ಏಳು ಹೈವೋಲ್ಟೇಜ್ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ

Update: 2019-04-22 04:49 GMT

ಹೊಸದಿಲ್ಲಿ, ಎ.22: ಎಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದು ಏಳು ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದೆ. ಇದರಲ್ಲಿ ಪಂಜಾಬ್‌ನ ಅಮೃತಸರ, ಉತ್ತರ ಪ್ರದೇಶದ ಘೋಷಿ ಹಾಗೂ ದಿಲ್ಲಿಯ ನಾಲ್ಕು ಕ್ಷೇತ್ರಗಳು ಸೇರಿವೆ.

ಕೇಂದ್ರ ಸಚಿವ ಹರ್ದೀಪ್ ಪುರಿ ಅಮೃತಸರ ಕ್ಷೇತ್ರದ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದು, ಇವರ ರಾಜ್ಯಸಭಾ ಸದಸ್ಯತ್ವ ಅವಧಿ ಇನ್ನೂ ನಾಲ್ಕೂವರೆ ವರ್ಷ ಇದ್ದರೂ, ಇವರ ಹೆಸರನ್ನು ಅಮೃತಸರ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದೆ. ಇವರು ಹಾಲಿ ಸಂಸದ ಗುರ್ಮೀತ್ ಸಿಂಗ್ ಔಜ್ಲಾ ಹಾಗೂ ಆಮ್ ಆದ್ಮಿ ಪಕ್ಷದ ಕುಲದೀಪ್ ಸಿಂಗ್ ಧಲಿವಾಲ್ ಅವರ ಜತೆ ತ್ರಿಕೋನ ಸ್ಪರ್ಧೆ ಎದುರಿಸಲಿದ್ದಾರೆ.

ಉತ್ತರ ಪ್ರದೇಶದ ಘೋಷಿ ಲೋಕಸಭಾ ಕ್ಷೇತ್ರದ ಬಗ್ಗೆ ಇದ್ದ ಎಲ್ಲ ವದಂತಿಗಳಿಗೂ ಪಕ್ಷ ತೆರೆ ಎಳೆದಿದ್ದು, ಹಾಲಿ ಸಂಸದ ಹರಿನಾರಾಯಣ ರಾಜಭಾರ್ ಅವರಿಗೆ ಟಿಕೆಟ್ ನೀಡಿದೆ. ರಾಜ್‌ಭಾರ್ ಅವರಿಗೆ ಟಿಕೆಟ್ ನೀಡಿದಲ್ಲಿ, ಪೂರ್ವ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸರ್ವನಾಶ ಮಾಡುವುದಾಗಿ ಉತ್ತರ ಪ್ರದೇಶದ ಸಚಿವ ಹಾಗೂ ಸುಹೆಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂಪ್ರಕಾಶ್ ರಾಜ್‌ಭಾರ್ ಘೋಷಿಸಿದ್ದಾರೆ. ಬಿಜೆಪಿ ನಾಯಕರಿಗೆ ತಾಕತ್ತಿದ್ದರೆ ನಮ್ಮನ್ನು ವಜಾಗೊಳಿಸಲಿ ಎಂದು ಸವಾಲು ಹಾಕಿದ್ದಾರೆ.

ಮಧ್ಯಪ್ರದೇಶದ ಇಂಧೋರ್ ಕ್ಷೇತ್ರದಿಂದ ಶಂಕರ್ ಲಾಲ್‌ವಾನಿ, ಬಿಜೆಪಿ ಹುರಿಯಾಳು. ಉಳಿದಂತೆ ಕೇಂದ್ರ ಸಚಿವ ಹರ್ಷವರ್ಧನ್ (ಚಾಂದಿನಿಚೌಕ್), ರಾಜ್ಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ (ಈಶಾನ್ಯ ದಿಲ್ಲಿ), ಪ್ರವೇಶ್ ವರ್ಮಾ (ಪಶ್ಚಿಮ ದಿಲ್ಲಿ) ಹಾಗೂ ರಮೇಶ್ ಬಿಧೂರಿ (ದಕ್ಷಿಣ ದಿಲ್ಲಿ) ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಕ್ಷೇತ್ರಗಳಲ್ಲಿ 6 ಹಾಗೂ 7ನೇ ಹಂತದಲ್ಲಿ ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News