ಆಕ್ರೋಶಕ್ಕೆ ಕಾರಣವಾದ ಮಧ್ಯಪ್ರದೇಶ ಸಚಿವರ ಲಾಡಲಿ ಬಹನಾ ಫಲಾನುಭವಿಗಳ ಕುರಿತ ಹೇಳಿಕೆ
ವಿಜಯ ಶಾ | Photo Credit : NDTV
ಭೋಪಾಲ,ಡಿ.14: ರಾಜ್ಯ ಸರಕಾರದ ಮುಂಚೂಣಿಯ ಲಾಡಲಿ ಬಹನಾ ಯೋಜನೆಯ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಸಂಪುಟ ಸಚಿವ ವಿಜಯ ಶಾ ಅವರ ಹೇಳಿಕೆಯು ಅವರನ್ನು ವಿವಾದದಲ್ಲಿ ಸಿಲುಕಿಸಿದೆ. ಇದೊಂದು ಬಲವಂತದ ಮತ್ತು ಬೆದರಿಕೆಯ ಹೇಳಿಕೆಯಾಗಿದೆ ಎಂಬ ವ್ಯಾಪಕ ಅಭಿಪ್ರಾಯಗಳು ವ್ಯಕ್ತವಾಗಿವೆ.
ಈ ಹಿಂದೆ ಕರ್ನಲ್ ಸೋಫಿಯಾ ಕುರೇಶಿ ಅವರ ಕುರಿತು ಹೇಳಿಕೆಗಳಿಂದಾಗಿ ಶಾ ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು.
ಶಾ ಉಸ್ತುವಾರಿ ಸಚಿವರಾಗಿರುವ ರತ್ಲಾಂ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಲಹಾ ಸಮಿತಿ ಸಭೆಯಲ್ಲಿ ಈ ಹೇಳಿಕೆಗಳು ಹೊರಬಿದ್ದಿವೆ. ಸರಕಾರವು ಲಾಡಲಿ ಬಹನಾ ಯೋಜನೆಯಡಿ ಕೋಟ್ಯಂತರ ರೂ.ಗಳನ್ನು ವಿತರಿಸುತ್ತಿರುವುದರಿಂದ ಫಲಾನುಭವಿಗಳು ಮುಖ್ಯಮಂತ್ರಿಗಳಿಗೆ ಗೌರವ ತೋರಿಸಲು ಮುಂದೆ ಬರಬೇಕು,ಇದಕ್ಕೆ ವಿಫಲರಾದವರ ಅರ್ಜಿಗಳನ್ನು ತಡೆಹಿಡಿಯಲಾಗುತ್ತದೆ ಎಂದು ಶಾ ಹೇಳಿದ್ದರು.
ಜಿಲ್ಲೆಯಲ್ಲಿನ ಲಾಡಲಿ ಬಹನಾ ಫಲಾನುಭವಿಗಳ ಸಂಖ್ಯೆ ಕುರಿತು ಶಾ ಅವರ ಪ್ರಶ್ನೆಗೆ ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸುಮಾರು 2.5 ಲಕ್ಷ ಎಂದು ಉತ್ತರಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,ಮುಖ್ಯಮಂತ್ರಿಗಳು ಅಧಿಕಾರದಲ್ಲಿ ಎರಡು ವರ್ಷಗಳನ್ನು ಪೂರೈಸಿರುವುದರಿಂದ 2.5 ಲಕ್ಷ ಫಲಾನುಭವಿಗಳ ಪೈಕಿ ಕನಿಷ್ಠ 50,000 ಮಹಿಳೆಯರು ಅವರಿಗೆ ಗೌರವ ತೋರಿಸಲು ಮಂದೆ ಬರಬೇಕು ಎಂದು ಹೇಳಿದ್ದರು.
‘ಪ್ರತಿ ಮಹಿಳೆಗೆ ಮಾಸಿಕ 1,500 ರೂ.ಗಳಂತೆ ಸರಕಾರವು ಕೋಟ್ಯಂತರ ರೂ.ಗಳನ್ನು ನೀಡುತ್ತಿದೆ. ಹೀಗಾಗಿ ಕನಿಷ್ಠ ಎರಡು ವರ್ಷಗಳಿಗೊಮ್ಮೆಯಾದರೂ ಧನ್ಯವಾದ ಹೇಳುವುದು ಅಗತ್ಯ. ನಾವು ಆಹಾರದ ವ್ಯವಸ್ಥೆಯನ್ನು ಮಾಡುತ್ತೇವೆ. ಬರದವರಿಗೆ ಏನಾಗುತ್ತದೆ ನೋಡೋಣ’ ಎಂದು ಶಾ ಹೇಳಿದ್ದರು.
ನಂತರ ಇನ್ನಷ್ಟು ವಿವಾದಾತ್ಮಕ ಹೇಳಿಕೆಯನ್ನು ಅವರು ನೀಡಿದ್ದರು. ಪಾವತಿಯನ್ನು 250 ರೂ.ಗಳಷ್ಟು ಹೆಚ್ಚಿಸಲಾಗಿರುವ ಫಲಾನುಭವಿಗಳ ಕುರಿತು ತನಿಖೆ ನಡೆಸಲಾಗುವುದು. ಯಾರಾದರೂ ಆಧಾರ್‌ನ್ನು ಲಿಂಕ್ ಮಾಡಿರದಿದ್ದರೆ ಅವರ ಅರ್ಜಿಗಳನ್ನು ತಡೆಹಿಡಿಯಲಾಗುತ್ತದೆ. ಅಂದರೆ ಅದು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಆಗ ಎಲ್ಲರೂ ಬರುತ್ತಾರೆ ಎಂದು ಹೇಳಿದ್ದರು.
ಸಚಿವರ ಹೇಳಿಕೆಯಿಂದ ಸಭೆಯಲ್ಲಿದ್ದ ಹಲವಾರು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಅಸಮಾಧಾನಗೊಂಡಂತೆ ಗೋಚರವಾಗಿತ್ತು.
ಶಾ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಅದನ್ನು ಅಸಾಂವಿಧಾನಿಕ ಮತ್ತು ಬೆದರಿಕೆ ಎಂದು ಬಣ್ಣಿಸಿದೆ.