ಶಂಕಿತರ ಪತ್ತೆಗೆ ಸಾವಿರಾರು ಸೈನಿಕರ ನಿಯೋಜನೆ

Update: 2019-04-25 17:22 GMT

ಕೊಲಂಬೊ, ಎ. 25: ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟಗಳ ಶಂಕಿತರಿಗಾಗಿನ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ನೆರವು ನೀಡಲು ಶ್ರೀಲಂಕಾವು ರಾತೋರಾತ್ರಿ ಸಾವಿರಾರು ಸೈನಿಕರನ್ನು ನಿಯೋಜಿಸಿದೆ.

ಭಯೋತ್ಪಾದಕ ದಾಳಿಗಳು ನಡೆದ ಬೆನ್ನಿಗೇ, ದ್ವೀಪ ರಾಷ್ಟ್ರದಲ್ಲಿ ರಾಜಕೀಯ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಅಧಿಕಾರದಿಂದ ಕೆಳಗಿಳಿಯುವಂತೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ದೇಶದ ಪೊಲೀಸ್ ಮುಖ್ಯಸ್ಥ ಮತ್ತು ರಕ್ಷಣಾ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಆದಾಗ್ಯೂ, ಅವರು ಈವರೆಗೆ ರಾಜೀನಾಮೆ ನೀಡಿಲ್ಲ.

ಭದ್ರತಾ ಪಡೆಗಳು ಬುಧವಾರ ರಾತ್ರಿ, ತುರ್ತು ಪರಿಸ್ಥಿತಿಯ ಹೇರಿಕೆಯಿಂದ ಲಭ್ಯವಾದ ವಿಶೇಷ ಅಧಿಕಾರಗಳನ್ನು ಬಳಸಿಕೊಂಡು, ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಇನ್ನೂ 16 ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರು ಈಗಾಗಲೇ 75 ಮಂದಿಯನ್ನು ಬಂಧಿಸಿದ್ದಾರೆ. ಆದರೆ, ಹಲವು ಆರೋಪಿಗಳು ಹೊರಗಿರುವ ಹಿನ್ನೆಲೆಯಲ್ಲಿ ಉದ್ವಿಗ್ನತೆ ಮುಂದುವರಿದಿದೆ.

ಸೇನೆಯು ಭಯೋತ್ಪಾದನೆ ನಿಗ್ರಹಕ್ಕಾಗಿ ನಿಯೋಜನೆಗೊಂಡಿರುವ ತನ್ನ ಸೈನಿಕರ ಸಂಖ್ಯೆಯನ್ನು ಬುಧವಾರ ರಾತ್ರಿ 1,300ರಿಂದ 6,300ಕ್ಕೆ ಏರಿಸಿದೆ. ನೌಕಾಪಡೆ ಮತ್ತು ವಾಯುಪಡೆಗಳು 2,000 ಸಿಬ್ಬಂದಿಯನ್ನು ನಿಯೋಜಿಸಿವೆ.

ಒಂಬತ್ತು ದಾಳಿಕೋರರ ಪೈಕಿ 8 ಮಂದಿಯನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರಕಾರದ ಭಾರೀ ಕರ್ತವ್ಯಲೋಪ

ಭಯೋತ್ಪಾದಕ ದಾಳಿಗಳ ಬಗ್ಗೆ ಪಡೆಯಲಾದ ಮಹತ್ವದ ಮುನ್ನೆಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ವರದಿಗಳು ಹೊರಬಿದ್ದ ಬಳಿಕ ಸರಕಾರವು ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಪ್ರಯಾಸ ಪಡುತ್ತಿದೆ.

ಸ್ಥಳೀಯ ಭಯೋತ್ಪಾದಕ ಗುಂಪು ನ್ಯಾಶನಲ್ ತೌಹೀದ್ ಜಮಾಅತ್ (ಎನ್‌ಟಿಜೆ) ‘ಪ್ರಮುಖ ಚರ್ಚ್‌ಗಳ’ ಮೇಲೆ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ ಎಂಬುದಾಗಿ ವಿದೇಶಿ ಗುಪ್ತಚರ ಸಂಸ್ಥೆಯೊಂದನ್ನು ಉಲ್ಲೇಖಿಸಿ ಶ್ರೀಲಂಕಾ ಪೊಲೀಸ್ ಮುಖ್ಯಸ್ಥ ಎಪ್ರಿಲ್ 11ರಂದು ಎಚ್ಚರಿಕೆ ನೀಡಿದ್ದರು.

ದಾಳಿಗಳು ನಡೆಯುವ ವಾರಗಳ ಮೊದಲು ಈ ‘ಅಸಾಧಾರಣ ನಿರ್ದಿಷ್ಟ’ ಮಾಹಿತಿಗಳನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ನೀಡಿವೆ ಹಾಗೂ ಈ ಪೈಕಿ ಕೆಲವು ಮಾಹಿತಿಯನ್ನು ತಮ್ಮ ಸುಪರ್ದಿಯಲ್ಲಿರುವ ಐಸಿಸ್ ಶಂಕಿತನಿಂದ ಅವುಗಳು ಪಡೆದುಕೊಂಡಿದ್ದವು ಎಂದು ಅಮೆರಿಕದ ಸುದ್ದಿವಾಹಿನಿ ಸಿಎನ್‌ಎನ್ ವರದಿ ಮಾಡಿದೆ.

ಆದರೆ, ಆ ಮಾಹಿತಿಗಳನ್ನು ಪ್ರಧಾನಿಗೆ ಅಥವಾ ಉನ್ನತ ಸಚಿವರಿಗೆ ನೀಡಲಾಗಿರಲಿಲ್ಲ ಎಂದು ಸರಕಾರ ಹೇಳಿದೆ.

‘‘ಅದು ಮಾಹಿತಿ ಹಂಚಿಕೆಯಲ್ಲಿ ಆಗಿರುವ ಮಹತ್ವದ ಲೋಪವಾಗಿದೆ’’ ಎಂದು ಉಪ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ಬುಧವಾರ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News