×
Ad

Messi ಕಾರ್ಯಕ್ರಮದಲ್ಲಿ ದಾಂಧಲೆ ಪ್ರಕರಣ | ಆಯೋಜಕ ಸತಾದ್ರುಗೆ ನೋ'ಬೇಲ್'!

Update: 2025-12-14 22:02 IST

ಲಯೊನೆಲ್ ಮೆಸ್ಸಿ | Photo Credit : PTI 

ಕೋಲ್ಕತಾ,ಡಿ.14 : ಫುಟ್ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ , ಶನಿವಾರ ಕೋಲ್ಕತಾದ ಸಾಲ್ಟ್‌ಲೇಕ್ ಕ್ರೀಡಾಂಗಣಕ್ಕೆ ಆಗಮಿಸಿದ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿತರಾದ ಕಾರ್ಯಕ್ರಮದ ಆಯೋಜಕ ಸತಾದ್ರು ದತ್ತಾ ಅವರಿಗೆ ಜಾಮೀನು ನೀಡಲು ಸ್ಥಳೀಯ ನ್ಯಾಯಾಲಯ ನಿರಾಕರಿಸಿದೆ. ಅವರನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಸತಾದ್ರು ಅವರು ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಯೋನೆಲ್ ಮೆಸ್ಸಿ ಅವರ ‘GOAT(ಸಾರ್ವಕಾಲಿಕ ಶ್ರೇಷ್ಠ) India Tourನ ಮುಖ್ಯ ಪ್ರವರ್ತಕ ಹಾಗೂ ಆಯೋಜಕರಾಗಿದ್ದಾರೆ.

ದತ್ತಾ ಅವರನ್ನು ಭಿದಾನ್ ನಗರ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಮುಂದೆ ಹಾಜರುಪಡಿಸಲಾಯಿತು. ಜಾಮೀನು ನೀಡುವಂತೆ ಅವರ ವಕೀಲರು ಮನವಿ ಮಾಡಿದರೆ, ಪೊಲೀಸರು ತಮ್ಮ ಕಸ್ಟಡಿಗೆ ನೀಡುವಂತೆ ಆಗ್ರಹಿಸಿದರು. ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ದತ್ತಾ ಅವರಿಗೆ ಜಾಮೀನು ನಿರಾಕರಿಸಿ, 14 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು.

ದಾಂಧಲೆ ಪ್ರಕರಣದಲ್ಲಿ ದತ್ತಾ ಅವರನ್ನು ವಿನಾಕಾರಣ ಸಿಲುಕಿಸಲಾಗಿದೆ. ಮೆಸ್ಸಿ ಅವರ ಮುಂದೆಯೇ ದತ್ತಾರನ್ನು ಬಂಧಿಸಿರುವುದು ಅವರ ವರ್ಚಸ್ಸಿಗೆ ಕಳಂಕ ತಂದಿದೆಯೆಂದು ಅವರ ವಕೀಲರು ವಾದಿಸಿದರು.

ಕಾರ್ಯಕ್ರಮದ ಕಳಪೆ ನಿರ್ವಹಣೆ ಹಾಗೂ ಅವ್ಯವಸ್ಥೆಗೆ ಆಯೋಜಕರೇ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ವಾದಿಸಿದ್ದರು. ದಾಂಧಲೆ ನಡೆದ ಸ್ಥಳದಲ್ಲಿ ಪುರಾವೆ ಸಂಗ್ರಹಿಸಲು ಹಾಗೂ ಸಹ ಆರೋಪಿಗಳನ್ನು ಗುರುತಿಸಲು ದತ್ತಾರನ್ನು ಕಸ್ಟಡಿಗೊಪ್ಪಿಸಬೇಕೆಂದು ಪೊಲೀಸರು ಆಗ್ರಹಿಸಿದ್ದರು.

ಶನಿವಾರ ಮೆಸ್ಸಿ ಅವರು ಕೋಲ್ಕತಾದ ಸಾಲ್ಟ್‌ ಲೇಕ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಆಗಮಿಸಿದ ಕೆಲವೇ ನಿಮಿಷಗಳಲ್ಲಿ ಸ್ಥಳದಿಂದ ನಿರ್ಗಮಿಸಿದ್ದರು. ಇದರಿಂದಾಗಿ ಅವರನ್ನು ನೋಡಲೆಂದೇ ದುಬಾರಿ ಮೊತ್ತದ ಟಿಕೆಟ್ ಪಡೆದು ಸ್ಟೇಡಿಯಂಗೆ ಆಗಮಿಸಿದ್ದ ಅಭಿಮಾನಿಗಳು ನಿರಾಶರಾಗಿ ಆಯೋಜಕರ ವಿರುದ್ಧ ರೊಚ್ಚಿಗೆದ್ದು ದಾಂಧಲೆ ನಡೆಸಿದರು.

ಕುರ್ಚಿ, ಬಾಟಲಿ ಸೇರಿದಂತೆ ಕೈಗೆ ಸಿಕ್ಕಿ ವಸ್ತುಗಳನ್ನೆಲ್ಲಾ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News