ನಿಮ್ಮ ಅನ್ನವನ್ನು ಬೇರೆಯವರು ಕಸಿಯಲು ಬಿಡಬೇಡಿ

Update: 2019-04-25 18:32 GMT

ಮುಂಬೈ ಪ್ರಾಂತದ ವತನದಾರ ಮಹಾರ, ಮಾದಿಗ, ಕೂಲಿಕಾರ ಸಮ್ಮೇಳನಕ್ಕೆ ಸಂಬಂಧಿಸಿದ ಕರಪತ್ರವನ್ನು ಹೊರಡಿಸಲಾಯಿತು. ಅದು ಹೀಗಿದೆ:
   ‘‘ದಿ:16 ಶನಿವಾರ ಮತ್ತು 17 ರವಿವಾರ, ಡಿಸೆಂಬರ್ 1939. ಸ್ಥಳ -ಹರೇಗಾಂವ ಶುಗರ್‌ಫ್ಯಾಕ್ಟರಿ, ತಾ.ಕೋಪರಗಾವ,ಜಿ-ಅಹಮದನಗರ.
ಅಧ್ಯಕ್ಷರು-ಡಾ.ಬಾಬಾಸಾಹೇಬ ಅಂಬೇಡ್ಕರ್.

ಸಕಲ ವತನದಾರ, ಮಹಾರ, ಮಾದಿಗ ಕೂಲಿಕಾರ-ಮುಂತಾದ ಬಂಧುಭಗಿನಿಯರಿಗೆ ತಿಳಿಸುವುದೇನೆಂದರೆ, ವತನದ ಬಗೆಗೆ ತಮಗಿರುವ ಅಭಿಮಾನ, ಪ್ರೀತಿಯನ್ನು ಗಮನಿಸಿ ಸರಕಾರ ಆಗಾಗ ಅನ್ಯಾಯಕಾರಕವಾದ ಬಂಧನಗಳನ್ನು ಹಾಕುತ್ತಿದೆ.ಊರ ಕೆಲಸಗಾರ ಮಹಾರ ವಗೈರೆ ಜನರು ಪ್ರಾಮಾಣಿಕ ನಿಷ್ಠೆಯಿಂದ ಸಕಲ ಸರಕಾರಿ ಕೆಲಸಗಳನ್ನು ಮಾಡುತ್ತಾ ಬಂದಿದ್ದರೂ ಗೌಡ-ಪಾಟೀಲ, ತಲಾಠಿ(ಶ್ಯಾನಭೋಗ)ಮುಂತಾದವರ ತಲೆತಿರುಕ ರಿಪೋರ್ಟ್‌ನಿಂದಾಗಿ ನೂರಾರು ಮಹಾರರು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ದಂಡಹಾಕಲಾಗುತ್ತಿದೆ. ಬಡತನದಿಂದ ರೋಸಿಹೋದ ಮತ್ತು ಇನಾಮು ಭೂಮಿಯ ಪಟ್ಟಿಯನ್ನು ತುಂಬಿದರೂ ಸಾವಿರಾರು ರೂಪಾಯಿಯ ಭೂಮಿಪಟ್ಟಿಯನ್ನು ಹೆಚ್ಚಿಸಿ ಅವರನ್ನು ಮತ್ತಷ್ಟು ದರಿದ್ರರನ್ನಾಗಿ ಮಾಡುತ್ತಿದ್ದಾರೆ. ಹಾಗೆಯೇ ಸರಕಾರದ ಹೆಸರಿನಲ್ಲಿ ಮತ್ತಷ್ಟು ಕೆಲಸದ ಭಾರವನ್ನು ಹೊರಿಸಿ ಅವರನ್ನು ಜರ್ಜರಗೊಳಿಸಲಾಗಿದೆ.

ಈ ಎಲ್ಲಾ ಅತ್ಯಾಚಾರ ದೌರ್ಜನ್ಯದ ಬಗೆಗೆ ಯೋಚಿಸಿ ಸಾಮುದಾಯಿಕವಾಗಿ ನಮ್ಮ ಯೋಗ್ಯ ಬೇಡಿಕೆಯನ್ನು ಎದುರಿಗಿರಿಸಬೇಕಾಗಿದೆ. ನಮ್ಮ ಬೇಡಿಕೆಯ ಬಗೆಗೆ ಸರಕಾರ ಯೋಚಿಸದಿದ್ದರೆ ಈ ದೌರ್ಜನ್ಯವನ್ನು ಸನದು ಮಾರ್ಗದಿಂದ ಪ್ರತೀಕಾರ ಮಾಡಬೇಕಾಗಿದೆ. ಈ ಮಹತ್ವದ ವಿಷಯ ಮತ್ತು ಉಳಿದ ಸಂಗತಿಗಳ ಬಗೆಗೂ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಆದ್ದರಿಂದ ಎಲ್ಲರೂ ಆಗಮಿಸಬೇಕಾಗಿ ವಿನಂತಿ.

ಹಲವು ಅಡಚಣೆಯಿಂದಾಗಿ ಅತಿಥಿಗಳ ಭೋಜನದ ವ್ಯವಸ್ಥೆ ಮಾಡುವುದು ಸಾಧ್ಯವಿಲ್ಲ ಎಂದು ಹೇಳಲು ಕೆಡಕೆನಿಸುತ್ತಿದೆ. ಆದ್ದರಿಂದ ನಿಮ್ಮ ನಿಮ್ಮ ಬುತ್ತಿಗಂಟನ್ನು ಜೊತೆಯಲ್ಲಿ ತರಬೇಕಾಗಿ ಕೋರಿಕೆ. ಸಮ್ಮೇಳನದ ಬಗೆಗೆ ಯಾರಿಗಾದರೂ ಪತ್ರವ್ಯವಹಾರ ಮಾಡಬೇಕೆಂದಿದ್ದರೆ ಅವರು ಭಾವುರಾವ್, ಕೃ.ಗಾಯಕವಾಡ, ಶಾಸಕರು ನಾಶಿಕ ಇವರೊಂದಿಗೆ ಸಂಪರ್ಕಿಸಬೇಕು.’’
ರಾತ್ರಿ 16 ಡಿಸೆಂಬರ್ 1939 ರಂದು ಹರೆಗಾಂವದಲ್ಲಿ ಜರುಗಿದ ಸಭೆಗೆ ಡಾ.ಅಂಬೇಡ್ಕರ್ ಅಧ್ಯಕ್ಷರಾಗಿ ಆಗಮಿಸಿ ಉದ್ಯೋಧಕವಾದ ಭಾಷಣವನ್ನು ಮಾಡಿದರು.
 ಇಂದು ಮಹಾರ, ಮಾದಿಗ, ದಿನಗೂಲಿಗಳ ವತನದ ಬಗ್ಗೆ ಚರ್ಚೆ ಮಾಡಲು ಈ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಸ್ವಾಗತಾಧ್ಯಕ್ಷರಾದ ಗಾಯಕವಾಡ ಅವರು ಪ್ರಾಸ್ತಾವಿಕವಾಗಿ ಈ ಸಮ್ಮೇಳನದ ಹಿನ್ನೆಲೆಯನ್ನು ವಿವರಿಸಿದ್ದಾರೆ. ಅವರು ಮಹಾರ, ಮಾದಿಗ, ದಿನಗೂಲಿಗಳ ನಾಲ್ಕು ಬೇಡಿಕೆಯನ್ನು ಎದುರಿಗಿಟ್ಟಿದ್ದಾರೆ. ಮೊದಲನೆಯದು ಸರಕಾರ ಹೇರಿದ ಅನ್ಯಾಯಕಾರಕ ‘ಭೂಮಿಪಟ್ಟಿ’. ಅವರಿಗೆ ಪರಿಹಾರವೂ ನೀಡದೆ ಅವರ ಭೂಮಿಯನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿದ ಭೂಮಿಯ ದರದ ಬಡ್ಡಿಯನ್ನು ಕೊಡುವುದನ್ನು ಸರಕಾರ ಈಗ ನಿಲ್ಲಿಸಿದೆ.
ಈ ವತನದಾರಿಕೆಯ ಕೆಲಸ ಮಾಡಿದರೂ ಅವರಿಗೆ ಸಿಗುವ ರಕಮು ಸಹ ಕಡಿಮೆಯಾಗಿದ್ದು, ಈಗ ಅದನ್ನೂ ಸ್ಥಗಿತಗೊಳಿಸಿ ಹೆಚ್ಚಿನ ಅನ್ಯಾಯದ ಹೊರೆಯನ್ನು ಹಾಕಿದ್ದಾರೆ. ಹೀಗೆ ಬಡತನದಲ್ಲಿ ಕೊಳೆಯುತ್ತ ಬಿದ್ದಿರುವ ಜನರನ್ನು ನಾಲ್ಕು ಕಡೆಯಿಂದ ಶೋಷಣೆ ಮಾಡಲಾಗುತ್ತಿದ್ದು ಅವರನ್ನು ಮತ್ತಷ್ಟು ದರಿದ್ರರನ್ನಾಗಿ ಮಾಡಲಾಗುತ್ತಿದೆ.
ಕಾಂಗ್ರೆಸ್ ಸರಕಾರವು ವತನಕಾರರು ಮಾಡಬೇಕಾದ 19 ಕೆಲಸವನ್ನು ನಮೂದಿಸಿ ಒಂದು ಪ್ರಣಾಳಿಕೆಯನ್ನು ಈಗಷ್ಟೇ ಹೊರಡಿಸಿದೆ. ಅದರಲ್ಲಿ ಕೆಲವು ಕೆಲಸ ಭಾರದಿಂದ ಕೂಡಿದ್ದು ಅದನ್ನು ಮಾಡುವುದು ಅವರಿಂದ ಸಾಧ್ಯವೇ ಇಲ್ಲ. ಇದು ವತನದಾರ ಕಾಮಗಾರದ ಶೋಕಗೀತೆ. ಅದೂ ಅಲ್ಲದೆ ಹಳ್ಳಿಯಲ್ಲಿರುವ ಊರ ಕಾಮಗಾರರು ಹಲವು ಸರಕಾರಿ ಕೆಲಸ ಮಾಡಬೇಕಾಗುತ್ತದೆ. ಆದರೆ ಅವರಿಗೆ ಭೂಮಿಯೂ ಇಲ್ಲ. ಸರಕಾರಿ ಸಂಬಳವೂ ಇಲ್ಲ. ಭಿಕ್ಷೆ ಬೇಡಿ ಅವರು ದಿನಕಳೆಯಬೇಕಾಗುತ್ತದೆ.ಸಾಯುವವರೆಗೆ ಸರಕಾರಿ ಕೆಲಸ ಮಾಡಬೇಕಾಗುತ್ತದೆ. ಸಂಬಳವಿಲ್ಲದೆ ಜನರು ಚಡಪಡಿಸುತ್ತ ಜೀವನ ಸಾಗಿಸುವದೆಂದರೆ ಇದೆಂತಹ ಅತ್ಯಾಚಾರ?

ಈಗ ಭೂಮಿಪಟ್ಟಿ ದರ ಏರಿಸಿದ ವತನದಾರರ ಮೊದಲ ಬೇಡಿಕೆಯ ಸ್ವರೂಪ ಅರಿಯಬೇಕಾದರೆ ‘ಭೂಮಿಪಟ್ಟಿ’ ಎಂದರೇನು ಇದನ್ನು ಅರಿಯಬೇಕು. ಸರಕಾರಿ ನೌಕರರಿಗೆ ವತನ ಭೂಮಿಯನ್ನು ನೀಡುವ ಪದ್ಧತಿಯು ಪ್ರಾಚೀನವಾಗಿತ್ತು. ಅದು ಪೇಶ್ವೆ ಮತ್ತು ಮೊಗಲರ ರಾಜ್ಯದಲ್ಲೂ ಮುಂದುವರಿಯಿತು. ಆಗಿನ ಪರಿಸ್ಥಿತಿ ಇಂದಿನಕ್ಕಿಂತ ಭಿನ್ನವಾಗಿತ್ತು.ಈಗ ವ್ಯಕ್ತಿಯ ಅರ್ಹತೆಗೆ ಅನುಗುಣವಾಗಿ ಅವನಿಗೆ ನೌಕರಿ ನೀಡುವ ಪದ್ಧತಿಯಿದೆ. ಹಿಂದಿನ ಕಾಲದಲ್ಲಿ ನೌಕರಿಯು ವತನದಾರ ಪದ್ಧತಿಯಿಂದ ವಂಶಪರಂಪರೆಯಾಗಿ ಮುಂದುವರಿಯತ್ತಿತ್ತು. ಹಿಂದೆ ನೌಕರರಿಗೆ ರಕಮು ಬದಲಿಗೆ ಇನಾಮು ಭೂಮಿ ನೀಡುತ್ತಿದ್ದರು. ಇಂದು ನೌಕರರಿಗೆ ವೇತನ ನೀಡಲಾಗುತ್ತಿದೆ. ಹಿಂದೆ ಊರು-ಊರಲ್ಲಿ 12 ಆಯಗಾರರು (ಕಸಬುದಾರರು)ಇರುತ್ತಿದ್ದರು. ಈ ವತನದಾರರಿಗೆ ಭೂಗಂದಾಯ ಮನ್ನಾ ಮಾಡಲಾಗಿತ್ತು. ಪೇಶ್ವೆಯರ ಕೊನೆಗಾಲದಲ್ಲಿ ಹಣದ ಅಡಚಣೆಯಿಂದ ಈ ಜನರಿಂದ ಅಲ್ಪ ಪ್ರಮಾಣದಲ್ಲಿ ಪಡೆಯುವ ಕಂದಾಯಕ್ಕೆ ‘ಭೂಮಿಪಟ್ಟಿ’ ಎನ್ನುತ್ತಾರೆ. ಈ ಭೂಮಿಪಟ್ಟಿಯನ್ನು ನಗದು ರೂಪದಲ್ಲಿ ವಸೂಲಿ ಮಾಡದೆ ಧಾನ್ಯದ ರೂಪದಲ್ಲಿ ಪಡೆಯಲಾಗುತ್ತಿತ್ತು. ಆಂಗ್ಲರ ರಾಜ್ಯ ಶುರುವಾದಾಗ ಹಿಂದಿನ ಕೆಲವು ವತನಗಳನ್ನು ನಾಶಗೊಳಿಸಿ, ಕೆಲವನ್ನು ಮುಂದುವರಿಸಲಾಯಿತು. ಆಗ ಮಾಮೂಲಿ ಭೂಪಟ್ಟಿ ಏರಿಸುವುದಿಲ್ಲ ಎಂಬ ಭರವಸೆ ನೀಡಲಾಯಿತು.

1827ರಿಂದ 1875 ರವರೆಗೆ ಭೂಪಟ್ಟಿ ಏರಿಸಲಿಲ್ಲ. 1875ರ ಕಾನೂನಿನಲ್ಲಿ ಕಾಮಗಾರ ಮಹಾರರ ವೇತನ ಹೆಚ್ಚಳಕ್ಕಾಗಿಯೇ ಭೂಪಟ್ಟಿ ಏರಿಸಲಾಗಿದೆ ಎಂಬ ಒಂದು ಕಲಮು ಇದೆ. ಹೀಗಿರುವಾಗ ಈಗ ಭೂಪಟ್ಟಿ ಏಕೆ ಏರಿಸಿದರೋ ಗೊತ್ತಾಗುತ್ತಿಲ್ಲ. ಮಹಾರರ ವೇತನ ಏರಿಸದೆ ಇರುವುದರಿಂದ ಈ ಏರಿಕೆಯು ಕಾನೂನು ಬಾಹಿರಾಗಿದೆ. ಭೂಪಟ್ಟಿ ಏರಿಸಿ ಸರಕಾರವೇ ಕಾಯ್ದೆ ಭಂಗ ಮಾಡುತ್ತಿದೆ ಎಂದೆನ್ನಲು ಅಡ್ಡಿಯಿಲ್ಲ.ರಾಮೋಶಿಗಳ ವೇತನ ಏರಿಕೆಗಾಗಿ ಮಹಾರರ ಭೂಪಟ್ಟಿ ಏರಿಸಲಾಗುತ್ತಿದೆ ಎಂದು ಸರಕಾರದ ಹೇಳಿಕೆ. ಆದರೆ ವತನ ಹೇಗೆ ಚಮತ್ಕಾರಿಕವಾಗಿದೆ ಎಂದರೆ ಅದು ಒಂದು ಮನೆತನದಿಂದ ಬೇರೊಂದು ಮನೆತನಕ್ಕೆ ಹೋಗುವದೂ ಸಾಧ್ಯವಿಲ್ಲ. ಹೀಗಿರುವಾಗ ರಾಮೋಶಿಗಳಿಗಾಗಿ ಮಹಾರರ ಭೂಗಂದಾಯವನ್ನು ಸರಕಾರವು ಏರಿಸುತ್ತಿರುವುದು ಎಂಥ ಅನ್ಯಾಯ? ಮಹಾರರು ಬಡವರು, ಬಡವರಿಗೆ ರಕ್ಷಕರು ಯಾರೂ ಇಲ್ಲ-ಎಂಬುದನ್ನು ಸರಕಾರ ತನ್ನ ವರ್ತನೆಯಿಂದ ಸಿದ್ಧ ಮಾಡಿದಂತಾಯಿತು. ಮಹಾರರು ಚಳವಳಿ ಮಾಡುತ್ತಿದ್ದಾರೆ. ಸೊಕ್ಕಿದ್ದಾರೆ ಎನ್ನುವುದು ಸ್ಪಶ್ಯ ಹಿಂದೂಗಳಂತೆ ಸರಕಾರದ್ದೂ ಅಭಿಪ್ರಾಯವಿರಬೇಕು. ಇಲ್ಲದಿದ್ದರೆ ಮಹಾರರನ್ನು ನಗ್ನಗೊಳಿಸಿ, ರಾಮೋಶಿಗಳ ವೇತನ ಹೆಚ್ಚಿಸುವ ಪ್ರಯೋಜನವೇನು?ರಾಮೋಶಿಗಳಿಗೂ ಸಾಕಷ್ಟು ಸಂಬಳ ನೀಡಬೇಕೆನ್ನುವುದು ನನ್ನ ಅಭಿಪ್ರಾಯವೂ ಹೌದು. ಆದರೆ ಮಹಾರರನ್ನು ಬೆತ್ತಲೆಗೊಳಿಸಿ ಸಂಬಳ ಏರಿಸುವುದು ಮಾತ್ರ ಅನ್ಯಾಯಕಾರಕ ಎಂದೇ ನನ್ನ ವಿಚಾರ. ಸರಕಾರ ಕವಡೆಯಷ್ಟೂ ಕೆಲಸ ಮಾಡದೆ ವತನವನ್ನು ಭೋಗಿಸುವ ಉಂಡಾಡಿ ವತನದಾರು ಇಂದು ಹಿಂದೂಸ್ಥಾನದಲ್ಲಿ ಸಾಕಷ್ಟಿದ್ದಾರೆ. ಅವರ ಹಣದಿಂದ ರಾಮೋಶಿಗಳ ಸಂಬಳ ಏರಿಸಲು ಏನು ಅಡಚಣೆಯಿದೆ ಎನ್ನುವುದೇ ಗೊತ್ತಾಗುತ್ತಿಲ್ಲ.

ಪೇಶ್ವೆ ಕಾಲದಲ್ಲಿ ದೇಸಾಯಿ, ದೇಶಪಾಂಡೆ, ದೇಶಮುಖ, ಕುಲಕರ್ಣಿ, ಪೋತದಾರ, ಪಾಟೀಲ ಮುಂತಾದ ಹಲವು ವತನದಾರರಿದ್ದರು.ವಶೀಲಿಬಾಜಿಯಿಂದ ಅವರ ಸಂಖ್ಯೆಯೂ ತುಂಬ ಏರಿತ್ತು.
ಆಂಗ್ಲರ ಆಡಳಿತದಲ್ಲಿ ಅವರಿಗೆ ಈಗ ಯಾವ ಕೆಲಸವು ಉಳಿಯಲಿಲ್ಲ.ಅವರ ನೌಕರಿ ಹೋದರೂ,ಅವರ ನೌಕರಿಗಾಗಿ ನೀಡಿದ ಭೂಮಿಯನ್ನು ಮಾತ್ರ ಅವರ ಬಳಿಯಲ್ಲೇ ಶಾಶ್ವತವಾಗಿ ಉಳಿಸಲಾಗಿದೆ. ಅವರ ಆದಾಯದ ರುಪಾಯಿಗೆ ಐದಾಣೆ ಉಳಿಸಿಕೊಂಡು ಹನ್ನೊಂದು ಆಣೆ ಅವರಿಗೆ ನೀಡಲಾಯಿತು. ಈ ವ್ಯವಹಾರದಿಂದ ಈ ಹಳೆ ಕಾಲದ ನೌಕರರಿಗೆ ವಂಶಪರಂಪರೆಯಾಗಿ ಸರಕಾರ ಪ್ರಜೆಗಳ ಹಣದಿಂದಲೇ ಪೆನ್ಶನ್ ನೀಡಿತ್ತು ಎನ್ನಲಡ್ಡಿಯಿಲ್ಲ.
ಈ ಉಂಡಾಡಿ ಪೆನ್ಶನ್‌ದಾರರ ಮೇಲೆ ಭೂಪಟ್ಟಿಯನ್ನು ಹಾಕಿ, ಮಹಾರರ ಭೂಪಟ್ಟಿಯಿಂದಲೇ ರಾಮೋಶಿಗಳ ಸಂಬಳ ನೀಡದಿರಲು ಏಕೈಕ ಕಾರಣವೆಂದರೆ, ‘ದೇವೋ ದುರ್ಬಲ ಘಾತಕ’ ಇದೇ ಆಗಿದೆ ಎನ್ನುವುದರಲ್ಲಿ ಸಂಶಯ ಇಲ್ಲ. ವಂಶ ಪರಂಪರಾಗತವಾಗಿ ಪೆನ್ಶನ್ ಪಡೆಯುವ ಈ ಜನರ ಮೇಲೆ ಭೂಪಟ್ಟಿ ಹಾಕಿ ಮಹಾರ ಮತ್ತು ರಾಮೋಶಿಗಳಿಬ್ಬರನ್ನು ಬಡತನದಲ್ಲಿ ಕೊಳೆಯುತ್ತ ಬಿದ್ದಿರುವ ಅವರನ್ನು ಸುಖಿಗಳನ್ನಾಗಿ ಮಾಡುವುದು ಸಾಧ್ಯವಿತ್ತು. ಆದರೆ ಹಾಗೆ ಮಾಡುವುದರಿಂದ ಬಂಡವಾಳಶಾಹಿ ಸರಕಾರಕ್ಕೇನು ಲಾಭ?

ಹಿಂದಿನ ಕಾಲದಲ್ಲಿ ಪಾಳೆಯಗಾರರದ್ದೇ ಒಂದು ವರ್ಗವಿತ್ತು.ಇವರು ಸೈನ್ಯವನ್ನು ಕಟ್ಟಿಕೊಂಡು ಪ್ರಸಂಗ ಬಂದರೆ ಸರಕಾರಕ್ಕೆ ಸಹಾಯ ಮಾಡುತ್ತಿದ್ದರು. ಅವರಿಗೂ ಆ ಕಾಲದ ಸರಕಾರವು ಭೂಮಿ ನೀಡಿತ್ತು.ಈಗ ಆ ವರ್ಗಕ್ಕೆ ಸೈನ್ಯ ಸಾಕಬೇಕಾದ ಅಗತ್ಯವಿಲ್ಲ. ಆದರೂ ಭೂಮಿ ಮಾತ್ರ ಅವರ ಹತ್ತಿರವೇ ಉಳಿದುಕೊಂಡಿದೆ. ಈ ಭೂಮಿಯಿಂದ ಅವರಿಗೆ ಇಂದು 2,67,501 ರುಪಾಯಿಯ ಆದಾಯ ಬರುತ್ತಿದೆ.ಈ ಹಣದಿಂದ ರಾಮೋಶಿಗಳಿಗೆ ಸಂಬಳ ಹೆಚ್ಚಿಸಿ ಕೊಡಬಹುದಾಗಿತ್ತು. ಆದರೆ ಸರಕಾರ ನಾಚಿಕೆಯಿಲ್ಲದೆ ಮಹಾರರಿಗೆ ಕಿರುಕುಳ ಕೊಡುವುದು ಹೇಗೆ ಸಾಧ್ಯವಾಗುತ್ತಿತ್ತು. ಮೇಲಿನ ವಿವೇಚನೆಯಿಂದ ನಮ್ಮ ತಾಯಿ ತಂದೆಗಳಾದ ಸರಕಾರವು ಸಂಪೂರ್ಣವಾಗಿ ‘ಅನುಕೂಲ ಸಿಂಧು’ವಾಗಿದೆ ಎನ್ನುವುದು ಸಿದ್ಧವಾಗುವುದಿಲ್ಲವೇ?
ಈಗ ಗ್ರಾಮಚಾಕರಿ ಮಾಡುವವರ ಸಂಬಳದ ಪ್ರಶ್ನೆಯ ಬಗ್ಗೆ ಯೋಚಿಸೋಣ. ಹಳ್ಳಿಗಳಲ್ಲಿರುವ ಪಾಟೀಲ, ಕುಲಕರ್ಣಿ ಮತ್ತು ಮಹಾರರು ಸರಕಾರಿ ನೌಕರರು. ಸರಕಾರ ಅವರೊಂದಿಗೆ ಹೇಗೆ ಪಕ್ಷಪಾತದಿಂದ ವರ್ತಿಸುತ್ತದೆ ಎನ್ನುವುದು ಮುಂದಿನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ.

 ಊರ ಪಾಟೀಲನಿಗೆ ಸರಕಾರವು ಭೂಮಿ, ಹೊಲ, ಭೂಗಂದಾಯದ ಪ್ರಮಾಣದ ಸಂಬಳ, ಕಿರುಕುಳ ಖರ್ಚಿಗಾಗಿ ಅಲ್ಪಹಣ ನೀಡುತ್ತದೆ.ಊರ ಚಾಕರಿ ಮಾಡುವ ಮಹಾರರಿಗೆ ಮಾತ್ರ ಕೆಲವು ಕಡೆಗಳಲ್ಲಿ ಭೂಮಿ ನೀಡಲಾಗಿದೆ. ಕರಾವಳಿಯ ಮಹಾರರಿಗೆ ಭೂಮಿಯಿರಲಿಲ್ಲ.ಉಳಿದ ಹಲವು ಊರುಗಳ ಮಹಾರರಿಗೂ ಭೂಮಿಯಿರಲಿಲ್ಲ. ಭೂಮಿಯ ಕೊರತೆಯಿಂದಾಗಿ ಈ ಸರಕಾರಿ ನೌಕರರು ಊರ ಕಸಬನ್ನು ಅವಲಂಬಿಸಿ ಬದುಕಬೇಕಾಗುತ್ತಿತ್ತು. ಸರಕಾರಿ ಕೆಲಸಕ್ಕಾಗಿ ಊರ ಚಾಕರಿ ಮಾಡುವವರಿಗೆ ಸಂಬಳ ನೀಡುವುದು ಸರಕಾರದ ಜವಾಬ್ದಾರಿ ಅಲ್ಲವೇ?ಈ ಹೊಣೆಯನ್ನು ತಿರಸ್ಕರಿಸುವ ಸರಕಾರ ಅನೈತಿಕವಾಗಿದೆ. ಇಂಥ ಅನೈತಿಕ ಸರಕಾರದ ಚಾಕರಿ ಮಾಡುವ ಮಹಾರರು ಬುದ್ಧಿಗೇಡಿ ಎನ್ನದೇ ಗತ್ಯಂತರವಿಲ್ಲ. ಸರಕಾರವೇನು ಮಹಾರರ ನೆಂಟರಲ್ಲ, ಅಳಿಯನಲ್ಲ. ಹೀಗಿರುವಾಗ ಮಹಾರರು ವೇತನ ರಹಿತ ಸೇವಾಚಾಕರಿಯಾದರೂ ಏಕೆ ಮಾಡಬೇಕು? ಧಣಿ ಸಂಬಳ ನೀಡದಿದ್ದರೆ ಅವನಿಗೆ ಒದೆಯುವುದನ್ನು ನೌಕರ ಕಲಿಯಬೇಕು. ಈ ಸಮ್ಮೇಳನದ ಮೂಲಕ ನಾವು ಸರಕಾರಕ್ಕೆ ಆರು ತಿಂಗಳ ನೋಟಿಸ್ ನೀಡೋಣ. ಈ ಅವಧಿಯೊಳಗೆ ಸರಕಾರವು ಮಹಾರ ಚಾಕರಿಗೆ ಯೋಗ್ಯ ಸಂಬಳ ನೀಡಿದರೆ ಸರಿ, ಇಲ್ಲದಿದ್ದರೆ ವೇತನವಿಲ್ಲದೆ ಕೆಲಸ ಮಾಡುವ ಜನರು ಪ್ರಾಂತದಲ್ಲಿ ಮುಷ್ಕರ ಮಾಡಬೇಕು.

ಊರ ಚಾಕರರು ಮಾಡಬೇಕಾದ 19 ಕೆಲಸಗಳ ಪಟ್ಟಿಯನ್ನು ಸರಕಾರ ಈಗಷ್ಟೇ ಹೊರಡಿಸಿದೆ. ಇದು ಪ್ರಕಟವಾದಾಗಿನಿಂದ, ಸ್ವತಂತ್ರ ಕಾರ್ಮಿಕ ಪಕ್ಷವು ಈ ಕೆಲಸವನ್ನು ಮಹಾರರ ಮೇಲೆ ಹೊರಿಸಿದೆ ಎಂದು ಶ್ರೀ ರಣಖಾಂಬೆ ಪ್ರತಿಪಾದಿಸುತ್ತಿದ್ದಾರೆ. ಸ್ವತಂತ್ರ ಕಾರ್ಮಿಕ ಪಕ್ಷ ಮೂರ್ಖತನ ಮಾಡಿದ್ದು ತಪ್ಪು ಎಂದು ಯಾರಾದರೂ ಹೇಳುತ್ತಿದ್ದರೆ ಅವರೊಂದಿಗೆ ವಾದವಿವಾದ ಮಾಡಿ ಪಕ್ಷವು ತನ್ನ ಹೇಳಿಕೆ ಯೋಗ್ಯವೆಂದು ಸಿದ್ಧಮಾಡಲು ಮಾರ್ಗ ಮುಕ್ತವಾಗಿದೆ. ಆದರೆ ಪಕ್ಷ ಅಪ್ರಾಮಾಣಿಕವಾಗಿದೆ ಎಂದು ತುಪ್ಪದ ಆಸೆಯಿಂದ ಯಾರಾದರೂ ಹೇಳುತ್ತಿದ್ದರೆ, ಅವನು ಹರಾಮಖೋರನೆಂದು ಹೇಳದೆ ವಿಧಿಯಿಲ್ಲ.
ಸ್ವತಂತ್ರ ಕಾರ್ಮಿಕ ಪಕ್ಷವು ಅಪ್ರಾಮಾಣಿಕವಾಗಿದ್ದರೆ ರಾಜಕಾರಣದಲ್ಲಿ ಬಹುಸಂಖ್ಯಾತರಾಗಿದ್ದ ಕಾಂಗ್ರೆಸ್ ಪಕ್ಷದೊಂದಿಗೆ ಅದು ಬಹಿರಂಗವಾಗಿ, ಎದೆತಟ್ಟಿ ವಿರೋಧ ಮಾಡುತ್ತಿರಲಿಲ್ಲ. ಗಾಂಧಿ ಪಕ್ಷ ಸೇರಲು, ಅದಕ್ಕೆ ಜೀ ಹುಜೂರ್ ಎನ್ನಲು ವಿಶೇಷ ಪ್ರಾಮಾಣಿಕತೆ ಬೇಕಾಗುವುದಿಲ್ಲ. ಆ ಪಕ್ಷ ಸೇರಿ, ಅವರೊಂದಿಗೆ ಕಾರ್ಯ ಮಾಡುವುದು ತೀರ ಸುಲಭ. ಎರಡು ದುಡ್ಡಿನ ಗಾಂಧಿ ಟೊಪ್ಪಿ ಹಾಕಿಕೊಂಡರೆ ಅನರ್ಹ ಮನುಷ್ಯನಿಗೂ ದಿವಾನಪದ ಸಿಗುತ್ತದೆ. ಆ ಪಕ್ಷ ಸೇರಿ ಉಧೋ ಉಧೋ ಎನ್ನುವುದೇನೂ ಹೊನ್ನ ಶೂಲಕ್ಕೇರಿದಂತೆ ಕಷ್ಟದ ಕೆಲಸವಲ್ಲ. ಈ ಸಂಗತಿಯನ್ನು ನಮ್ಮ ಟೀಕಾಕಾರರು ಸದಾ ಗಮನದಲ್ಲಿಡಬೇಕು.
ಈಗ ಸರಕಾರ ಘೋಷಣೆ ಮಾಡಿದ ಗ್ರಾಮಚಾಕರರ ಕೆಲಸದ ಕಡೆಗೆ ಹೊರಳೋಣ. ಈ ವಿಷಯದಲ್ಲಿ ಚಾಕರರು ಒಂದು ಸಂಗತಿಯನ್ನು ಲಕ್ಷದಲ್ಲಿರಿಸಬೇಕು. ಯಾರಿಗೆ ವತನಬೇಕೋ ಅವರು ಚಾಕರಿ ಕೆಲಸ ಮಾಡಲೇಬೇಕು. ವತನಬೇಕು, ಕೆಲಸ ಮಾತ್ರ ಬೇಡ ಎಂದರೆ ಹೇಗೆ? ಆದರೆ ಸರಕಾರ ಹೇಳಿದ ಕಾಮಗಾರರ ಯಾದಿಯಲ್ಲಿ ಮಹಾರರ ಮೇಲೆ ಹೇರಿದ ಕೆಳಗಿನ ಕೆಲಸ ಮಾಡಬೇಕೆಂದಾದರೆ ಅವರಿಗೆ ಪ್ರತಿದಿನ ಕೂಲಿ ಹಣವನ್ನು ಕೊಡಲೇಬೇಕು. ಸರಕಾರದ ಹಣವನ್ನು ಬೊಕ್ಕಸದಲ್ಲಿ ತುಂಬುವುದು. ಸರಕಾರದ ದಪ್ತರನ್ನು ಹೊತ್ತು ಒಯ್ಯುವುದು-ತರುವುದು, ಸರಕಾರದ ಅಂಚೆಯನ್ನು ಕಳಿಸುವುದು-ತರುವುದು, ಕೊಂಡವಾಡೆಯಲ್ಲಿಯ ದನಗಳನ್ನು ಲಿಲಾವಿಗೆ ಎಳೆದೊಯ್ಯುವುದು. ಅಧಿಕಾರಿಗಳಿಗಾಗಿ ಟೆಂಟು, ಶಿಬಿರವನ್ನು ನಿರ್ಮಿಸುವುದು -ಈ ಕೆಲಸವನ್ನು ದಿನಗೂಲಿ ನೀಡದೆ ಮಹಾರರಿಂದ ಮಾಡಿಸುವುದು ಜೀತದ್ದೇ ಒಂದು ಕ್ರೂರ ಪದ್ಧತಿಯಾಗಿದೆ. ಊರಲ್ಲಿಯ ಕೆಲಸವನ್ನು ಎಂದಿನಂತೆ ಮಾಡಬೇಕು. ಆದರೆ ಪರ ಊರಿಗೆ ಹೋಗಿ ಮಾಡುವ ಕೆಲಸಕ್ಕೆ ದಿನಗೂಲಿ ಪಡೆಯದೇ ಯಾರೂ ಮಾಡಬಾರದು. ಬೇರೆ ಊರಿನ ಕೆಲಸಕ್ಕೆ ದಿನಕ್ಕೆ ಎಂಟಾಣೆಯಾದರೂ ದಿನಗೂಲಿ ಸಿಗಲೇಬೇಕು.

ಕೆಲಸ ನಂ-15. ಅನಾಥ ಹೆಣದ ವಿಲೇವಾರಿ ಮಾಡುವುದು. ಈ ಕೆಲಸಕ್ಕೆ ಯಾವ ಸ್ವಾಭಿಮಾನಿ ಮಹಾರನೂ ಸಿದ್ಧವಾಗಲಾರ.
ಕೆಲಸ ನಂ-2 ಸರಕಾರಿ ಮಾಹಿತಿ ನೀಡಲು ಗ್ರಾಮಸ್ಥರನ್ನು ಕರೆಯುವುದು. ಈ ಕೆಲಸವನ್ನು ಪ್ರತಿಮನೆಗೂ ಹೋಗಿ ಹೇಳದೆ, ಡಂಗುರದ ಮೂಲಕ ಸಾರಿದರೆ ಸಾಕು. ಹುಟ್ಟು ಸಾವಿನ ನೋಂದಣಿ ಮಾಡುವ ಕೆಲಸವನ್ನು ಮಹಾರರ ಮೇಲೆ ಹೊರಿಸುವುದು ಅನ್ಯಾಯ ಕಾರಕವಾದುದು. ಯಾರ ಮನೆಯಲ್ಲಿ ಹುಟ್ಟು ಸಾವು ಜರುಗುತ್ತದೆಯೋ ಅವರೇ ನೋಂದಣಿಯ ಜವಾಬ್ದಾರಿಯನ್ನು ಹೊರಬೇಕು.
ಹೀಗೆ ವತನದಾರ, ಮಹಾರ, ಮಾದಿಗ ಮತ್ತು ದಿನಗೂಲಿಯವರ ಬಹುವಿಧದ ಬೇಡಿಕೆಗಳಿವೆ. ಅದರ ಪರಿಹಾರಕ್ಕಾಗಿ ನಾವು ಗವರ್ನರ್ ಸಾಹೇಬರ ಬಳಿಗೆ ಡೆಪ್ಯೂಟೇಶನ್ ಅರ್ಜಿಯನ್ನು ಸರಕಾರಕ್ಕೆ ಕಳಿಸಬೇಕು. ಇಷ್ಟರಿಂದಲೇ ನಮ್ಮ ಬೇಡಿಕೆ ಈಡೇರಿದರೆ ಸರಿ, ಜಯಸಿಗದಿದ್ದರೆ ಮಾತ್ರ ಸತ್ಯಾಗ್ರಹ ಮಾಡೋಣ. ಈ ಅನ್ಯಾಯದ ಪ್ರತೀಕಾರ ಕೈಗೊಳ್ಳಬೇಕು.
ನಮ್ಮ ಸ್ಥಿತಿ ಇಂದು ಹಳೆಯ ಬಟ್ಟೆಯಂತಾಗಿದೆ. ತೇಪೆ ಹಚ್ಚಿದರೆ ಈ ಪರಿಸ್ಥಿತಿ ಸುಧಾರಿಸುವುದಿಲ್ಲ. ಆಕಾಶಕ್ಕೆ ಏಣಿ ಹಚ್ಚುವುದು ಹೇಗೆ? ನಾವು ವತನವನ್ನು ತೊರೆಯದ ವಿನಾ ನಮಗೆ ಉಳಿಗಾಲವಿಲ್ಲ. 1926ರಿಂದ ನಾನು ಈ ಸಂಗತಿಯನ್ನು ಹೇಳುತ್ತ ಬಂದಿದ್ದೇನೆ. ಆಗ ನಮಗೆ ವತನ, ಚಾಕರಿ, ಮಾಂಸ-ಮೂಳೆಯ ಮೋಹ ಬಿಡುವುದು ಸಾಧ್ಯವಿರಲಿಲ್ಲ. ಇಂದು ನಿಮ್ಮ ದೃಷ್ಟಿ ಬದಲಾಗಿರುವುದನ್ನು ಕಂಡು ಈ ಕೃತಾರ್ಥವೆನಿಸುತ್ತಿದೆ.

ಈ ಅನ್ಯಾಯದ ಪರಿಹಾರಕ್ಕಾಗಿ ನಾವು ಒಂದು ಕಮಿಟಿಯನ್ನು ನೇಮಿಸಿ ಕಾರ್ಯವನ್ನು ಆರಂಭಿಸೋಣ. ನಾವು ಸರಕಾರಕ್ಕೆ ಅರ್ಜಿಕಳಿಸಿ, ನಿಯೋಗವನ್ನು ಒಯ್ಯೋಣ. ಎಲ್ಲವನ್ನು ಕಾನೂನಿನಂತೆ ಮಾಡೋಣ. ಇಷ್ಟರಿಂದಲೇ ಪರಿಹಾರ ಸಿಗುತ್ತದೆಂದು ನನಗೆ ಅನಿಸುತ್ತದೆ. ಕೆಲಸವಾಗದಿದ್ದರೆ ಏನು ಮಾಡಬೇಕು ಎನ್ನುವುದನ್ನೂ ಯೋಚಿಸೋಣ. ಕೊನೆಗೆ ನಾನು ನನ್ನ ವತನ ಬಿಲ್ ಏನಾಯಿತು ಎಂಬುದನ್ನು ಹೇಳಿ ಭಾಷಣವನ್ನು ಮುಗಿಸುತ್ತೇನೆ.

ಕಾಂಗ್ರೆಸ್ ಸರಕಾರ ಶುರುವಾಗುವುದಕ್ಕಿಂತ ಮೊದಲು ಹಂಗಾಮಿಯಾದ ಕಮಾರ ಮಂತ್ರಿಮಂಡಳ ಅಸ್ತಿತ್ವಕ್ಕೆ ಬಂತು. ಆಗ ದಿವಾನಪದ (ಮಂತ್ರಿ ಸಚಿವ) ಸ್ವೀಕರಿಸಲು ನಾನು ನಿರಾಕರಿಸಿದ್ದರಿಂದ ಕೆಲಕಾಲದವರೆಗೆ ಕಾಂಗ್ರೆಸ್ ಸಭೆಯಲ್ಲಿ ನನ್ನ ದರ ಇಳಿದಿತ್ತು. ‘‘ಸ್ವತಂತ್ರ ಕಾರ್ಮಿಕ ಪಕ್ಷ ಯಾವ ಅಭಿಪ್ರಾಯವನ್ನು ಹೊಂದಿತ್ತೆಂದರೆ, ಭಾರತದ ಹೊಸ ಸಂವಿಧಾನವು, ಅಂದರೆ ಭಾರತ ಸರಕಾರದ ಅಧಿನಿಯಮವು ದೋಷದಿಂದ ಕೂಡಿದೆ ಮತ್ತು ಸಂಪೂರ್ಣ ಹೊಣೆಗಾರ ಸರಕಾರಕ್ಕಿಂತ ಅದು ಕಡಿಮೆ ಬೀಳುತ್ತಿತ್ತು. ಈ ಸಂವಿಧಾನದಿಂದ ಕಾಂಗ್ರೆಸ್ ಪಕ್ಷಕ್ಕೂ ಸಮಾಧಾನವಾಗಿರಲಿಲ್ಲ. ಅದನ್ನು ಮುರಿದು ಹಾಕುವ ನಿರ್ಧಾರ ಅವರದ್ದಾಗಿತ್ತು. ಮೊದಲಿಗೆ ಅವರು ಕಾರ್ಯಾಲಯವನ್ನು ಸ್ವೀಕರಿಸಲಿಲ್ಲ. ಆದರೆ ಬಳಿಕ ಜುಲೈ, 1937ರಲ್ಲಿ ಅವರು ಸರಕಾರ ರಚಿಸಿದಾಗ ಸರ್ ಧನಾಜಿ ಶಹಾ ಕಪೂರ ಉಳಿದ ಸಚಿವರೊಂದಿಗೆ ಮುಖ್ಯ ಮಂತ್ರಿಗಳಾದರು. ಅವರು ಕೆಲಕಾಲ ಸರಕಾರ ನಡೆಸುತ್ತಿದ್ದರು.ಸರ್ ಧನಾಜಿ ಶಹಾ ಅವರು ಡಾ.ಅಂಬೇಡ್ಕರ್ ಅವರಿಗೆ ಆಮಂತ್ರಣ ನೀಡಿದ್ದರು. ಆದರೆ ಅವರದನ್ನು ನಿರಾಕರಿಸಿದರು. ಸರ್ ಧನಾಜಿ ಶಹಾ ಅವರ ಸರಕಾರಕ್ಕೆ ಬಹುಮತವಿಲ್ಲ, ಹೀಗಾಗಿ ಅದು ವಿಧಿಯುಕ್ತ ಸರಕಾರವಲ್ಲ ಎಂದವರ ಭಾವನೆಯಾಗಿತ್ತು. ಹೀಗಾಗಿ ನಮ್ಮ ಪಕ್ಷವು ವಿಧಾನ ಸಭೆಯಲ್ಲಿ ಪ್ರವೇಶವನ್ನೇ ಮಾಡಲಿಲ್ಲ.’’-

ನ್ಯಾ.ಆರ್.ಆರ್.ಭೋಳೆಯವರ ‘ಸ್ವತಂತ್ರ ಕಾರ್ಮಿಕ ಪಕ್ಷ ಮತ್ತು ಮುಂಬೈ ವಿಧಾನಸಭಾ’ ಈ ತಲೆಬರಹದ ಲೇಖನ -ಡಾ.ಬಾಬಾಸಾಹೇಬ ಅಂಬೇಡ್ಕರ್ ಗೌರವ ಗ್ರಂಥ -ಮಹಾರಾಷ್ಟ್ರ ರಾಜ್ಯ ಸಾಹಿತ್ಯ ಅಣೀ ಸಂಸ್ಕೃತಿ ಮಂಡಳ, ಮುಂಬೈ, ಪುಟ -136-37.
ಕಾಂಗ್ರೆಸ್ ರಾಜ್ಯ ಶುರುವಾದ ಬಳಿಕ ನನ್ನ ವತನ ಬಿಲ್‌ಗೆ ಮಂಜೂರು ನೀಡುವ ಭರವಸೆ ನೀಡಲಾಗಿತ್ತು. ಆದರೆ ಕಾಲಾಂತರದಲ್ಲಿ ಕಾಂಗ್ರೆಸ್ ಮುಖ ಹೊರಳಿಸಿತು. ಆದರೂ ನಾನು ಲೆಕ್ಕಿಸಲಿಲ್ಲ. ನನ್ನ ಕೈಯಲ್ಲಿ ಬಾಣವಿನ್ನೂ ಬಾಕಿಯಿತ್ತು. ಪುಣೆ ಕರಾರಿಗಿಂತ ಮೊದಲು ಗಾಂಧಿ ಉಪವಾಸ ಮಾಡಿದ್ದರು.ಆನಂತರ ಅವರ ಮತ್ತು ಕಾಂಗ್ರೆಸಿನ ಹೃದಯ ಪಲ್ಲಟವಾಗಬಹುದೆಂಬ ಆಸೆಯಿತ್ತು. ನಾವು ಪರಸ್ಪರ ಸಹಕಾರಿಗಳಾಗಿ ಕಾರ್ಯ ಮಾಡಬಹುದು ಎಂದು ಉತ್ಸಾಹದಲ್ಲಿದ್ದೆ. ಆದರೆ ಕೊನೆಗೆ ಕಟ್ಟರೊಂದಿಗೆ ಸಹಕಾರ್ಯ ಅಸಾಧ್ಯ ಎಂಬ ಅನುಭವ ಬಂತು. ಕಾಂಗ್ರೆಸಿಗೆ ಇಂದು ಸಂಪೂರ್ಣ ಸ್ವಾತಂತ್ರ ಬೇಕಾಗಿದೆ. ಈ ಸ್ವಾತಂತ್ರ ನೀಡುವ ಮೊದಲು ನಮ್ಮ ಕೆಲಸ ಷರತ್ತು ಪೂರ್ಣಗೊಳ್ಳಬೇಕು. ಬೇರೆಯವರಿಗೆ ಒಂದು ರೊಟ್ಟಿಯನ್ನು ಕೊಡುವಾಗ ನಮಗೂ ಒಂದು ಚೂರಾದರೂ ಸಿಗಲೇಬೇಕು. ನಮ್ಮನ್ನು ಉಪವಾಸ ಉಳಿಸಿ ಬೇರೆಯಾರೇ ಆಗಲಿ ಮೇಜವಾನಿ ಕಬಳಿಸುತ್ತಿದ್ದರೆ, ಅವರ ಅನ್ನದಲ್ಲಿ ಮಣ್ಣು ಕಲಸದೆ ನಾವು ಬಿಡುವುದಿಲ್ಲ. ಈ ತುರ್ತುಪರಿಸ್ಥಿತಿಯಲ್ಲಿ ನೀವೆಲ್ಲರೂ ಒಗ್ಗಟ್ಟಿನಿಂದ, ತುರುಸಿನಿಂದ ಹೋರಾಡಲೇ ಬೇಕು ಎಂಬುದನ್ನು ಮಾತ್ರ ಮರೆಯಬೇಡಿ.


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News