ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಪಾತ್ರದ ಬಗ್ಗೆ ಪುರಾವೆಯಿದೆ: ಕೇಂದ್ರ ಸಚಿವ ಅಠಾವಳೆ

Update: 2019-04-29 13:24 GMT

ಭೋಪಾಲ, ಎ.29: ಬಿಜೆಪಿಯ ಭೋಪಾಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಮಹಾರಾಷ್ಟ್ರ ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ನೀಡಿರುವ ಹೇಳಿಕೆಗೆ ತನ್ನ ವಿರೋಧವಿದೆ. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಠಾಕೂರ್ ವಿರುದ್ಧ ಕರ್ಕರೆ ಬಳಿ ಸಾಕಷ್ಟು ಪುರಾವೆಗಳಿದ್ದವು ಎಂದು ಎನ್‌ಡಿಎ ಮಿತ್ರಪಕ್ಷ ಆರ್‌ಪಿಐ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.

ಮಾಲೆಗಾಂವ್ ಪ್ರಕರಣದಲ್ಲಿ ಪ್ರಜ್ಞಾ ಹೆಸರು ಸೇರಿದೆ. ಆದ್ದರಿಂದ ಅವರಿಗೆ ಬಿಜೆಪಿ ಟಿಕೆಟ್ ನೀಡಬಾರದಿತ್ತು ಎಂದು ಅಠಾವಳೆ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

“ಭಯೋತ್ಪಾದಕರಿಂದ ಜನರನ್ನು ರಕ್ಷಿಸುವ ಹೋರಾಟದಲ್ಲಿ ಕರ್ಕರೆ ಹುತಾತ್ಮರಾಗಿದ್ದಾರೆ. ಕರ್ಕರೆ ಬಗ್ಗೆ ಪ್ರಜ್ಞಾ ನೀಡಿರುವ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು” ಎಂದು ಅಠಾವಳೆ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 350 ಸ್ಥಾನದಲ್ಲಿ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಮುಂದಿನ ಸರಕಾರದಲ್ಲಿ ಪ್ರಧಾನಿ ಮೋದಿ ತನಗೆ ಉತ್ತಮ ಸಚಿವ ಸ್ಥಾನ ನೀಡುವರೆಂಬ ವಿಶ್ವಾಸವಿದೆ ಎಂದರು.

ಹಾಲಿ ಕೇಂದ್ರ ಸರಕಾರದಲ್ಲಿ ಅಠಾವಳೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಉಪಸಚಿವರಾಗಿದ್ದಾರೆ. ಮುಂದಿನ ಸರಕಾರದಲ್ಲಿ ರಕ್ಷಣಾ ಸಚಿವರಾಗಿ ನಿಯುಕ್ತಿಗೊಂಡರೆ ಆಗ ಪಾಕ್ ಕುರಿತು ಯಾವ ನಿಲುವು ತಳೆಯುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯ ನಡೆಸಲು ಪ್ರೇರಣೆ ನೀಡುವ ನೆರೆಯ ರಾಷ್ಟ್ರದ ಮೇಲೆ ದಾಳಿ ನಡೆಸುತ್ತೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News