿಸುತ್ತಿದ್ದವು. ದುರದೃಷ್ಟವಶಾತ್ ಸಂಸ್ಥೆಯ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ನಿರ್ಣಯ ರೂಪಿಸಲು ವಿಳಂಬಿಸಿರುವುದು ಈಗಿನ ದುಸ್ಥಿತಿಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News