ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ಗೆ ಟಿಕೆಟ್ ನೀಡಿದ್ದು ಸರಿ ಎಂದ ಅಮಿತ್ ಶಾ
ಕೊಲ್ಕತ್ತಾ, ಎ.22: ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ರನ್ನು ಭೋಪಾಲದ ಬಿಜೆಪಿ ಅಭ್ಯರ್ಥಿಯನ್ನಾಗಿಸಿದ ಕ್ರಮವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ. ಆಕೆಯ ವಿರುದ್ಧದ ಆರೋಪಗಳು ಸುಳ್ಳು ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣದ ನಿಜವಾದ ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
“ಇದು ಸಂಪೂರ್ಣವಾಗಿ ಸರಿಯಾದ ತೀರ್ಮಾನ. ಆಕೆಯ ವಿರುದ್ಧದ ಆರೋಪಗಳು ಆಧಾರರಹಿತ. ಆಕೆ ಅಥವಾ ಸ್ವಾಮಿ ಅಸೀಮಾನಂದ್ ವಿರುದ್ಧ ಏನೂ ಸಾಬೀತಾಗಿಲ್ಲ” ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಶಾ ಹೇಳಿದರು.
“ನಿಜವಾದ ತಪ್ಪಿತಸ್ಥರನ್ನು ಬಂಧಿಸಿದ ನಂತರ ಬಿಡುಗಡೆಗೊಳಿಸಲಾಗಿದೆ, ಅವರನ್ನೇಕೆ ಬಿಡುಗಡೆಗೊಳಿಸಲಾಯಿತು ಎಂದು ಕೇಳಬೇಕಾಗಿದೆ” ಎಂದು ಅವರು ಹೇಳಿದರು.
ವಿವಾದಿತ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಹಾಗೂ ಪೌರತ್ವ (ತಿದ್ದುಪಡಿ) ಕಾಯಿದೆಯ ಬಗ್ಗೆ ಮಾತನಾಡಿದ ಶಾ , ವಲಸಿಗರು ಭಯ ಪಡಬೇಕಿಲ್ಲ. ಮರಳಿ ಅಧಿಕಾರಕ್ಕೆ ಬಂದ ನಂತರ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ನಂತರ ನುಸುಳುಕೋರರನ್ನು ಹೊರ ಹಾಕಲು ಎನ್‍ಆರ್ ಸಿ ಜಾರಿಗೊಳಿಸಲಾಗುವುದು ಎಂದರು.
ಬಿಜೆಪಿಗೆ ಬಹುಮತದ ಕೊರತೆ ಎದುರಾದರೆ ಮಮತಾ ಬ್ಯಾನರ್ಜಿಯ ಟಿಎಂಸಿ ಬೆಂಬಲ ಯಾಚಿಸುವುದೇ ಎಂಬ ಪ್ರಶ್ನೆಗೆ ಬಿಜೆಪಿಗೆ ಬಹುಮತ ದೊರೆಯಲಿರುವುದರಿಂದ ಈ ಪ್ರಶ್ನೆ ಎದುರಾಗದು ಎಂದರು.