ಸದ್ಯದಲ್ಲಿಯೇ ಹೊಸ 20 ರೂ. ನೋಟು ಬಿಡುಗಡೆ: ಇದರ ವಿಶೇಷತೆಗಳೇನು ಗೊತ್ತಾ?
ಹೊಸದಿಲ್ಲಿ, ಎ.27: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲಿಯೇ ಹಸಿರು ಮಿಶ್ರಿತ ಹಳದಿ ಬಣ್ಣದ 20 ರೂ. ಹೊಸ ನೋಟುಗಳನ್ನು ಹೊರತರಲಿದೆ ಎಂದು ಬ್ಯಾಂಕ್ ಎಪ್ರಿಲ್ 26ರಂದು ಹೊರಡಿಸಿದ ಅಧಿಸೂಚನೆ ತಿಳಿಸಿದೆ. ಈ ಮಹಾತ್ಮ ಗಾಂಧಿ (ಹೊಸ) ಸರಣಿಯ ನೋಟುಗಳಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಸಹಿಯಿರಲಿದೆ.
“ಈ ನೋಟಿನ ಮೂಲ ಬಣ್ಣ ಹಸಿರು ಮಿಶ್ರಿತ ಹಳದಿಯಾಗಿದೆ. ನೋಟಿನ ಎರಡೂ ಬದಿಗಳಲ್ಲಿ ಜಿಯೋಮೆಟ್ರಿಕ್ ವಿನ್ಯಾಸಗಳಿವೆ. ನೋಟಿನ ಹಿಂದುಗಡೆ ಎಲ್ಲೋರಾ ಗುಹೆಗಳ ಚಿತ್ರವಿದ್ದು, ಇದು ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.
ಈ ಹೊಸ 20 ರೂ. ನೋಟಿನ ಇತರ ಅಂಶಗಳು ಇಂತಿವೆ:
► ನೋಟಿನಲ್ಲಿ 20 ರೂ. ಎಂದು ಬರೆದಿರುವ ಕಡೆಯನ್ನು ಬೆಳಕಿಗೆ ಹಿಡಿದಾಗ ಅಲ್ಲಿ ಹೂವಿನ ವಿನ್ಯಾಸ ಗೋಚರಿಸುತ್ತದೆ.
►ದೇವನಾಗರಿ ಲಿಪಿಯಲ್ಲಿ 20 ರೂ. ಎಂದು ಬರೆಯಲಾಗಿದ್ದು, ಮಹಾತ್ಮ ಗಾಂಧಿ ಅವರ ಭಾವಚಿತ್ರ ಮಧ್ಯ ಭಾಗದಲ್ಲಿದೆ.
► ಆರ್ ಬಿಐ, ಭಾರತ್ (ಹಿಂದಿಯಲ್ಲಿ), ಇಂಡಿಯಾ, 20 ಎಂದು ಸಣ್ಣ ಅಕ್ಷರಗಳಲ್ಲಿ ಹಾಗೂ ಡಿಮೆಟಲೈಸ್ಡ್ ಸೆಕ್ಯುರಿಟಿ ಥ್ರೆಡ್ ನಲ್ಲಿ ಭಾರತ್, ಆರ್ ಬಿಐ ಎಂದು ಬರೆದಿದೆ.
► ಆರ್ ಬಿಐ ಗವರ್ನರ್ ಅವರ ಸಹಿ ಹಾಗೂ ಆರ್ ಬಿಐ ಲಾಂಛನ ಮಹಾತ್ಮ ಗಾಂಧಿಯ ಚಿತ್ರದ ಬಲಭಾಗದಲ್ಲಿರುತ್ತದೆ ಹಾಗೂ ಅಶೋಕ ಸ್ತಂಭದ ಲಾಂಛನವೂ ಬಲಭಾಗದಲ್ಲಿ.
► ಮಹಾತ್ಮ ಗಾಂಧಿ ಚಿತ್ರ ಹಾಗೂ ಇಲೆಕ್ಟ್ರೋಟೈಪ್ (20) ವಾಟರ್ ಮಾರ್ಕ್ ಮತ್ತು ನಂಬರ್ ಪ್ಯಾನೆಲ್ ಮತ್ತು ಅಂಕೆಗಳು ಮೇಲ್ಬದಿಯ ಎಡ ಭಾಗದಲ್ಲಿ ಹಾಗೂ ಕೆಳ ಬದಿಯ ಬಲ ಭಾಗದಲ್ಲಿ ಸಣ್ಣ ಅಕ್ಷರದಿಂದ ದೊಡ್ಡ ಅಕ್ಷರದ ತನಕ ಬರೆಯಲಾಗಿದೆ.
►ನೋಟಿನ ಹಿಂದುಗಡೆ ನೋಟು ಮುದ್ರಿತ ವರ್ಷ ಎಡ ಬದಿಯಲ್ಲಿ ಸ್ವಚ್ಛ ಭಾರತ ಲಾಂಛನ ಮತ್ತು ಘೋಷಣೆಯೊಂದಿಗಿದೆ.
►ಈ ಹೊಸ ನೋಟಿನ ಗಾತ್ರ 63 ಎಂಎಂ X 129 ಎಂಎಂ ಆಗಿದೆ.