ಆಮದುಗಳ ಮೇಲೆ ಮೆಕ್ಸಿಕೋದ ಸುಂಕ ಹೆಚ್ಚಳಕ್ಕೆ ತಿರುಗೇಟು ನೀಡಲು ಭಾರತ ಸಜ್ಜು
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಡಿ.14: ಆಮದಾಗುವ ಆಯ್ದ ಭಾರತೀಯ ಉತ್ಪನ್ನಗಳ ಮೇಲೆ ಶೇ.50ರಷ್ಟು ಸುಂಕ ಹೇರಿಕೆಯನ್ನು ಮೆಕ್ಸಿಕೋ ಅನುಮೋದಿಸಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಭಾರತೀಯ ರಫ್ತುದಾರರ ಹಿತಾಸಕ್ತಿಗಳನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತವು ಕಾಯ್ದಿರಿಸಿದೆ ಮತ್ತು ಇದೇ ವೇಳೆ ರಚನಾತ್ಮಕ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಂದುವರಿಸಿದೆ ಎಂದು ಅವರು ಹೇಳಿದರು.
ಸುಂಕ ಹೆಚ್ಚಳ ಮಸೂದೆಯ ಆರಂಭಿಕ ಮಂಡನೆ ಸಂದರ್ಭದಲ್ಲಿ ಭಾರತವು ಮೆಕ್ಸಿಕೋ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಂಡಿತ್ತು ಎಂದರು.
ಜಾಗತಿಕ ವ್ಯಾಪಾರ ನಿಯಮಗಳಿಗೆ ಅನುಗುಣವಾಗಿ ಪರಸ್ಪರ ಲಾಭದಾಯಕ ಪರಿಹಾರವನ್ನು ಕಂಡುಕೊಳ್ಳಲು ವಾಣಿಜ್ಯ ಇಲಾಖೆಯು ಮೆಕ್ಸಿಕೋದ ಆರ್ಥಿಕ ಸಚಿವಾಲಯದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ ಎಂದೂ ಅಧಿಕಾರಿ ತಿಳಿಸಿದರು.
ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರವಾಲ್ ಮತ್ತು ಮೆಕ್ಸಿಕೋದ ಉಪ ಆರ್ಥಿಕ ಸಚಿವ ಲೂಯಿಸ್ ರೊಸೆಂಡೊ ನಡುವೆ ಉನ್ನತ ಮಟ್ಟ ಸಭೆ ನಡೆದಿದ್ದು,ಅನುಸರಣಾ ಸಭೆಗಳನ್ನು ನಿರೀಕ್ಷಿಸಲಾಗಿದೆ.
ಭಾರತವು ಮೆಕ್ಸಿಕೋ ಜೊತೆ ತನ್ನ ಪಾಲುದಾರಿಕೆಯನ್ನು ಗೌರವಿಸುತ್ತದೆ ಹಾಗೂ ಉಭಯ ದೇಶಗಳ ಉದ್ಯಮಗಳು ಮತ್ತು ಗ್ರಾಹಕರಿಗೆ ಪ್ರಯೋಜನಕಾರಿಯಾದ ಸ್ಥಿರ ಮತ್ತು ಸಮತೋಲಿತ ವ್ಯಾಪಾರ ವಾತಾವರಣಕ್ಕಾಗಿ ಸಹಯೋಗದಿಂದ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅಧಿಕಾರಿ ಹೇಳಿದರು.
ವಾಹನ ಬಿಡಿಭಾಗಗಳು, ಲಘು ಕಾರುಗಳು,ಬಟ್ಟೆ, ಪ್ಲಾಸ್ಟಿಕ್, ಉಕ್ಕು, ಗೃಹೋಪಯೋಗಿ ಉಪಕರಣಗಳು, ಆಟಿಕೆಗಳು, ಪೀಠೋಪಕರಣಗಳು,ಪಾದರಕ್ಷೆ,ಚರ್ಮದ ಸರಕುಗಳು, ಕಾಗದ, ಕಾರ್ಡ್‌ಬೋರ್ಡ್, ಮೋಟರ್‌ಸೈಕಲ್ ಗಳು, ಅಲ್ಯುಮಿನಿಯಂ,ಟ್ರೇಲರ್ ಗಳು, ಗಾಜು, ಸಾಬೂನು, ಸುಗಂಧ ದ್ರವ್ಯ ಮತ್ತು ಸೌಂದರ್ಯ ವರ್ಧಕಗಳಂತಹ ಸರಕುಗಳ ಮೇಲೆ ಆಮದು ಸುಂಕವನ್ನು ಮೆಕ್ಸಿಕೋ ಹೇರಿದೆ.
ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದವನ್ನು ಹೊಂದಿರದ ಭಾರತ, ದಕ್ಷಿಣ ಕೊರಿಯಾ, ಚೀನಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ದೇಶಗಳ ಮೇಲೆ ಸುಂಕ ಹೆಚ್ಚಳವು ಪರಿಣಾಮವನ್ನು ಬೀರಲಿದೆ.
ಭಾರತ ಮತ್ತು ಮೆಕ್ಸಿಕೋ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಆರಂಭಿಸಲೂ ಬಯಸಿದ್ದು,ಇದು ಈ ಸುಂಕಗಳ ವಿರುದ್ಧ ಭಾರತೀಯ ಕಂಪನಿಗಳಿಗೆ ರಕ್ಷಣೆ ಒದಗಿಸುವಲ್ಲಿ ನೆರವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.