×
Ad

ಐಸಿಸ್ ಜೊತೆ ನಂಟು: 140 ಮಂದಿಗಾಗಿ ತೀವ್ರ ಶೋಧ ಕಾರ್ಯಚರಣೆ

Update: 2019-04-26 22:02 IST

ಕೊಲಂಬೊ, ಎ. 26: ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆಗೆ ನಂಟು ಹೊಂದಿರುವರು ಎನ್ನಲಾದ 140 ಮಂದಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶುಕ್ರವಾರ ಹೇಳಿದ್ದಾರೆ.

ಈಸ್ಟರ್ ರವಿವಾರ ಶ್ರೀಲಂಕಾದ ವಿಲಾಸಿ ಹೊಟೇಲ್‌ಗಳು ಮತ್ತು ಚರ್ಚ್‌ಗಳ ಮೇಲೆ ನಡೆದ ಸರಣಿ ಆತ್ಮಹತ್ಯಾ ದಾಳಿಗಳ ಹೊಣೆಯನ್ನು ಐಸಿಸ್ ವಹಿಸಿರುವುದನ್ನು ಸ್ಮರಿಸಬಹುದಾಗಿದೆ.

ಶ್ರೀಲಂಕಾದ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಯನ್ನು ಮನೆಯಲ್ಲಿಯೇ ನಿರ್ವಹಿಸುವಂತೆ ಹಾಗೂ ಜನರು ಮಸೀದಿ ಅಥವಾ ಚರ್ಚ್‌ಗಳಿಗೆ ಹೋಗದಂತೆ ಕರೆ ನೀಡಲಾಗಿದೆ. ರವಿವಾರ ನಡೆದ ಬಾಂಬ್ ಸ್ಫೋಟಗಳಿಗೆ ಪ್ರತೀಕಾರವಾಗಿ ಹಿಂಸಾಚಾರ ನಡೆಯುವ ಭೀತಿಯ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಕಾರ್‌ಬಾಂಬ್ ಸ್ಫೋಟಗಳು ನಡೆಯುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಸಂಸ್ಥೆಗಳು ಹೊರಡಿಸಿವೆ.

ಶೋಧ ಕಾರ್ಯಾಚರಣೆಯನ್ನು ನಡೆಸುವುದಕ್ಕಾಗಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಭದ್ರತೆ ಒದಗಿಸುವುದಕ್ಕಾಗಿ ಶ್ರೀಲಂಕದಾದ್ಯಂತ ಸುಮಾರು 10,000 ಸೈನಿಕರನ್ನು ನಿಯೋಜಿಸಲಾಗುತ್ತಿದೆ ಎಂದು ಸೇನೆ ಶುಕ್ರವಾರ ತಿಳಿಸಿದೆ.

ಪ್ರತೀಕಾರದ ಹಿಂಸೆಗೆ ಹೆದರಿ ಮುಸ್ಲಿಮ್ ಸಮುದಾಯಗಳು ಈಗಾಗಲೇ ಹಲವು ಸ್ಥಳಗಳಿಂದ ಪಲಾಯನಗೈದಿವೆ.

ಶುಕ್ರವಾರದ ಪ್ರಾರ್ಥನೆಯನ್ನು ಮನೆಗಳಲ್ಲೇ ನಿರ್ವಹಿಸುವಂತೆ ಶ್ರೀಲಂಕಾದ ಪ್ರಮುಖ ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ‘ಆಲ್ ಸಿಲೋನ್ ಜಮೀಯತುಲ್ ಉಲಾಮ’ ಮುಸ್ಲಿಮರನ್ನು ಒತ್ತಾಯಿಸಿದೆ.

ಅದೇ ವೇಳೆ, ಮುಂದಿನ ಸೂಚನೆವರೆಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ನಡೆಸದಂತೆ ಕಾರ್ಡಿನಲ್ ಮಾಲ್ಕಮ್ ರಂಜಿತ್ ಧರ್ಮಗುರುಗಳಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News