ಪ್ರಜ್ಞಾ ಸಿಂಗ್ ಚುನಾವಣೆ ಸ್ಪರ್ಧಿಸದಂತೆ ತಡೆ ಅಸಾಧ್ಯ, ಅದು ಚುನಾವಣಾಧಿಕಾರಿಗಳಿಗೆ ಬಿಟ್ಟ ವಿಚಾರ: ಎನ್‌ಐಎ

Update: 2019-04-24 09:38 GMT

  ಹೊಸದಿಲ್ಲಿ, ಎ.24: 2008ರ ಮಾಲೆಗಾಂವ್ ಬಾಂಬು ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೋಪಾಲ್ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಪ್ರಜ್ಞಾ ಠಾಕೂರ್‌ನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆ ಹೇರಬೇಕೆಂದು ಸಲ್ಲಿಸಿರುವ ಅರ್ಜಿಯನ್ನು ಬುಧವಾರ ತಿರಸ್ಕರಿಸಿರುವ ರಾಷ್ಟ್ರೀಯ ತನಿಖಾ ಘಟಕದ(ಎಎನ್‌ಎ) ವಿಶೇಷ ನ್ಯಾಯಾಲಯ, ಈ ವಿಚಾರದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಚುನಾವಣಾ ಅಧಿಕಾರಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದಿದೆ.

‘‘ಈಗ ನಡೆಯುತ್ತಿರುವ ಚುನಾವಣೆಗಳಲ್ಲಿ ಯಾರನ್ನೂ  ಸ್ಪರ್ಧಿಸದಂತೆ ನಿರ್ಬಂಧಿಸುವ ಕಾನೂನು ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಈ ಕುರಿತು ನಿರ್ಧರಿಸುವುದು ಚುನಾವಣಾ ಅಧಿಕಾರಿಗಳ ಕೆಲಸ. ಚುನಾವಣೆ ಸ್ಪರ್ಧಿಸದಂತೆ ನಂ.1 ಆರೋಪಿಯನ್ನು ನ್ಯಾಯಾಲಯ ತಡೆಯುವುದಿಲ್ಲ. ಈ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ’’ ಎಂದು ನ್ಯಾಯಾಲಯ ತಿಳಿಸಿದ್ದಾಗಿ ನ್ಯೂಸ್ ಏಜೆನ್ಸಿ ಎಎನ್‌ಐ ವರದಿ ಮಾಡಿದೆ.

  ಠಾಕೂರ್ ವಿರುದ್ಧ ಇನ್ನೂ ವಿಚಾರಣೆ ನಡೆಯತ್ತಿರುವ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆ ಹೇರಬೇಕೆಂದು ಮಾಲೆಗಾಂವ್ ಬಾಂಬು ಸ್ಫೋಟದಲ್ಲಿ ಬಲಿಯಾದ ಸೈಯದ್ ಅಝರ್ ತಂದೆ ನಿಸಾರ್ ಅಹ್ಮದ್ ಸೈಯದ್ ಬಿಲಾಲ್ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

‘‘ಪ್ರಜ್ಞಾ ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗಿರಲಿಲ್ಲ. ಆದರೆ, ಚುನಾವಣೆಗೆಯ ಪ್ರಚಾರದ ವೇಳೆ ಆಕೆಗೆ ಅನಾರೋಗ್ಯ ಬಾಧಿಸಿದಂತೆ ಕಾಣುತ್ತಿಲ್ಲ’’ ಎಂದು ಅರ್ಜಿದಾರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News