‘ಎಕ್ಸ್-ರೇ ಕಣ್ಣುಗಳು’ ಹೇಳಿಕೆ: ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಪ್ರಕರಣ ದಾಖಲು

Update: 2019-04-22 10:20 GMT

ರಾಮಪುರ್, ಎ.22: ಬಿಜೆಪಿಯ ರಾಮಪುರ್ ಅಭ್ಯರ್ಥಿ, ಹಿರಿಯ ನಟಿ ಜಯಪ್ರದಾ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಹಾಗೂ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಕುರಿತಂತೆ ನೀಡಿದ ಹೇಳಿಕೆ ನಂತರ ಅವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಪ್ರಕರಣ ದಾಖಲಾಗಿದೆ.

“ಆಝಂ ಖಾನ್ ಅವರು ನನ್ನ ವಿರುದ್ಧ ನೀಡುವ ಹೇಳಿಕೆಗಳನ್ನು ಗಮನಿಸಿ, ಮಾಯಾವತೀ ಜಿ ನೀವು ಯೋಚಿಸಬೇಕು ``ಉನ್ಕಿ ಎಕ್ಸ್-ರೇ ಜೈಸಿ ಆಂಖೇನ್ ಆಪ್ಕೆ ಊಪರ್ ಭಿ ಕಹಾ ಕಹಾ ಡಾಲ್ ಕರ್ ದೇಖೇಂಗಿ (ಮಾಯಾವತೀ ಜಿ  ಅವರ ಎಕ್ಸ್-ರೇ ರೀತಿಯ ಕಣ್ಣು ನಿಮ್ಮ ಮೇಲೆಯೂ ಎಲ್ಲೆಲ್ಲಿ ಬೀಳುವುದು ಎಂಬುದರ ಬಗ್ಗೆ ನೀವು ಯೋಚಿಸಬೇಕು)'' ಎಂದು ಕೇಮ್ರಿ ಎಂಬಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಜಯಪ್ರದಾ ಎಪ್ರಿಲ್ 18ರಂದು ಹೇಳಿದ್ದರು.

ಇದಕ್ಕೂ ಮುಂಚೆ ಆಝಂ ಖಾನ್ ಅವರು ಜಯಪ್ರದಾ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರಲ್ಲದೆ ಚುನಾವಣಾ ಆಯೋಗದಿಂದ 72 ಗಂಟೆಗಳ ನಿಷೇಧಕ್ಕೂ ಒಳಗಾಗಿದ್ದರು.

``ನಾನು ಆಕೆಯನ್ನು (ಜಯಪ್ರದಾ) ರಾಮಪುರ್ ಗೆ ಕರೆದುಕೊಂಡು ಬಂದಿದ್ದೆ. ಯಾರಿಗೂ ಕೂಡ ಆಕೆಯನ್ನು ಮುಟ್ಟಲು ನಾನು ಅವಕಾಶ ನೀಡಿಲ್ಲ ಎಂಬುದಕ್ಕೆ ನೀವು ಸಾಕ್ಷಿ. ಆಕೆಯ ನಿಜ ಮುಖವನ್ನು ಗುರುತಿಸಲು ನಿಮಗೆ 17 ವರ್ಷ ಬೇಕಾಯಿತು ಆದರೆ  ಆಕೆ ಖಾಕಿ ಒಳ ಉಡುಪು ಧರಿಸುತ್ತಾರೆಂದು ನನಗೆ 17 ದಿನಗಳಲ್ಲಿಯೇ ತಿಳಿಯಿತು,'' ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಖಾನ್ ಕೀಳುಮಟ್ಟದ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News