ರೋಗಾಣುಗಳ ಆಗರಗಳು ನಮ್ಮ ಈ ವಸ್ತುಗಳು!

Update: 2019-04-25 18:53 GMT

ಸೂಕ್ಷ್ಮರೋಗಾಣುಗಳೊಂದಿಗೆ ಸಂಪರ್ಕ ನಿವಾರಿಸಲು ನಾವು ಆದಷ್ಟು ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಇಂತಹ ಸೂಕ್ಷ್ಮರೋಗಾಣುಗಳು ನಮ್ಮ ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳಲ್ಲಿ ಮಾತ್ರ ಅಡಗಿರುತ್ತವೆ ಎಂದು ನೀವು ಭಾವಿಸಿದ್ದರೆ ಅದು ತಪ್ಪಾಗುತ್ತದೆ. ಬಹಳಷ್ಟು ಸೂಕ್ಷ್ಮರೋಗಾಣುಗಳು ವಾಸವಾಗಿರುವ ಕೆಲವು ರಹಸ್ಯ ಸ್ಥಳಗಳಿದ್ದು, ಅವುಗಳ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ನಾವು ಪ್ರತಿದಿನ ಬಳಸುವ ಕೆಲವು ವಸ್ತುಗಳು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮರೋಗಾಣುಗಳು ಹುಲುಸಾಗಿ ಬೆಳೆಯಲು ಹೇಳಿ ಮಾಡಿಸಿದಂತಿರುತ್ತವೆ. ಸೂಕ್ಷ್ಮರೋಗಾಣುಗಳ ಆಗರವಾಗಿರುವ ಇಂತಹ ಕೆಲವು ವಸ್ತುಗಳು ಇಲ್ಲಿವೆ...

►ಹ್ಯಾಂಡ್‌ಬ್ಯಾಗ್‌ಗಳು

ನಾವು ದಿನವೂ ಬಳಸುವ ಅತ್ಯಂತ ಕೊಳಕು ವಸ್ತುಗಳ ಪೈಕಿ ಹ್ಯಾಂಡ್ ಬ್ಯಾಗ್ ಒಂದಾಗಿದೆ. ಇವುಗಳ ತಳಭಾಗಕ್ಕಿಂತ ಹಿಡಿಕೆಗಳು ಹೆಚ್ಚು ಕೊಳಕಾಗಿರುತ್ತವೆ. ನಾವು ಹ್ಯಾಂಡ್‌ಬ್ಯಾಗ್‌ನ್ನು ದಿನಕ್ಕೆ ಹಲವಾರು ಬಾರಿ ಮುಟ್ಟುತ್ತಲೇ ಇರುತ್ತೇವೆ, ಹೀಗಾಗಿ ಸೂಕ್ಷ್ಮರೋಗಾಣುಗಳ ದಾಳಿಗೆ ಹೆಚ್ಚು ಸುಲಭವಾಗಿ ಗುರಿಯಾಗಬಹುದು. ನಿಮ್ಮ ಹ್ಯಾಂಡ್‌ಬ್ಯಾಗ್‌ನ್ನು ಬ್ಯಾಕ್ಟೀರಿಯಾ ನಿರೋಧಕ ಸಾಧನಗಳನ್ನು ಬಳಸಿ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು. ನೀವು ಸಾರ್ವಜನಿಕ ಟಾಯ್ಲೆಟ್‌ನ್ನು ಬಳಸುವ ಸಂದರ್ಭವುಂಟಾದಾಗ ಹ್ಯಾಂಡ್‌ಬ್ಯಾಗ್‌ನ್ನು ಅಲ್ಲೇ ಎಲ್ಲಾದರೂ ಹಾಗೆಯೇ ಇಡಬೇಡಿ, ಮೊದಲು ಕೆಲವು ಟಿಶ್ಯೂ ಪೇಪರ್‌ಗಳನ್ನಿಟ್ಟು ಅದರ ಮೇಲೆ ನಿಮ್ಮ ಹ್ಯಾಂಡ್‌ಬ್ಯಾಗನ್ನಿಡಿ.

►ಮೊಬೈಲ್ ಫೋನ್‌ಗಳು

ನಾವು ನಮ್ಮ ಮೊಬೈಲ್ ಫೋನ್‌ನ್ನು ದಿನದಲ್ಲಿ ಲೆಕ್ಕವಿಲ್ಲದಷ್ಟು ಸಲ ಮುಟ್ಟುತ್ತೇವೆ. ಆದರೆ ಅದು ಸೂಕ್ಷ್ಮರೋಗಾಣುಗಳ ಆಗರವಾಗಿದೆ ಎನ್ನುವುದು ನಿಮಗೆ ಗೊತ್ತೇ? ನೀವು ನಿಮ್ಮ ಫೋನ್‌ನ್ನು ಪ್ರತಿ ದಿನವೂ ಸ್ವಚ್ಛಗೊಳಿಸಬೇಕು. ಇದಕ್ಕಾಗಿ ಕೆಲವು ವೈಪ್‌ಗಳು ನಿಮ್ಮ ಬಳಿಯಿರಲಿ. ಸ್ಕ್ರೀನ್ ಸ್ವಚ್ಛಗೊಳಿಸಲು ಲಭ್ಯವಿರುವ ವಿಶೇಷ ವೈಪ್‌ಗಳನ್ನು ಬಳಸಿ. ಟಾಯ್ಲೆಟ್‌ಗೆ ಹೋಗುವಾಗ ಫೋನ್‌ನ್ನೆಂದೂ ಜೊತೆಯಲ್ಲಿ ಒಯ್ಯಬೇಡಿ. ಇದರಿಂದ ಅದರ ಮೇಲೆ ಸೂಕ್ಷ್ಮರೋಗಾಣುಗಳು ಸಂಗ್ರಹಗೊಳ್ಳುವುದನ್ನು ತಡೆಯಬಹುದು.

►ಕ್ಲೀನಿಂಗ್ ಸ್ಪಾಂಜ್‌ಗಳು

ಅಡುಗೆಮನೆಗಳಲ್ಲಿ ಸ್ವಚ್ಛತೆಗಾಗಿ ಬಳಸುವ ಸ್ಪಾಂಜ್‌ಗಳು ಬ್ಯಾಕ್ಟೀರಿಯಾಗಳು ಬೆಳೆಯಲು ಉತ್ತಮವಾಗಿವೆ. ಪ್ರತಿಯೊಂದನ್ನೂ ಸ್ವಚ್ಛಗೊಳಿಸಲು ಈ ಸ್ಪಾಂಜ್‌ಗಳು ಬಳಕೆಯಾಗುವುದರಿಂದ ಸೂಕ್ಷ್ಮರೋಗಾಣುಗಳು ಸುಲಭವಾಗಿ ಅದರಲ್ಲಿ ಶೇಖರಗೊಳ್ಳುತ್ತವೆ. ಕಿಚನ್ ಸ್ಪಾಂಜ್‌ನಿಂದ ಸೂಕ್ಷ್ಮರೋಗಾಣುಗಳು ಹರಡುವುದನ್ನು ತಡೆಯಲು ಅವುಗಳನ್ನು ನಿಯಮಿತವಾಗಿ ಬದಲಿಸುತ್ತಿರಬೇಕು. ದಿನದ ಕೊನೆಗೆ ಈ ಸ್ಪಾಂಜ್‌ಗಳನ್ನು ಕುದಿಯುವ ನೀರಿನಲ್ಲಿ ಸ್ವಚ್ಛಗೊಳಿಸಬಹುದು.

►ವಾಷಿಂಗ್ ಮಷಿನ್

ವಾಷಿಂಗ್ ಮಷಿನ್ ಕೂಡ ಸೂಕ್ಷ್ಮರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಉತ್ತಮ ಸ್ಥಳಗಳಾಗಿವೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ. ವಾಷಿಂಗ್ ಮಷಿನ್ ನಮ್ಮ ಬಟ್ಟೆಗಳಲ್ಲಿಯ ಎಲ್ಲ ಕೊಳೆಗಳನ್ನು ತೆಗೆದುಹಾಕುತ್ತದೆ ನಿಜ, ಆದರೆ ಅದರಲ್ಲಿ ಸೂಕ್ಷ್ಮರೋಗಾಣುಗಳೂ ಶೇಖರಗೊಳ್ಳುತ್ತವೆ. ಹಸಿಯಾದ ಬಟ್ಟೆಗಳನ್ನು ಮಷಿನ್‌ನಲ್ಲಿ ಬಿಟ್ಟರೆ ಬ್ಯಾಕ್ಟೀರಿಯಾಗಳ ವೃದ್ಧಿಗೆ ಅದು ಅತ್ಯಂತ ಪ್ರಶಸ್ತವಾಗುತ್ತದೆ. ವಾಷಿಂಗ್ ಮಷಿನ್‌ನಲ್ಲಿ ಸೂಕ್ಷ್ಮರೋಗಾಣುಗಳಿದ್ದರೆ ಅವು ನಮ್ಮ ಬಟ್ಟೆಗಳಿಗೂ ಸುಲಭವಾಗಿ ಹರಡುತ್ತವೆ. ವಾಷಿಂಗ್ ಮಷಿನ್‌ನನ್ನು ಇಂತಹ ರೋಗಾಣುಗಳಿಂದ ಮುಕ್ತವಾಗಿರಿಸಲು ಬಟ್ಟೆಗಳನ್ನು ಒಗೆದ ಬಳಿಕ ಅದನ್ನು ಸ್ವಚ್ಛಗೊಳಿಸಬೇಕು. ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ನಿಮ್ಮ ಕೈಗಳನ್ನೂ ಬಿಸಿನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

►ಹೊಟೇಲ್ ಮೆನು ಕಾರ್ಡ್

ಹೊಟೇಲ್‌ಗಳಲ್ಲಿರುವ ಮೆನುಕಾರ್ಡ್‌ಗಳನ್ನು ಹಲವಾರು ಜನರು ಬಹಳಷ್ಟು ಸಲ ಸ್ಪರ್ಶಿಸುತ್ತಿರುತ್ತಾರೆ. ಸಾರ್ವಜನಿಕ ಸ್ಥಳಗಳು ಸೂಕ್ಷ್ಮರೋಗಾಣುಗಳಿಂದ ತುಂಬಿರುತ್ತವೆ. ಇಂತಹ ಮೆನುಕಾರ್ಡ್‌ಗಳನ್ನು ಹೊಟೇಲ್‌ನವರು ನಿಯಮಿತವಾಗಿ ಸ್ವಚ್ಛಗೊಳಿಸಿ ಸೂಕ್ಷ್ಮರೋಗಾಣು ಗಳಿಂದ ಮುಕ್ತಗೊಳಿಸಬೇಕಾಗುತ್ತದೆ. ನೀವು ಮೆನು ಕಾರ್ಡ್‌ನ್ನು ಕೈಗೆತ್ತಿಕೊಂಡಿದ್ದರೆ ಸೂಕ್ಷ್ಮರೋಗಾಣುಗಳು ನಿಮ್ಮ ಬಾಯಿಗೆ ನೇರವಾಗಿ ವರ್ಗಾವಣೆಗೊಳ್ಳುವುದನ್ನು ತಡೆಯಲು ಆಹಾರ ಸೇವಿಸುವ ಮುನ್ನ ಕೈಗಳನ್ನು ತೊಳೆದುಕೊಳ್ಳಲು ಮರೆಯಬೇಡಿ.

►ಟೂಥ್‌ಬ್ರಷ್

ನಿಮ್ಮ ಟೂಥ್‌ಬ್ರಷ್ ಸೂಕ್ಷ್ಮರೋಗಾಣುಗಳಿಂದ ತುಂಬಿರುತ್ತದೆ ಎನ್ನುವುದು ನಿಮಗೆ ಗೊತ್ತಿರಲಿಕ್ಕಿಲ್ಲ. ಲ್ಲುಗಳನ್ನು ಸ್ವಚ್ಛಗೊಳಿಸಿದ ಬಳಿಕ ಬ್ರಷ್‌ನ್ನು ಒದ್ದೆಯಾಗಿಯೇ ಇಡುವುದರಿಂದ ಬ್ಯಾಕ್ಟೀರಿ ಯಾಗಳು ಅಭಿವೃದ್ಧಿಗೊಳ್ಳಲು ಹುಲುಸಾದ ವಾತಾವರಣ ಸೃಷ್ಟಿಯಾಗುತ್ತದೆ. ಅಲ್ಲದೆ ನಿಮ್ಮ ಬ್ರಷ್ ಹೊರಗಿನ ಬ್ಯಾಕ್ಟೀರಿಯಾ ಗಳೊಂದಿಗೂ ಸಂಪರ್ಕಕ್ಕೆ ಬರುತ್ತದೆ. ಪ್ರತಿ ಸಲ ಬಳಸಿದ ನಂತರ ಬ್ರಷ್‌ನ್ನು ಚೆನ್ನಾಗಿ ಒರೆಸಿ ಮತ್ತು ಅದರಲ್ಲಿ ಸೂಕ್ಷ್ಮರೋಗಾಣುಗಳು ಶೇಖರಗೊಳ್ಳುವುದನ್ನು ತಡೆಯಲು ಮುಚ್ಚಿದ ಕ್ಯಾಬಿನೆಟ್‌ನಲ್ಲಿರಿಸಿ.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News