ಚು. ಆಯೋಗ ಪ್ರಜ್ಞಾ ಸಿಂಗ್ ನಾಮಪತ್ರ ರದ್ದುಗೊಳಿಸಿಲ್ಲ ಯಾಕೆ: ಮಾಯಾವತಿ ಪ್ರಶ್ನೆ

Update: 2019-04-22 14:49 GMT

ಲಕ್ನೋ, ಎ. 22: ಭೋಪಾಲದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಜ್ಞಾ ಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದರೂ ಚುನಾವಣಾ ಆಯೋಗ ಅವರ ನಾಮಪತ್ರವನ್ನು ಯಾಕೆ ರದ್ದುಗೊಳಿಸುತ್ತಿಲ್ಲ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಸೋಮವಾರ ಪ್ರಶ್ನಿಸಿದ್ದಾರೆ.

 ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೋಪಾಲದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್, ಚುನಾವಣೆಗೆ ಸ್ಪರ್ಧಿಸುತ್ತಿರುವುದು ಧರ್ಮಯುದ್ಧ ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ನಿರಂತರ ಬಹಿರಂಗಗೊಳ್ಳುತ್ತಿರುವ ಬಿಜೆಪಿ, ಆರೆಸ್ಸೆಸ್‌ನ ನಿಜವಾದ ಮುಖ. ಆದರೆ, ಚುನಾವಣಾ ಆಯೋಗ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೇವಲ ನೋಟಿಸು ಜಾರಿ ಮಾಡುತ್ತಿದೆ. ಬಿಜೆಪಿಯ ರತ್ನ (ಪ್ರಜ್ಞಾ ಸಿಂಗ್ ಠಾಕೂರ್) ದ ನಾಮಪತ್ರವನ್ನು ರದ್ದುಗೊಳಿಸುತ್ತಿಲ್ಲ ಯಾಕೆ ? ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ಗಂಭೀರ ಟೀಕೆಯ ಹೊರತಾಗಿ ಜನರನ್ನು ತೃಪ್ತಿಗೊಳಿಸುವ ನಿಷ್ಪಕ್ಷಪಾತ ರೀತಿಯಲ್ಲಿ ಚುನಾವಣಾ ಆಯೋಗ ಕಾರ್ಯ ನಿರ್ವಹಿಸಲು ಸಾಧ್ಯವಾಗದೇ ಇದ್ದರೆ, ಅದು ಪ್ರಜಾಪ್ರಭುತ್ವದ ಕಳವಳಕಾರಿ ವಿಚಾರ ಎಂದು ಅವರು ಹೇಳಿದರು.

 2008ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಠಾಕೂರ್ ಜಾಮೀನಿನಲ್ಲಿ ಇದ್ದಾರೆ. ನನ್ನ ಶಾಪದಿಂದ 26/11 ಭಯೋತ್ಪಾದಕ ದಾಳಿಯ ಸಂದರ್ಭ ಹೇಮಂತ್ ಕರ್ಕರೆ ಮೃತಪಟ್ಟರು ಎಂದು ಹೇಳಿಕೆ ನೀಡುವ ಮೂಲಕ ಪ್ರಜ್ಞಾ ಸಿಂಗ್ ಠಾಕೂರ್ ತೀವ್ರ ಟೀಕೆಗೆ ಗುರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News