ಪ್ರಧಾನಿ ಬಯೋಪಿಕ್ ಬಗ್ಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ ಚುನಾವಣಾ ಆಯೋಗ

Update: 2019-04-22 16:30 GMT

ಹೊಸದಿಲ್ಲಿ, ಎ. 22: ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್‌ನ ಬಗ್ಗೆ ವಿವರವಾದ ವರದಿಯನ್ನು ಚುನಾವಣಾ ಆಯೋಗ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಮೋದಿ ಬಯೋಪಿಕ್ ಕುರಿತ ವರದಿ ಸ್ವೀಕರಿಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ವರದಿಯ ಒಂದು ಪ್ರತಿಯನ್ನು ಚಿತ್ರದ ನಿರ್ಮಾಪಕರಿಗೆ ಪೂರೈಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

 ಮೋದಿ ಬಯೋಪಿಕ್‌ಗೆ ಚುನಾವಣಾ ಆಯೋಗ ವಿಧಿಸಿದ ನಿಷೇಧ ಪ್ರಶ್ನಿಸಿ ನಿರ್ಮಾಪಕರು ಸಲ್ಲಿಸಿದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ಪೀಠ ಎ. 26ಕ್ಕೆ ನಿಗದಿಗೊಳಿಸಿದೆ.

ಈ ಹಿಂದಿನ ಆದೇಶ ಮರು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಎಪ್ರಿಲ್ 15ರಂದು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.

ಚುನಾವಣಾ ಆಯೋಗ ಪ್ರೊಮೋ ವೀಕ್ಷಿಸಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ. ಸಂಪೂರ್ಣ ಚಿತ್ರ ವೀಕ್ಷಿಸಿಲ್ಲ ಎಂದು ಚಿತ್ರ ನಿರ್ಮಾಪಕರ ಪರ ವಕೀಲ ಮುಕುಲ್ ರೋಹ್ಟಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಸಂಪೂರ್ಣ ಚಿತ್ರ ಲಭ್ಯವಿಲ್ಲ. ಟ್ರೇಲರ್ ವೀಕ್ಷಿಸಿದ ಬಳಿಕ ಚಿತ್ರ ಬಿಡುಗಡೆಗೆ ನಿಷೇಧ ವಿಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ವಕೀಲ ಅಮಿತ್ ಶರ್ಮಾ ಹೇಳಿದರು.

ಪೂರ್ಣ ಚಿತ್ರ ವೀಕ್ಷಿಸಿ ಹಾಗೂ ಅನಂತರ ಈ ಚಿತ್ರ ಬಿಡುಗಡೆ ಮಾಡಬೇಕೇ, ಮಾಡಬೇಡವೇ ಎಂಬ ಬಗ್ಗೆ ಔಪಚಾರಿಕ ನಿರ್ಧಾರ ತೆಗೆದುಕೊಳ್ಳಿ ಎಂದು ಪೀಠ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News