“ಚುನಾವಣೆಗೆ ಕೆಲ ದಿನಗಳ ಮೊದಲು ‘ಆಯ್ದ ವ್ಯಕ್ತಿ’ಗಳಿಗೆ ಮದ್ಯದ ಪರವಾನಿಗೆ ನೀಡಿದ ಮೋದಿ”

Update: 2019-04-24 17:36 GMT

ಸೇರಾಂಪೋರ್(ಪ.ಬಂ),ಎ.24: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ಕ್ರಮದ ಮೂಲಕ ಭಾರೀ ಪ್ರಮಾಣದ ಕಪ್ಪುಹಣವನ್ನು ಬಿಳಿಹಣವನ್ನಾಗಿ ಪರಿವರ್ತಿಸಿದ್ದಾರೆ ಮತ್ತು ಅದನ್ನು ಮತಗಳ ಖರೀದಿಗಾಗಿ ವ್ಯಯಿಸುತ್ತಿದ್ದಾರೆ ಎಂದು ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಇಲ್ಲಿ ಆರೋಪಿಸಿದರು.

ಬಿಜೆಪಿಯು ತನ್ನ ಪರವಾಗಿ ಮತಗಳು ಬೀಳುವಂತೆ ಮಾಡಲು ಬಂದೂಕುಗಳು ಮತ್ತು ಗೂಂಡಾಗಳನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು,ಬಂಗಾಳದಲ್ಲಿ ಇದಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದರು.

ಹೂಗ್ಲಿ ಜಿಲ್ಲೆಯ ಸೇರಾಂಪೋರ್‌ನಲ್ಲಿ ತೃಣಮೂಲ ಅಭ್ಯಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಬ್ಯಾನರ್ಜಿ, ಚುನಾವಣೆಗಳ ಬಳಿಕ ಮೋದಿಯವರು ಅಧಿಕಾರ ಕಳೆದುಕೊಳ್ಳುವುದು ಖಚಿತ. ನೋಟು ನಿಷೇಧ ಎಷ್ಟೊಂದು ದೊಡ್ಡ ಹಗರಣವಾಗಿತ್ತು ಎನ್ನುವುದನ್ನು ನಮ್ಮ ಸರಕಾರವು ಸಾಬೀತುಗೊಳಿಸಲಿದೆ ಎಂದರು.

ವಾತಾವರಣವನ್ನು ಕಲುಷಿತಗೊಳಿಸಲು ಮತ್ತು ಭೀತಿಯನ್ನು ಹುಟ್ಟುಹಾಕಲು ಬಿಜೆಪಿಯ ಗೂಂಡಾಗಳು ಶಸ್ತ್ರಾಸ್ತ್ರಗಳೊಂದಿಗೆ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ ಎಂದ ಅವರು,ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಕಾಯ್ದುಕೊಳ್ಳಲು ಇಂತಹ ಪ್ರಯತ್ನಗಳನ್ನು ನಾವು ವಿಫಲಗೊಳಿಸಬೇಕಿದೆ ಎಂದರು.

ಚುನಾವಣೆಗೆ ಕೆಲವೇ ದಿನಗಳ ಮುನ್ನ ಮೋದಿಯವರು ಕೆಲವು ಆಯ್ದ ಜನರಿಗೆ ಮದ್ಯದ ಪರವಾನಿಗೆಗಳನ್ನು ವಿತರಿಸಿದ್ದಾರೆ ಎಂದು ಆರೋಪಿಸಿದ ಬ್ಯಾನರ್ಜಿ,ತೃಣಮೂಲ ಸರಕಾರವು ಈ ಹಗರಣವನ್ನು ಭೇದಿಸಲಿ ಮತ್ತು ಅವರ ನಿಜವಾದ ಮುಖವನ್ನು ಬಯಲುಗೊಳಿಸಲಿದೆ ಎಂದರು.

ಪ.ಬಂಗಾಳದಲ್ಲಿ ಬಿಜೆಪಿಯು ಒಂದೂ ಸ್ಥಾನವನ್ನು ಗೆಲ್ಲುವುದಿಲ್ಲ. ಎಲ್ಲ 42 ಸ್ಥಾನಗಳನ್ನು ತೃಣಮೂಲ ಗೆಲ್ಲಲಿದೆ ಮತ್ತು ಇತರ ಸಮಾನ ಮನಸ್ಕ ಜಾತ್ಯತೀತ ಪಕ್ಷಗಳೊಂದಿಗೆ ಸೇರಿ ಕೇಂದ್ರದಲ್ಲಿ ಸರಕಾರ ರಚಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News