ಪ್ರಜ್ಞಾ ಸಿಂಗ್ ಹೇಳಿಕೆ ಖಂಡಿಸದ ಪ್ರಧಾನಿ: ಬೇಸರ ವ್ಯಕ್ತಪಡಿಸಿದ ಕರ್ಕರೆ ಸಂಬಂಧಿ

Update: 2019-04-22 15:31 GMT

ಮುಂಬೈ,ಎ.22: ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾಗಿರುವ ಮಾಜಿ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆಯವರ ಕುರಿತು ಹೇಳಿಕೆಗಾಗಿ ಅವರ ಭಾವ ಕಿರಣ ದೇವ್ ಅವರು ಸೋಮವಾರ ಭೋಪಾಲ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್‌ರನ್ನು ಕಟುವಾಗಿ ಟೀಕಿಸಿದರು. ಠಾಕೂರ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದಿತ್ತು ಎಂದು ಅವರು ಹೇಳಿದರು.

ಕರ್ಕರೆ ತನ್ನನ್ನು ತನಿಖೆಗೊಳಪಡಿಸಿದ ಸಂದರ್ಭದಲ್ಲಿ ಚಿತ್ರಹಿಂಸೆ ನೀಡಿದ್ದರು ಮತ್ತು ತನ್ನ ಶಾಪದಿಂದಾಗಿಯೇ ಅವರು ಕೊಲ್ಲಲ್ಪಟ್ಟರು ಎಂದು ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಠಾಕೂರ್ ಇತ್ತೀಚಿಗೆ ಹೇಳಿಕೊಂಡಿದ್ದರು. ಈ ಹೇಳಿಕೆಗಾಗಿ ಚುನಾವಣಾ ಆಯೋಗವು ಕಳೆದ ವಾರ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

ಇಲ್ಲಿ ಸುದ್ದಿಗಾರರೊಡನೆ ಮಾತನಾಡಿದ ದೇವ್, ಕರ್ಕರೆಯವರ ಸಾವಿನ ರಾಜಕೀಕರಣ ತನಗೆ ಜಿಗುಪ್ಸೆ ಮೂಡಿಸಿದೆ. ಯಾರೇ ಆದರೂ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುವ ಮೂಲಕ ಹುತಾತ್ಮರನ್ನು ಅವಮಾನಿಸಬಾರದು. ಮಾನವೀಯ ವ್ಯಕ್ತಿಯಾಗಿದ್ದ ಮತ್ತು ಪ್ರತಿಯೊಬ್ಬರನ್ನೂ ಗೌರವದಿಂದ ಮಾತನಾಡಿಸುತ್ತಿದ್ದ ಕರ್ಕರೆಯವರ ಕುರಿತು ಠಾಕೂರ್ ಹೇಳಿಕೆ ತನಗೆ ನೋವನ್ನುಂಟು ಮಾಡಿದೆ. ಅವರಂತಹ ವ್ಯಕ್ತಿ ಠಾಕೂರರನ್ನು ನೋಯಿಸಲು ಎಂದಿಗೂ ಸಾಧ್ಯವಿಲ್ಲ ಎಂಂದರು.

ಠಾಕೂರ್ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸದಿರುವ ಬಗ್ಗೆ ವಿಷಾದಿಸಿದ ಅವರು,ಬಿಜೆಪಿ ಠಾಕೂರ್‌ಗೆ ಟಿಕೆಟ್ ನೀಡಬಾರದಿತ್ತು ಎಂದರು.

ಕರ್ಕರೆಯವರ ಸಾವಿಗೆ ತನ್ನ ಶಾಪ ಕಾರಣ ಎಂದು ಠಾಕೂರ್ ಹೇಳಿದ್ದಾರೆ. ತಾನು ವೈಯಕ್ತಿಕವಾಗಿ ಇಂತಹುದನ್ನು ನಂಬುವುದಿಲ್ಲ. ಮಾನಸಿಕವಾಗಿ ದುರ್ಬಲರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದ ದೇವ್,ತಾನೇನು ಮಾಡಿದ್ದೇನೆ ಎನ್ನುವುದು ಠಾಕೂರ್‌ಗೆ ಗೊತ್ತಿದೆ ಎಂದು ಹೇಳಿದರು.

ತನ್ನ ಕುಟುಂಬದವರ ಹಿಂದಿನ ನಿರೀಕ್ಷೆಗಳು ಈಡೇರಿಲ್ಲವಾದ್ದರಿಂದ ಅವರು ಸರಕಾರದಿಂದ ಏನನ್ನೂ ಬಯಸುತ್ತಿಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News