ನಜೀಬ್ ನಾಪತ್ತೆ ಪ್ರಕರಣ: ಅಂತಿಮ ವರದಿಯನ್ನು ತಾಯಿಗೆ ನೀಡುವಂತೆ ಸಿಬಿಐಗೆ ಸೂಚನೆ

Update: 2019-04-22 14:23 GMT

ಹೊಸದಿಲ್ಲಿ, ಎ.22: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣದ ತನಿಖೆ ಮುಕ್ತಾಯಗೊಂಡಿದೆ ಎಂಬ ಅಂತಿಮ ವರದಿ ಕುರಿತಾದ ಎಲ್ಲಾ ದಾಖಲೆಗಳ ಪ್ರತಿಗಳನ್ನು ನಜೀಬ್ ತಾಯಿಗೆ ಎರಡು ವಾರಗಳೊಳಗಾಗಿ ನೀಡಬೇಕೆಂದು ದಿಲ್ಲಿ ನ್ಯಾಯಾಲಯವು ಸಿಬಿಐಗೆ ಇಂದು ಸೂಚಿಸಿದೆ.

ಸಂಬಂಧಿತ ದಾಖಲೆಗಳನ್ನು ಇಲೆಕ್ಟ್ರಾನಿಕ್ ರೂಪದಲ್ಲಿ ಇಲ್ಲವೇ ಕಾಗದದ ಪ್ರತಿಗಳನ್ನು ನೀಡಿ ನಂತರ ತನಿಖಾಧಿಕಾರಿ ನ್ಯಾಯಾಲಯದ ಮುಂದೆ ಮೇ 7ರಂದು ಮುಖತಃ ಹಾಜರಾಗಬೇಕೆಂದು ದಿಲ್ಲಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನವೀನ್ ಕುಮಾರ್ ಕಶ್ಯಪ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಸಿಬಿಐ ಪ್ರಕರಣದ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವುದರ ವಿರುದ್ಧ ನಜೀಬ್ ತಾಯಿ ಫಾತಿಮಾ ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆ ನಡೆಸಿ ನ್ಯಾಯಾಲಯ ಮೇಲಿನ ಆದೇಶ ನೀಡಿದೆ. ಸಾಕ್ಷಿಗಳ ಹೇಳಿಕೆಗಳ ದಾಖಲೆಗಳನ್ನು ಫಾತಿಮಾ ಅವರಿಗೆ ನೀಡಿಲ್ಲ ಎಂದು ಅವರ ವಕೀಲರು ವಿಚಾರಣೆ ಸಂದರ್ಭ ದೂರಿದ್ದರು.

ಅಕ್ಟೋಬರ್ 2016ರಲ್ಲಿ ಕೆಲ ಎಬಿವಿಪಿ ವಿದ್ಯಾರ್ಥಿಗಳ ಜತೆ ಜಗಳದ ನಂತರ ನಜೀಬ್ ನಾಪತ್ತೆಯಾಗಿದ್ದರು. ದಿಲ್ಲಿ ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದೇ ಇದ್ದಾಗ 2017ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಒಂದು ವರ್ಷ ತನಿಖೆ ನಡೆಸಿದ ಸಿಬಿಐಗೂ ನಜೀಬ್ ಪ್ರಕರಣವನ್ನು ಬೇಧಿಸಲು ಸಾಧ್ಯವಾಗಿಲ್ಲ.

ಕಳೆದ ವರ್ಷ ನ್ಯಾಯಾಲಯ ಸಿಬಿಐಗೆ ಈ ಪ್ರಕರಣದ ತನಿಖೆ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಕೆಗೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News