ಚುನಾವಣಾ ಪ್ರಚಾರದಲ್ಲಿ ವಾಯುದಾಳಿ ಉಲ್ಲೇಖಿಸಿದ ಮೋದಿ: ಶೀಘ್ರ ಕ್ರಮ ಎಂದ ಚು.ಆಯೋಗ

Update: 2019-04-24 15:20 GMT

ಹೊಸದಿಲ್ಲಿ.ಎ.24: ಸಶಸ್ತ್ರ ಪಡೆಗಳನ್ನು ರಾಜಕೀಯಗೊಳಿಸುತ್ತಿರುವ ಹೇಳಿಕೆಗಳ ಪ್ರಕರಣದಲ್ಲಿ ಶೀಘ್ರವೇ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ(ಇಸಿ)ವು ಬುಧವಾರ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಬಾಲಕೋಟ್ ವಾಯುದಾಳಿಯನ್ನು ಬಳಸಿಕೊಳ್ಳುತ್ತಿದ್ದರೂ ಆಯೋಗವು ನಿಷ್ಕ್ರಿಯವಾಗಿದೆ ಎಂಬ ಪ್ರತಿಪಕ್ಷಗಳ ಭಾರೀ ಟೀಕೆಗಳ ನಡುವೆಯೇ ಇಸಿ ಈ ಹೇಳಿಕೆಯನ್ನು ನೀಡಿದೆ.

ಪಾಕಿಸ್ತಾನದ ಬಾಲಕೋಟ್‌ನಲ್ಲಿಯ ಜೈಷೆ ಮುಹಮ್ಮದ್ ಶಿಬಿರದ ಮೇಲೆ ಭಾರತೀಯ ವಾಯುಪಡೆಯ ದಾಳಿಗಳನ್ನು ಹಲವಾರು ನಾಯಕರು ಉಲ್ಲೇಖಿಸಿದ ಬಳಿಕ ಆಯೋಗವು,ಚುನಾವಣಾ ಪ್ರಚಾರದಲ್ಲಿ ಸಶಸ್ತ್ರ ಪಡೆಗಳನ್ನು ಎಳೆಯದಂತೆ ರಾಜಕೀಯ ನಾಯಕರಿಗೆ ನಿರ್ದೇಶ ನೀಡಿತ್ತು.

ಆದರೆ ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರವಾದವನ್ನು ಚುನಾವಣೆಯಲ್ಲಿ ಪ್ರಮುಖ ವಿಷಯಗಳನ್ನಾಗಿ ಮಾಡಿಕೊಂಡಿರುವ ಬಿಜೆಪಿಯಿಂದ ಆಯೋಗದ ಆದೇಶದ ಕಡೆಗಣನೆ ಮಾಮೂಲಾಗಿದೆ. ಬಿಜೆಪಿಯ ನಡವಳಿಕೆ ಮಾದರಿ ನೀತಿಯನ್ನು ಉಲ್ಲಂಘಿಸಿದೆಯೇ ಮತ್ತು ಕ್ರಮಕ್ಕೆ ಅರ್ಹವೇ ಎನ್ನುವುದನ್ನು ಆಯೋಗವು ಈಗ ನಿರ್ಧರಿಸಬೇಕಿದೆ.

ಬುಧವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಯೋಗದ ಉನ್ನತ ಅಧಿಕಾರಿಯೋರ್ವರು,ಶೀಘ್ರವೇ ಕ್ರಮವನ್ನು ಕೈಗೊಳ್ಳಲಾಗುವುದು. ಚುನಾವಣೆಗಳು ಮುಗಿಯುವವರೆಗೂ ನಾವು ಕಾಯುವುದಿಲ್ಲ. ಚುನಾವಣಾಧಿಕಾರಿಗಳು ವಿವ ರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯು ಮಾತ್ರ ದೇಶದ ಬಗ್ಗೆ ಕಾಳಜಿಯನ್ನು ಹೊಂದಿದೆ ಎಂಬ ಅಭಿಪ್ರಾಯವನ್ನು ಮೂಡಿಸಲು ಮತ್ತು ಪ್ರತಿಪಕ್ಷಗಳಿಗೆ ರಾಷ್ಟ್ರವಿರೋಧಿಗಳು ಎಂಬ ಹಣೆಪಟ್ಟಿಯನ್ನು ಅಂಟಿಸಲು ಮೋದಿ ಸರಕಾರವು ಸಶಸ್ತ್ರ ಪಡೆಗಳ ಯಶಸ್ಸುಗಳನ್ನು ಬಳಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News