ಪ್ರಜ್ಞಾ ಸಿಂಗ್ ಹೇಳಿಕೆಗೆ ಖಂಡನೆ: ಮುಂಬೈ ಹೀರೋ ಹೇಮಂತ್ ಕರ್ಕರೆಗೆ ನಮನ ಸಲ್ಲಿಸಿದ ಮುಂಬೈ ನಿವಾಸಿಗಳು

Update: 2019-04-24 11:31 GMT

ಮುಂಬೈ, ಎ.24: ಬಿಜೆಪಿಯ ಭೋಪಾಲ್ ಅಭ್ಯರ್ಥಿ, ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಠಾಕೂರ್, ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಅವಮಾನಿಸಿ ನೀಡಿದ ಹೇಳಿಕೆಯನ್ನು ಖಂಡಿಸಿ ಕರ್ಕರೆಗೆ  ಗೌರವ ಸಲ್ಲಿಸಲು ನಗರದ ಮರೀನ್ ಡ್ರೈವ್ ನಲ್ಲಿರುವ ಪೊಲೀಸ್ ಜಿಮ್ಖಾನಾದ ಹೊರಗಡೆ ಮಂಗಳವಾರ ಹಲವಾರು ನಾಗರಿಕರು ಒಂದುಗೂಡಿದರು.

ಹಲವಾರು ರಾಜಕೀಯ ಪಕ್ಷಗಳ ಸದಸ್ಯರೂ ಈ ಕಾರ್ಯಕ್ರಮದ ಭಾಗವಾಗಿದ್ದರಲ್ಲದೆ ಹೇಮಂತ್ ಕರ್ಕರೆಗೆ ನಮನ ಸಲ್ಲಿಸಿದರು. ‘ಲೆಸ್ಟ್ ವಿ ಫೊರ್ಗೆಟ್’ ಎಂದು ಬರೆಯಲಾಗಿರುವ ಪೋಸ್ಟರುಗಳನ್ನೂ ಹಲವರು ಕೈಗಳಲ್ಲಿ ಹಿಡಿದಿದ್ದರು. ಮುಂಬೈಯಲ್ಲಿ 166 ಜನರನ್ನು ಬಲಿ ಪಡೆದ 26/11 ದಾಳಿಯನ್ನು ಖಂಡಿಸಿ ನಡೆದ ಹಲವಾರು ಪ್ರತಿಭಟನೆಗಳಲ್ಲಿ ಇದೇ ರೀತಿ ಬರೆಯಲಾಗಿದ್ದ ಪೋಸ್ಟರುಗಳು ಗಮನ ಸೆಳೆದಿದ್ದವು. ಕರ್ಕರೆ ನವೆಂಬರ್ 26, 2008ರಂದು ಕಾಮಾ ಆಸ್ಪತ್ರೆಯ ಸಮೀಪ ಉಗ್ರರ ಗುಂಡಿಗೆ ಬಲಿಯಾಗಿದ್ದರು.

ಸುಮಾರು 50 ಮಂದಿ ಹಿಡಿದಿದ್ದ ಪೋಸ್ಟರ್ ಒಂದರಲ್ಲಿ ಹೀಗೆ ಬರೆಯಲಾಗಿತ್ತು ``ಕರ್ಕರೆ ಸರ್, ಆಮಿ ಸಾರೆ ಮುಂಬೈಕರ್ ತುಮಚ್ಯ ಸೊಬತ್ ಆಹೊತ್ (ಕರ್ಕರೆ ಸರ್, ನಾವು ಮುಂಬೈ ನಿವಾಸಿಗಳು ನಿಮ್ಮ ಜತೆಗಿದ್ದೇವೆ)”.

ಈ ಸಂದರ್ಭ ಹಾಜರಿದ್ದ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್,  ಕರ್ಕರೆ ಅವರ ಅಂತ್ಯಕ್ರಿಯೆಗೆ 25,000 ಮುಂಬೈ ನಿವಾಸಿಗಳು ಹಾಜರಿದ್ದುದನ್ನು ನೆನಪಿಸಿಕೊಂಡರು. “ಇಂತಹ ಮಹಾನ್ ಅಧಿಕಾರಿಯ ಬಗ್ಗೆ ರಾಜಕೀಯ ಲಾಭಕ್ಕಾಗಿ ನೀಡಲಾದ ವಿಷಪೂರಿತ ಹೇಳಿಕೆಗಳು ನಿಜವಾಗಿಯೂ ದುಃಖಕರ,'' ಎಂದರು.

“ಉಗ್ರ ಪ್ರಕರಣದಲ್ಲಿ ಆರೋಪಿಯಾಗಿರುವವರೊಬ್ಬರಿಂದ ಇಂತಹ ಹೇಳಿಕೆಗಳು ನಿಜಕ್ಕೂ ದುಃಖಕರ'' ಎಂದು ಮಾಜಿ ಹೈಕೋರ್ಟ್ ನ್ಯಾಯಾಧೀಶ ಕಾಂಗ್ರೆಸ್ ಸದಸ್ಯ ಜಸ್ಟಿಸ್ ಅಭಯ್ ತಿಪ್ಸೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News