×
Ad

ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಐತಿಹಾಸಿಕ ಕ್ಷಣ; PCIನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಸಂಗೀತಾ ಬರೂಹಾ ಪಿಶಾರೋಟಿ ಆಯ್ಕೆ

Update: 2025-12-14 21:43 IST

ಸಂಗೀತಾ ಬರೂಹಾ ಪಿಶಾರೋಟಿ | Photo Credit :  Sangeeta Barooah Pisharoty \  Facebook 

ಹೊಸದಿಲ್ಲಿ, ಡಿ.14: ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತೆ ಸಂಗೀತಾ ಬರೂಹಾ ಪಿಶಾರೋಟಿ ಅವರು ಡಿಸೆಂಬರ್ 13ರಂದು ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಕ್ಲಬ್‌ನ ಮೊದಲ ಮಹಿಳಾ ಅಧ್ಯಕ್ಷೆಯಾದರು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಪಿಶಾರೋಟಿ ಅವರು 1,019 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದರು. ಅವರ ಪ್ರತಿಸ್ಪರ್ಧಿಗಳಾದ ಅತುಲ್ ಮಿಶ್ರಾ ಅವರಿಗೆ 129 ಹಾಗೂ ಅರುಣ್ ಶರ್ಮಾ ಅವರಿಗೆ 89 ಮತಗಳು ಲಭಿಸಿವೆ. ಪಿಶಾರೋಟಿ ನೇತೃತ್ವದ ತಂಡವು ಎಲ್ಲಾ ಪದಾಧಿಕಾರಿಗಳ ಸ್ಥಾನಗಳು ಹಾಗೂ 16 ಸದಸ್ಯರನ್ನೊಳಗೊಂಡ ವ್ಯವಸ್ಥಾಪಕ ಸಮಿತಿಯ ಸ್ಥಾನಗಳನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿದೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಫ್ಝಲ್ ಇಮಾಮ್ 948 ಮತಗಳೊಂದಿಗೆ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಜತಿನ್ ಗಾಂಧಿ 1,029 ಮತಗಳನ್ನು ಪಡೆದು ಭಾರಿ ಅಂತರದ ಜಯ ದಾಖಲಿಸಿದರು. ಖಜಾಂಚಿ ಹುದ್ದೆಗೆ ಅದಿತಿ ರಜಪೂತ್ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಪಿ.ಆರ್. ಸುನಿಲ್ ಅವಿರೋಧವಾಗಿ ಆಯ್ಕೆಯಾದರು.

ವ್ಯವಸ್ಥಾಪಕ ಸಮಿತಿಯ ಚುನಾವಣೆಯಲ್ಲಿ ನೀರಜ್ ಕುಮಾರ್ 932 ಮತಗಳೊಂದಿಗೆ ಅಗ್ರಸ್ಥಾನ ಪಡೆದರು. ಅವರೊಂದಿಗೆ ಅಭಿಷೇಕ್ ಕುಮಾರ್ ಸಿಂಗ್, ಜಹಾನ್ವಿ ಸೇನ್, ಅಶೋಕ್ ಕೌಶಿಕ್, ಕಲ್ಲೋಲ್ ಭಟ್ಟಾಚಾರ್ಜಿ, ಪ್ರವೀಣ್ ಜೈನ್ ಸೇರಿದಂತೆ ಇನ್ನಿತರ 15 ಮಂದಿ ಆಯ್ಕೆಯಾದರು.

ಪಿಸಿಐನ ಮುಖ್ಯ ಚುನಾವಣಾ ಆಯುಕ್ತ ಎಂ.ಎಂ.ಸಿ. ಶರ್ಮಾ ರವಿವಾರ ಸಂಜೆ ಪಿಸಿಐ ಲಾನ್ಸ್‌ ನಲ್ಲಿ ಫಲಿತಾಂಶ ಘೋಷಿಸಿದರು.

ಫಲಿತಾಂಶದ ಬಳಿಕ ಮಾತನಾಡಿದ ಪಿಶಾರೋಟಿ, “ಮುಕ್ತ, ನ್ಯಾಯಸಮ್ಮತ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡುವ ನಮ್ಮ ಬದ್ಧತೆಯ ಮೇಲೆ ಸದಸ್ಯರು ವ್ಯಕ್ತಪಡಿಸಿದ ವಿಶ್ವಾಸವೇ ಈ ಗೆಲುವು,” ಎಂದು ಹೇಳಿದರು.

ನಿರ್ಗಮಿತ ಅಧ್ಯಕ್ಷ ಗೌತಮ್ ಲಹಿರಿ ಅವರು ಪಿಸಿಐ ಸದಸ್ಯರಿಗೆ ಧನ್ಯವಾದ ಸಲ್ಲಿಸಿ, ನೂತನ ತಂಡವು ಕ್ಲಬ್ ಅನ್ನು ಇನ್ನಷ್ಟು ಸ್ಪಂದನಶೀಲ ಸಂಸ್ಥೆಯಾಗಿ ರೂಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಗಮಿತ ಪ್ರಧಾನ ಕಾರ್ಯದರ್ಶಿ ನೀರಜ್ ಠಾಕೂರ್ ಅವರು, “ಪಿಸಿಐಗೆ ಮೊದಲ ಮಹಿಳಾ ಅಧ್ಯಕ್ಷೆಯ ಆಯ್ಕೆಯು ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳತ್ತ ಕ್ಲಬ್‌ ನ ಬದ್ಧತೆಯ ಮಹತ್ವದ ಸಂಕೇತ,” ಎಂದು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News