ಅಕ್ರಮ ಮತದಾನದ ಸಾಧ್ಯತೆ: ಸಂಜಯ್ ಝಾ

Update: 2019-04-29 16:33 GMT

ಹೊಸದಿಲ್ಲಿ, ಎ.29: ಮತ ಚಲಾಯಿಸಿದವರ ಬೆರಳಿಗೆ ಮತಗಟ್ಟೆ ಅಧಿಕಾರಿಗಳು ಹಾಕುವ ‘ಅಳಿಸಲಾಗದ ಶಾಯಿ ಗುರುತನ್ನು’ ಸುಲಭವಾಗಿ ಅಳಿಸಬಹುದು. ಆದ್ದರಿಂದ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಹೇಳಿದ್ದಾರೆ.

ನೈಲ್ ಪಾಲಿಶ್ ರಿಮೂವರ್‌ನಿಂದ ಶಾಯಿ ಗುರುತನ್ನು ತೆಗೆಯಲು ಸಾಧ್ಯವಿದೆ. ಕರ್ನಾಟಕದ ಮೈಸೂರಿನಲ್ಲಿರುವ ಕಂಪೆನಿಯೊಂದು ತಯಾರಿಸುವ ಈ ಶಾಯಿಯ ಗುರುತು ಮತದಾನ ಮಾಡಿದ ಕನಿಷ್ಟ ಒಂದು ವಾರದವರೆಗೆ ಉಳಿಯಬೇಕು. ಆದರೆ ಈ ಬಾರಿಯ ಚುನಾವಣೆಗೆ ಬಳಸಿರುವ ಶಾಯಿಯನ್ನು ಮತದಾನ ಮಾಡಿದ ತಕ್ಷಣ ನೈಲ್ ಪಾಲಿಶ್ ರಿಮೂವರ್ ಬಳಸಿ ಅಳಿಸಬಹುದು ಎಂದು ಝಾ ಹೇಳಿದ್ದಾರೆ.

ಸೋಮವಾರ ಬೆಳಿಗ್ಗೆ 9:52ಕ್ಕೆ ಮತದಾನ ಹಾಕಿದ ಗುರುತಾಗಿ ಎಡಗೈಯ ಬೆರಳಿಗೆ ಶಾಯಿ ಗುರುತು ಹಾಕಿಕೊಂಡಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಬಳಿಕ ಸುಮಾರು ಒಂದು ಗಂಟೆಯ ಬಳಿಕ, ಬೆಳಿಗ್ಗೆ 10:38ಕ್ಕೆ ಕೈ ಬೆರಳಿನಲ್ಲಿದ್ದ ಶಾಯಿ ಗುರುತನ್ನು ತೆಗೆದು ಹಾಕಿರುವ ಫೋಟೊವನ್ನು ಝಾ ಪೋಸ್ಟ್ ಮಾಡಿದ್ದಾರೆ. ಶಾಯಿ ಗುರುತಿನ ಬಗ್ಗೆ ಎಪ್ರಿಲ್ 11ರಂದು ನಡೆದ ಪ್ರಥಮ ಹಂತದ ಮತದಾನದ ಸಂದರ್ಭವೂ ಹಲವರು ದೂರು ನೀಡಿದ್ದರು. ಸುಲಭದಲ್ಲಿ ಅಳಿಸಬಹುದಾದ ಶಾಯಿ ಗುರುತು ಎಂಬ ಟಿಪ್ಪಣಿಯೊಂದಿಗೆ ತಮ್ಮ ಹೇಳಿಕೆಯನ್ನು ನೋಯ್ಡಾ ಮೂಲದ ಪತ್ರಕರ್ತೆ ರಿತು ಕಪೂರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು ಇದನ್ನು ಚುನಾವಣಾ ಆಯೋಗದ ಅಧಿಕೃತ ವಕ್ತಾರೆ ಶೆಫಾಲಿ ಶರಣ್‌ಗೆ ಟ್ಯಾಗ್ ಮಾಡಿದ್ದರು.

ಎಪ್ರಿಲ್ 18ರಂದು ನಡೆದ ದ್ವಿತೀಯ ಹಂತದ ಮತದಾನದ ಸಂದರ್ಭವೂ ಬೆಂಗಳೂರಿನಲ್ಲಿ ಇದೇ ರೀತಿಯ ದೂರು ವ್ಯಕ್ತವಾಗಿತ್ತು. ಓರ್ವ ಪೌರರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಶಾಯಿ ಗುರುತನ್ನು ಸುಲಭದಲ್ಲಿ ಅಳಿಸಬಹುದಾಗಿದೆ ಎಂದು ತಿಳಿಸಿದ್ದರು. ಈ ಆಕ್ಷೇಪಗಳಿಗೆ ಉತ್ತರಿಸಿದ್ದ ಉಪಚುನಾವಣಾ ಆಯುಕ್ತ ಚಂದ್ರಭೂಷಣ್ ಕುಮಾರ್, ಪ್ರತೀ ಬಾರಿ ಚುನಾವಣೆಯಲ್ಲಿ ಬಳಸುವ ಮುನ್ನ ಈ ಶಾಯಿಗಳನ್ನು ಸಿಎಸ್‌ಐಆರ್ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಸಾಮಾನ್ಯವಾಗಿ ಶಾಯಿ ಗುರುತನ್ನು ತಕ್ಷಣ ಅಳಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಆಯೋಗವು 2019ರ ಲೋಕಸಭಾ ಚುನಾವಣೆಯಲ್ಲಿ ಬಳಸಲು 33 ಕೋಟಿ ರೂ. ವೆಚ್ಚದಲ್ಲಿ 26 ಲಕ್ಷ ಬಾಟಲಿ ಶಾಯಿ ಪೂರೈಸಲು ಕೋರಿಕೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News