ನ್ಯಾಯಾಲಯದ ಮುಂದಿದ್ದ ಹಲವು ಪ್ರಶ್ನೆಗಳು

Update: 2019-04-26 18:37 GMT

ಭಾಗ-25

ಗಾಂಧಿ ಹತ್ಯೆಯನ್ನು ಯಾರು ಮಾಡಿದರು? ಯಾರು ಶಿಕ್ಷಾರ್ಹರು? ಎಂಬುದು ನ್ಯಾಯಾಲಯದ ಮುಂದಿದ್ದ ಮುಖ್ಯವಾದ ಪ್ರಶ್ನೆ. ಒಂದು ವೇಳೆ ನಾಥೂರಾಮ್ ಗೋಡ್ಸೆ ಒಬ್ಬನೇ ಆರೋಪಿತನಾಗಿದ್ದಿದ್ದರೆ ದೋಷಾರೋಪಣೆಯನ್ನು ಓದಿ ಹೇಳಿ ಅವನ ತಪ್ಪೊಪ್ಪಿಗೆಯ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿ ಅವನು ದೋಷಿಯೆಂದು ತೀರ್ಪು ಕೊಡುವುದರಲ್ಲಿ ಯಾವ ಕಷ್ಟವೂ ಇರುತ್ತಿರಲಿಲ್ಲ.

ಗಾಂಧಿ ಹತ್ಯೆ ಮಾಡಿದ್ದು, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಆ ಹತ್ಯೆಯಲ್ಲಿ ಯಾವುದೇ ರೂಪದಿಂದ ಭಾಗಿಯಾದದ್ದು ಹೀನಕೃತ್ಯ ಎಂದು ಸಂಘಪರಿವಾರ ವಾದಿಸುತ್ತದೆ. ಗಾಂಧಿ ಹತ್ಯೆ ಮಾಡಿದವರು ಎಂದು ದೂಷಿಸಿದರೆ ತಮ್ಮ ಮರ್ಯಾದೆಗೆ ಭಂಗವಾಗುತ್ತದೆ. ಆದರೆ ಆ ಹೇಯಕೃತ್ಯವನ್ನು ಸಮರ್ಥಿಸಿಕೊಂಡ ಗೋಡ್ಸೆಯ ಹೇಳಿಕೆಯನ್ನು ಮುದ್ರಿಸಿ ಅಬ್ಬರದ ಪ್ರಚಾರಮಾಡಿ ಅದನ್ನು ಮೆಚ್ಚುತ್ತಾರೆ!! ಇದರ ಇಂಗಿತವೇನು? ಗಾಂಧಿ ಹತ್ಯೆ ಮಾಡಬಾರದ ಹೀನ ಹೇಯಕೃತ್ಯ ಎಂದು ಸಂಘಪರಿವಾರ ಭಾವಿಸಿದ್ದರೆ ಹತ್ಯೆಯಾದ ಸಂಗತಿ ಕೇಳಿ ಸಿಹಿಹಂಚಿ ಸಂಭ್ರಮವನ್ನು ಆಚರಿಸಿದ್ದು ಏಕೆ? ಸಾವರ್ಕರ್‌ರು ಅಂದೇ ಆ ಕೃತ್ಯವನ್ನು ಬಹಿರಂಗವಾಗಿ ಖಂಡಿಸಿ ಪತ್ರಿಕಾ ಹೇಳಿಕೆ ಕೊಟ್ಟರು. ಅವರ ಆ ಹೇಳಿಕೆ ಅವರ ಹೃತ್ಪೂರ್ವಕ ನಂಬಿಕೆಯೋ? ಅಥವಾ ತಮ್ಮ ಮೇಲೆ ಬರಬಹುದಾಗಿದ್ದ ಅಪಖ್ಯಾತಿ ಮತ್ತು ಕ್ರಿಮಿನಲ್ ಮೊಕದ್ದಮೆಯಿಂದ ಪಾರಾಗಲು ಕೊಟ್ಟ ಹೇಳಿಕೆಯೋ? ನಿರ್ದಿಷ್ಟವಾಗಿ ಹೇಳಲು ಅವರ ಮನಸ್ಸಲ್ಲದೆ ಬೇರೆ ಪ್ರಬಲವಾದ ಆಧಾರಗಳಿಲ್ಲ. ಅಂಥ ಹೇಳಿಕೆಯನ್ನು ಕೊಟ್ಟರೆಂಬುದು ಅಕ್ಷರಗಳಲ್ಲಿ ಮೂಡಿದ ಪ್ರತ್ಯಕ್ಷ ಪ್ರಮಾಣ. ಆದರೆ ಅದು ‘ಕಪಟ ನಾಟಕ’ ಎಂದು ತಿರಸ್ಕರಿಸಲು ಯಾವ ಆಧಾರವೂ ಇಲ್ಲ. ಆದ್ದರಿಂದ ನ್ಯಾಯನಿರ್ಣಯದ ಮೂಲಭೂತ ಸೂತ್ರದಂತೆ -ಆರೋಪ ಋಜುವಾತಾಗುವ ತನಕ ಆರೋಪಿ ನಿರ್ದೋಷಿಯೆ. ಸಾವರ್ಕರ್‌ರ ವಿರುದ್ಧ ಈ ಆರೋಪ ಗಾಂಧಿ ಹತ್ಯೆ ಪಿತೂರಿಯಲ್ಲಿ ಅವರು ಭಾಗಿ ಆಗಿದ್ದರು ಹಾಗೂ ಆ ದುಷ್ಕೃತ್ಯಕ್ಕೆ ಅವರು ಪ್ರೋತ್ಸಾಹ, ಪ್ರಚೋದನೆ ಕೊಟ್ಟರೆಂಬ ಆರೋಪ-ಋಜುವಾತು ಆಗಲಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ದೋಷಮುಕ್ತರೆಂದು ನ್ಯಾಯಾಲಯವೇ ಘೋಷಿಸಿತು. ಆದರೆ ಸಂಘಪರಿವಾರ ತತ್ರಾಪಿ ಆರೆಸ್ಸೆಸ್ ಗಾಂಧಿ ಹತ್ಯೆಗೆ ಜವಾಬ್ದಾರಿ ಎಂಬುದಕ್ಕೆ ಅನೇಕ ಸಾಂದರ್ಭಿಕ ಸನ್ನಿವೇಶಗಳನ್ನು ನ್ಯಾಯಾಲಯದಲ್ಲಿ ಮಂಡಿಸಲಾಯಿತು. ಆರೆಸ್ಸೆಸ್ ಅದರ ಕೇಂದ್ರ ಕಚೇರಿಯಲ್ಲಾಗಲೀ, ಪುಣೆ, ಮುಂಬೈ, ಅಹಮದ್ ನಗರದ ಯಾವುದಾದರೂ ಶಾಖಾ ಕಚೇರಿಯಲ್ಲಿ ಸಭೆ ಕರೆದು ಸಮಾಲೋಚನೆ ಮಾಡಿ ಗಾಂಧಿ ಹತ್ಯೆ ಮಾಡಬೇಕೆಂದಾಗಲಿ, ಮಾಡುವವರಿಗೆ ಪ್ರೋತ್ಸಾಹ ಕೊಡಬೇಕೆಂದಾಗಲಿ ಗೊತ್ತುವಳಿಯನ್ನು ಮಂಜೂರು ಮಾಡಿರಲಿಲ್ಲ ಎಂಬುದೂ ಸತ್ಯ. ಅಂಥ ಗೊತ್ತುವಳಿಯನ್ನು ಯಾವ ವ್ಯಕ್ತಿಗಳೂ, ಸಂಘಗಳೂ ಎಂದಿಗೂ ಮಾಡುವುದಿಲ್ಲ!! ಸದ್ಯಕ್ಕೆ ಆ ಸಂಗತಿಯನ್ನು ಬದಿಗಿಟ್ಟು ಈ ಮೊಕದ್ದಮೆಯನ್ನು ನ್ಯಾಯಾಧೀಶ ಆತ್ಮಚರಣರು ಹೇಗೆ ನಿರ್ಧರಿಸಿದರು, ಯಾವ ತೀರ್ಮಾನ ಕೊಟ್ಟರು ಎಂಬುದನ್ನು ಗಮನಿಸೋಣ.

ಗಾಂಧಿ ಹತ್ಯೆಯನ್ನು ಯಾರು ಮಾಡಿದರು? ಯಾರು ಶಿಕ್ಷಾರ್ಹರು? ಎಂಬುದು ನ್ಯಾಯಾಲಯದ ಮುಂದಿದ್ದ ಮುಖ್ಯವಾದ ಪ್ರಶ್ನೆ. ಒಂದು ವೇಳೆ ನಾಥೂರಾಮ್ ಗೋಡ್ಸೆ ಒಬ್ಬನೇ ಆರೋಪಿತನಾಗಿದ್ದಿದ್ದರೆ ದೋಷಾರೋಪಣೆಯನ್ನು ಓದಿ ಹೇಳಿ ಅವನ ತಪ್ಪೊಪ್ಪಿಗೆಯ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿ ಅವನು ದೋಷಿಯೆಂದು ತೀರ್ಪು ಕೊಡುವುದರಲ್ಲಿ ಯಾವ ಕಷ್ಟವೂ ಇರುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ನ್ಯಾಯಾಧೀಶರು ಅವನು ತಪ್ಪೊಪ್ಪಿಕೊಂಡು ಕೊಟ್ಟ ಹೇಳಿಕೆ ಖುದ್ದು ‘ರಾಜಿಯಿಂದ’ ಸ್ವಬುದ್ಧ್ದಿಯಿಂದ ಯಾರ ಹಂಗು, ಹೆದರಿಕೆ, ಆಸೆ, ಆಮಿಷಗಳಿಗೆ ಒಳಗಾಗದೆ ಕೊಟ್ಟ ಹೇಳಿಕೆಯೋ ಎಂಬುದನ್ನು ದಿಟಪಡಿಸಿಕೊಂಡು ಅವನನ್ನು ಶಿಕ್ಷೆಗೆ ಗುರಿಪಡಿಸಬಹುದು. ಇಲ್ಲಿ ನಾಥೂರಾಮ್ ಗೋಡ್ಸೆ ಸ್ವಇಚ್ಛೆಯಿಂದ, ಬುದ್ಧಿಪೂರ್ವಕವಾಗಿ ಮುಕ್ತ ಮನಸ್ಸಿನಿಂದ ತಪ್ಪೊಪ್ಪಿಕೊಂಡಿದ್ದಾನೆ ಎಂಬುದರಲ್ಲಿ ಸಂಶಯವಿರಲಿಲ್ಲ. ಆದರೆ ನ್ಯಾಯಾಲಯದ ಮುಂದಿದ್ದ ಆರೋಪಿತರು ಪಿತೂರಿ ಮಾಡಿದರೇ, ಎಂಬುದು ಪ್ರಮುಖ ಪ್ರಶ್ನೆ. ನಾಥೂರಾಮ್ ಗೋಡ್ಸೆ ಈ ಕೃತ್ಯಕ್ಕೆ ತಾನೊಬ್ಬನೆ ಹೊಣೆ; ಇತರ ಯಾರಿಗೂ ಈ ಕೃತ್ಯದ ವಿಚಾರ ಗೊತ್ತೇ ಇರಲಿಲ್ಲ; ಅದು ತನ್ನೊಬ್ಬನ ನಿರ್ಧಾರ; ತನ್ನ್ನಿಂದಲೇ ನೆರವೇರಿದ ಕೃತ್ಯ ಎಂಬುದಾಗಿ ಸಾಧಿಸಿದ್ದ. ಅದೇ ನಿಲುಮೆಯನ್ನು ಇತರ ಆರೋಪಿಗಳೂ ಪ್ರತಿಪಾದಿಸಿದ್ದರು. ಗಾಂಧೀಜಿ ಮುಸ್ಲಿಮರ ಬಗ್ಗೆ ಅನುಸರಿಸಿದ್ದ ಧೋರಣೆ, ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿಗಳನ್ನು ಭಾರತ ಸರಕಾರ ಕೊಡುವಂತೆ ಒತ್ತಾಯಿಸಿದ್ದರಿಂದ ನಾಥೂರಾಮ್‌ನ ‘ತಲೆಕೆಟ್ಟು’ ಇಂತಹ ಹೀನಕೃತ್ಯವನ್ನೆಸಗಿದ ಎಂಬುದು ಉಳಿದ ಆರೋಪಿಗಳು ಪ್ರಬಲವಾಗಿ ವಾದಿಸಿದರು. ಅದಕ್ಕಾಗಿ ಯಾವ ಪಿತೂರಿಯೂ ಯಾರಿಂದಲೂ ನಡೆಯಲಿಲ್ಲ ಎಂಬುದು ಅವರ ನಿಲುಮೆಯಾಗಿತ್ತು.

ನ್ಯಾಯಾಲಯ ನಿಷ್ಕರಿಸಬೇಕಾಗಿದ್ದ ಪ್ರಥಮ ಪ್ರಮುಖ ಅಂಶ: ಗಾಂಧಿ ಹತ್ಯೆ ಮಾಡಲು ಪಿತೂರಿ ನಡೆದಿತ್ತೆ ಎಂಬುದು. ನಡೆದಿದ್ದರೆ ಅದರಲ್ಲಿ ಯಾರ್ಯಾರು ಭಾಗಿಯಾಗಿದ್ದರು? ಆ ಪಿತೂರಿಯ ಫಲವಾಗಿಯೇ ಈ ಹತ್ಯೆ ನಡೆಯಿತೇ? ಇಲ್ಲವೇ ಆರೋಪಿಗಳು ವಾದಿಸಿದಂತೆ ನಾಥೂರಾಮ್ ಗೋಡ್ಸೆ ಒಬ್ಬನೇ ನ್ಯಾಯಾಲಯದ ಮುಂದಿರುವ ಆರೋಪಿಗಳಿಗೆ ಗೊತ್ತಿಲ್ಲದೆ ತಾನೊಬ್ಬನೆ ಎಸಗಿದ ಕೃತ್ಯವೇ? ಪಿತೂರಿ ಮಾಡಿದ್ದರೆ ಪಿತೂರಿಗಾರರ ಮನಸ್ಸುಗಳು ಒಂದಕ್ಕೊಂದು ಕೂಡಿ ಸಹಮತಕ್ಕೆ ಬಂದಿದ್ದವೇ? ನಾಥೂರಾಮ್ ನ್ಯಾಯಾಲಯದಲ್ಲಿ ಕೊಟ್ಟ ಹೇಳಿಕೆಯಂತೆ ಅವನು ಗಾಂಧಿ ಹತ್ಯೆಗೆ ನಿರ್ಧರಿಸಿದ್ದು-ಗಾಂಧೀಜಿ ದಿಲ್ಲಿಯಲ್ಲಿ ಮುಸ್ಲಿಮರ ರಕ್ಷಣೆಗಾಗಿ ಆಮರಣ ಉಪವಾಸಮಾಡಿ ಹಿಂದೂ ಹಿತರಕ್ಷಣೆ ಮಾಡದಿದ್ದುದು ಒಂದು ಕಾರಣ ಹಾಗೂ ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿಗಳನ್ನು ಭಾರತ ಸರಕಾರ ಕೊಡುವಂತೆ ಒತ್ತಾಯ/ಪ್ರಭಾವ ಬೀರಿದ್ದು. ಆದರೆ ಈ ಕಾರಣಗಳು ಅಥವಾ ಇಂಥ ಕಾರಣಗಳು ಊಹೆಯಲ್ಲಿಯೂ ಇಲ್ಲದಿದ್ದ ಕಾಲದಲ್ಲಿಯೂ 1934ರ ಜೂನ್ 25 ರಂದು ಪುಣೆಯಲ್ಲಿಯೇ ಗಾಂಧೀ ಹತ್ಯೆಯ ಪ್ರಯತ್ನ ನಡೆದಿತ್ತು. ಆಗ ಹರಿಜನೋದ್ಧಾರ, ಅಸ್ಪಶ್ಯತಾ ನಿವಾರಣೆಗಾಗಿ ಅಖಿಲ ಭಾರತ ಪ್ರವಾಸ ಪ್ರಚಾರದಲ್ಲಿ ತೊಡಗಿದ್ದಾಗ ಗಾಂಧಿ ಪುಣೆಗೆ ಬಂದಿದ್ದರು. ಪುಣೆ ನಗರಪಾಲಿಕೆ ಅವರಿಗೆ ಒಂದು ಸನ್ಮಾನ ಪತ್ರವನ್ನು ಸಮರ್ಪಿಸಲು ನಿರ್ಧರಿಸಿತ್ತು. ಆ ಸಮಾರಂಭಕ್ಕೆ ಬಂದ ದಿನ ಅವರ ಕಾರ್ ಮೇಲೆ ಬಾಂಬ್ ಹಾಕಲು ಪ್ರಯತ್ನಿಸಿದ್ದರು. ಆ ಬಾಂಬ್, ಗಾಂಧೀಜಿ ಇದ್ದ ಕಾರ್ ಎಂದು ತಪ್ಪಾಗಿ ತಿಳಿದು ಅಣ್ಣಾ ಸಾಹೇಬ್ ಭೋಪಟ್‌ಕರ್‌ರಿದ್ದ ಕಾರಿನ ಮೇಲೆ ಹಾಕಿದ್ದರು. ಈ ವಿಚಾರವಾಗಿ ಗಾಂಧೀಜಿಯ ನಿಕಟವರ್ತಿಗಳೂ ಅವನ ಜೀವನ ಚರಿತ್ರೆಯ ಕರ್ತೃಗಳೂ ಆದ ಪ್ಯಾರೇಲಾಲರು ಈ ಪ್ರಯತ್ನ ವಿಫಲವಾದದ್ದು ಸರಿಯಾದ ಯೋಜನೆ ಇಲ್ಲದಿದ್ದುದು, ಆದರೆ ಆ ಪ್ರಯತ್ನ ಮಾಡಿದವರು ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಶತ್ರುಗಳಾಗಿದ್ದರು ಎಂದು ದಾಖಲಿಸಿದ್ದಾರೆ.

  ಮತ್ತೆ ಜುಲೈ 1944 ರಲ್ಲಿ ಗಾಂಧೀಜಿ ಪಂಚಗಣಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಅವರನ್ನು ಕೊಲೆ ಮಾಡುವ ಸಂಚು ನಡೆದಿತ್ತು.ಅಂದು ಗಾಂಧೀಜಿ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ನಾಥೂರಾಮ್ ಗೋಡ್ಸೆ ನೆಹರು ಷರ್ಟ್, ಪೈಜಾಮಾ ಮತ್ತು ಜಾಕೆಟ್ ತೊಟ್ಟುಕೊಂಡು ಗಾಂಧಿ ವಿರುದ್ಧ ಘೋಷಣೆ ಕೂಗುತ್ತ ಕೈಯಲ್ಲೊಂದು ಚಾಕು ಹಿಡಿದುಕೊಂಡು ಅವರತ್ತ ನುಗ್ಗಿದ್ದ. ಅವನನ್ನು ಮಣಿಶಂಕರ ಪುರೋಹಿತನೆಂಬ ಮಹನೀಯರು ಹಿಡಿದುಕೊಂಡು ಗಾಂಧಿ ಹತ್ಯೆಯನ್ನು ತಪ್ಪಿಸಿದ್ದರು. ಗೋಡ್ಸೆ ಜೊತೆಗೆ ಬಂದಿದ್ದ ಯುವಕರು ತಪ್ಪಿಸಿಕೊಂಡು ಓಡಿ ಹೋದರು. ಹಿಡಿದುಕೊಂಡಿದ್ದ ಗೋಡ್ಸೆಗೆ ಗಾಂಧೀಜಿ ಒಂದು ಮಾತು ಹೇಳಿಕಳಿಸಿದರು. ಅವನು ತಮ್ಮನ್ನು ಭೇಟಿಮಾಡಿ ಮಾತನಾಡುವಂತೆ ತಿಳಿಸಿದರು. ಗೋಡ್ಸೆ ಅವರನ್ನು ಕಾಣಲು ನಿರಾಕರಿಸಿದ. ಮತ್ತೆ ಅದೇ ವರ್ಷ (1944) ಸೆಪ್ಟಂಬರ್ ತಿಂಗಳಲ್ಲಿ ಸೇವಾಗ್ರಾಮದಲ್ಲಿ ಗಾಂಧಿ ಹತ್ಯೆಗೆ ಇದೇ ನಾಥೂರಾಮ್ ಗೋಡ್ಸೆ ಪ್ರಯತ್ನಿಸಿದ್ದ. ಆ ವರ್ಷ ಗಾಂಧೀಜಿ ಜಿನ್ನಾ ಅವರೊಡನೆ ಸಂಧಾನದ ಮಾತುಕತೆ ನಡೆಸಬೇಕೆಂದು ಸಿದ್ಧತೆ ಮಾಡಿಕೊಂಡಿದ್ದರು.ಗಾಂಧೀಜಿ ಸೇವಾಗ್ರಾಮದಿಂದ ಮುಂಬೈಗೆ ಹೋಗಲು ಹೊರಟಾಗ ಗೋಡ್ಸೆ ಮತ್ತು ಥಟ್ಟೆ ಇಬ್ಬರೂ ಸೇವಾಗ್ರಾಮ ಆಶ್ರಮದ ಹೆಬ್ಬಾಗಿಲನ್ನು ಮುರಿದು ಒಳನುಗ್ಗಿದ್ದರು. ಅಲ್ಲಿ ಕಾವಲಿದ್ದ ಅಧಿಕಾರಿಯೊಬ್ಬರು ಅವರನ್ನು ವಶಕ್ಕೆ ತೆಗೆದುಕೊಂಡು ಶೋಧಿಸಿದಾಗ ಅವರಲ್ಲಿ ಚಾಕುಗಳಿದ್ದವು. ಆಗ ಆ ರಕ್ಷಣಾಧಿಕಾರಿ: ‘‘ನೀವು ಹತಾತ್ಮರಾಗಲು ಇಚ್ಛಿಸಿದ್ದೀರಾ ?’’ ಎಂದು ತಮಾಷೆ ಮಾಡಿದಾಗ ಆ ಗುಂಪಿನಲ್ಲಿದ್ದವನೊಬ್ಬ, ‘‘ನಮ್ಮಲ್ಲಿ ಒಬ್ಬನು ಗಾಂಧೀಜಿಯನ್ನು ಕೊಂದು ಹುತಾತ್ಮನಾಗುತ್ತಾನೆ’’ ಎಂದು ಉತ್ತರಿಸಿದ್ದ. ಆ ಗುಂಪಿನ ಮುಂದಾಳು ನಾಥೂರಾಮ್ ಗೋಡ್ಸೆ ಎಂಬುದಾಗಿ ಪ್ಯಾರೇಲಾಲ್ ಬರೆದಿದ್ದಾರೆ.

 ಮತ್ತೊಮ್ಮೆ 1946 ಜೂನ್ 29 ರಂದು ಗಾಂಧೀಜಿ ಪುಣೆಯಿಂದ ಮುಂಬೈಗೆ ಪ್ರಯಾಣ ಮಾಡುತ್ತಿದ್ದಾಗ ನೇರುಲ್ ಮತ್ತು ಕರ್ಜುಲ್ ಸ್ಟೇಷನ್‌ಗಳ ಮಧ್ಯೆ ರೈಲು ಹಳಿಗಳ ಮೇಲೆ ಗುಂಡುಗಳನ್ನಿಟ್ಟು ಗಾಡಿಯನ್ನು ಉರುಳಿಸಲು ಪ್ರಯತ್ನಿಸಿದ್ದರು. ಡ್ರೈವರ್ ಹಳಿಯ ಮೇಲಿದ್ದ ಕಲ್ಲು ಗುಂಡುಗಳನ್ನು ಕಂಡು ನಿಧಾನಮಾಡಿದರೂ ಇಂಜಿನ್ ಆ ಗುಂಡುಗಳನ್ನು ಪುಡಿಪುಡಿಮಾಡಿ ನಿಂತುಕೊಂಡಿತು. ಗಾಂಧೀಜಿಗೆ ಇದು ಗೊತ್ತಾಗಲಿಲ್ಲ. ಈ ಕೃತ್ಯ ಯಾರಿಂದ ಆಯಿತೆಂಬುದರ ಸುಳಿವು ಸಿಗಲಿಲ್ಲ.

ಇನ್ನು ಗಾಂಧಿ ಹತ್ಯೆಯ ಕೊನೆಯ ಪ್ರಯತ್ನ ನಡೆದದ್ದು ಜನವರಿ 20ನೇ ತಾರೀಕು ಬಿರ್ಲಾ ಗೃಹದಲ್ಲಿ ಮದನ್‌ಲಾಲ್ ಕಾಟನ್-ಗನ್-ಸ್ಲಾಬ್ ಸ್ಫೋಟಿಸಿ ಪೊಲೀಸರಿಗೆ ಸಿಕ್ಕಿಬಿದ್ದದ್ದು. ಆದರೆ ಅದೊಂದು ವಿಫಲವಾದ ಪ್ರಯತ್ನ ಎಂದು ಈ ಹಿಂದೆಯೇ ಪ್ರಸ್ತಾವಿಸಲಾಗಿದೆ. ಆ ಪ್ರಯತ್ನಕ್ಕೆ ಯಾರು ಯಾರು ಭಾಗಿಗಳಾಗಿದ್ದರು ಎಂಬ ವಿವರಗಳೆಲ್ಲ ನ್ಯಾಯಾಲಯದ ಮುಂದೆ ಸಾಬೀತುಪಡಿಸಲಾಗಿತ್ತು. ಬಡ್ಗೆಯ ತಪ್ಪೊಪ್ಪಿಗೆಯ ಪ್ರಬಲ ಆಧಾರವೂ ಇತ್ತು. ಜನವರಿ 20ರಂದು ಗಾಂಧಿ ಹತ್ಯೆ ಮಾಡಬೇಕೆಂಬ ಪಿತೂರಿ ನಡೆದಿತ್ತು ಎಂಬುದಕ್ಕೆ ನಿಃಸಂದಿಗ್ಧ ಪುರಾವೆ ನ್ಯಾಯಾಲಯದ ಮುಂದಿತ್ತು. ಆದರೆ ಅಂದು ಹತ್ಯೆ ನಡೆಯಲಿಲ್ಲ. ಮುಂದೆ 30 ರಂದು ನಡೆದ ಹತ್ಯೆಗೆ ಪಿತೂರಿ ಯಾವಾಗ ಮಾಡಿದರು, ಯಾರ್ಯಾರು ಮಾಡಿದರು ಎಂಬುದಕ್ಕೆ ಯಾವ ಪುರಾವೆಯೂ ಇಲ್ಲವೆಂದು ಆರೋಪಿಗಳ ಪರವಾಗಿ ವಕೀಲರು ವಾದಿಸಿದ್ದರು. ಆದರೆ ನ್ಯಾಯಾಧೀಶರು ಜನವರಿ 30 ರ ಕೃತ್ಯ, ಜನವರಿ 30 ರ ವಿಫಲ ಪ್ರಯತ್ನದ ಮುಂದುವರಿದ ಭಾಗ ಎಂಬುದಾಗಿ ನ್ಯಾಯಾಧೀಶರು ನಿರ್ಧರಿಸಿದರು.

  

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News