ಸಚಿನ್ ಸಲಹೆ ಬಯಸಿದ ಪಾಕ್ ದಾಂಡಿಗ ಅಬಿದ್

Update: 2019-04-21 18:36 GMT

ಲಾಹೋರ್, ಎ.21: ಭಾರತ ಹಾಗೂ ಪಾಕಿಸ್ತಾನ ಮಧ್ಯದ ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ನಡುವೆಯೂ ವಿಶ್ವಕಪ್‌ಗೆ ಪಾಕ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಅಬಿದ್ ಅಲಿ, ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್‌ರಿಂದ ಬ್ಯಾಟಿಂಗ್ ಸಲಹೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ಸ್ಥಳೀಯ ಪಂದ್ಯಾವಳಿಗಳಲ್ಲಿ ಮಿಂಚಿರುವ 31 ವರ್ಷ ವಯಸ್ಸಿನ ಅಬಿದ್, ಕಳೆದ ತಿಂಗಳು ಆಸ್ಟ್ರೇಲಿಯ ವಿರುದ್ಧ ಪಾದಾರ್ಪಣೆ ಮಾಡಿದ ಏಕದಿನ ಪಂದ್ಯದಲ್ಲಿಯೇ ಶತಕ ಬಾರಿಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.

ತೆಂಡುಲ್ಕರ್‌ರಷ್ಟೇ ಎತ್ತರ ಹೊಂದಿರುವ ಅಬಿದ್, ಸಚಿನ್ ಶೈಲಿಯಲ್ಲೇ ಬ್ಯಾಟ್ ಬೀಸಬಲ್ಲರು ಆದರೆ ‘ಮಾಸ್ಟರ್ ಬ್ಲಾಸ್ಟರ್’ರ ಪ್ರಮುಖ ದಾಖಲೆಗಳಾದ ಗರಿಷ್ಠ ಟೆಸ್ಟ್ ರನ್ (15, 921), ಗರಿಷ್ಠ ಏಕದಿನ ರನ್ (18, 426), ಗರಿಷ್ಠ ಟೆಸ್ಟ್ ಶತಕಗಳು (51) ಹಾಗೂ ಗರಿಷ್ಠ ಏಕದಿನ ಶತಕಗಳು (49) ಸೇರಿದಂತೆ ಮತ್ತಿತರ ಸಾಧನೆಯನ್ನು ತಲುಪಲು ಅಬಿದ್ ಸಾಕಷ್ಟು ದೂರ ಸಾಗಬೇಕಿದೆ.

‘‘ನನಗೆ ಸಚಿನ್‌ರನ್ನು ಭೇಟಿಯಾಗುವ ಬಯಕೆ ಹಾಗೂ ವಿಶ್ವಾಸ ಇದೆ. ಎಲ್ಲ ದಿಗ್ಗಜ ಆಟಗಾರರು ಕಿರಿಯರಿಗೆ ಭೇಟಿಯಾಗುವಂತೆ, ತೆಂಡುಲ್ಕರ್ ಕೂಡ ನನಗೆ ನಿರಾಸೆ ಮಾಡುವುದಿಲ್ಲ ಎಂಬ ಖಚಿತತೆ ನನಗಿದೆ ’’ ಎಂದು ಅಬಿದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘‘ನಾನು ಸಚಿನ್‌ರಿಂದ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಯಸಿದರೆ, ಅವರು ಧನಾತ್ಮಕ ಪ್ರತಿಕ್ರಿಯೆ ತೋರುತ್ತಾರೆ. ನಾನು ಆರಾಧಿಸುವ ವ್ಯಕ್ತಿಯನ್ನು ಭೇಟಿಯಾದರೆ ಅದೊಂದು ಸ್ಮರಣೀಯ ದಿನವಾಗಲಿದೆ’’ ಎಂದು ಅಬಿದ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News