23 ವಿದ್ಯಾರ್ಥಿಗಳ ಆತ್ಮಹತ್ಯೆ: ಶಿಕ್ಷಣ ಸಚಿವರ ವಜಾಕ್ಕೆ ಆಗ್ರಹ

Update: 2019-04-29 17:13 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್, ಎ.29: ತೆಲಂಗಾಣದಲ್ಲಿ ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಎಡವಟ್ಟು ನಡೆದಿರುವ ಹಿನ್ನೆಲೆಯಲ್ಲಿ ಸರಕಾರದ ವಿರುದ್ಧ ಟೀಕಾಪ್ರಹಾರ ಹೆಚ್ಚುತ್ತಿದ್ದು ಶಿಕ್ಷಣ ಸಚಿವ ಮತ್ತು ಪಿಯುಸಿ ಮಂಡಳಿಯ ಕಾರ್ಯದರ್ಶಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಸೋಮವಾರ ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟನೆ ನಡೆಸಿವೆ.

ಈ ಮಧ್ಯೆ, ಫಲಿತಾಂಶದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಸಂಖ್ಯೆ 23ಕ್ಕೇರಿದೆ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಲಕ್ಷ್ಮಣ್ ಬೇಗಾನ್ ಅನಿರ್ಧಿಷ್ಟಾವಧಿಯ ಉಪವಾಸ ಆರಂಭಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ಪರೀಕ್ಷೆ ನಡೆದಿದ್ದು ಎಪ್ರಿಲ್ 18ರಂದು ಫಲಿತಾಂಶ ಪ್ರಕಟವಾಗಿದೆ. 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಫೇಲಾಗಿರುವರೆಂದು ಘೋಷಿಸಲಾಗಿತ್ತು. ತಾವು ಪರೀಕ್ಷೆಗೆ ಚೆನ್ನಾಗಿ ಅಭ್ಯಾಸ ನಡೆಸಿದ್ದರೂ ಕಡಿಮೆ ಅಂಕ ಪಡೆದಿದ್ದೇವೆ . ತೇರ್ಗಡೆಯಾಗುವ ವಿಶ್ವಾಸವಿದ್ದ ಕೆಲವರು ಫೇಲಾಗಿದ್ದಾರೆ. ಈ ಎಡವಟ್ಟಿಗೆ ಪಿಯುಸಿ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಶಿಕ್ಷಣ ಸಚಿವ ಜಿ.ಜಗದೀಶ್ ರೆಡ್ಡಿ ನೈತಿಕ ಹೊಣೆ ಹೊರಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರು.

 ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು, ಶಿಕ್ಷಣ ಸಚಿವ ಹಾಗೂ ಪಿಯುಸಿ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯನ್ನು ವಜಾಗೊಳಿಸಬೇಕು ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ಮಕ್ಕಳ ಕುಟುಂಬದವರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ವಿವಿಧ ಪಕ್ಷಗಳು ಮುಖ್ಯಮಂತ್ರಿ ನಿವಾಸದೆದುರು ಪ್ರತಿಭಟನೆ ನಡೆಸಿದವು ಹಾಗೂ ತೆಲಂಗಾಣ ರಾಜ್ಯ ಇಂಟರ್‌ಮೀಡಿಯೇಟ್ ಶಿಕ್ಷಣ ಮಂಡಳಿಯ ಕಚೇರಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಅಧಿಕೃತ ಕಚೇರಿಗೆ ಬೀಗ ಜಡಿಯಲು ಮುಂದಾದರು. ಆಗ ಹಲವಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಇದಕ್ಕೂ ಮೊದಲು ಕಾಂಗ್ರೆಸ್, ತೆಲಂಗಾಣ ಟಿಡಿಪಿ, ಟಿಜೆಎಸ್ ಪಕ್ಷದ ಹಲವು ಮುಖಂಡರನ್ನು ರಾಜ್ಯ ಸರಕಾರ ಗೃಹಬಂಧನದಲ್ಲಿರಿಸಿದೆ ಎಂದು ಪಕ್ಷದ ಮುಖಂಡರು ದೂರಿದ್ದಾರೆ. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ, ಪ್ರೋಗ್ರೆಸಿವ್ ಡೆಮೊಕ್ರಾಟಿಕ್ ಸ್ಟುಡೆಂಟ್ಸ್ ಯೂನಿಯನ್, ಡೆಮೊಕ್ರಾಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ, ಆಲ್ ಇಂಡಿಯಾ ಡೆಮೊಕ್ರಾಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಹಾಗೂ ಇತರ ಸಂಘಟನೆಯ ಸದಸ್ಯರು ಪರೀಕ್ಷಾ ಮಂಡಳಿಯ ಕೇಂದ್ರ ಕಚೇರಿಯೆದುರು ಪ್ರತಿಭಟನೆಗೆ ಮುಂದಾದಾಗ ಇವರನ್ನು ಪೊಲೀಸ್ ವಾಹನದಲ್ಲಿ ಬೇರೆಡೆಗೆ ಕರೆದೊಯ್ಯಲಾಯಿತು. ಎಬಿವಿಪಿ ಹಾಗೂ ಸಿಪಿಐ ಕಾರ್ಯಕರ್ತರನ್ನೂ ಪೊಲೀಸರು ವಶಕ್ಕೆ ಪಡೆದರು.

 ಇದಕ್ಕೂ ಮುನ್ನ ಹೇಳಿಕೆ ನೀಡಿದ್ದ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಬಿ ಜನಾರ್ದನ ರೆಡ್ಡಿ, ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಮರು ಎಣಿಕೆ, ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು . ಮರುಪರಿಶೀಲನೆ ಸಂದರ್ಭ ತಪ್ಪೆಸಗಿರುವುದು ಕಂಡುಬಂದರೆ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಫೇಲಾದ ವಿದ್ಯಾರ್ಥಿಗಳಿಂದ ಮರು ಎಣಿಕೆ ಅಥವಾ ಮರುಪರಿಶೀಲನೆಗೆ ಯಾವುದೇ ಶುಲ್ಕ ಪಡೆಯಬಾರದು ಎಂದು ಕಳೆದ ವಾರ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಆದೇಶಿಸಿದ್ದರು.

99 ಅಂಕದ ಬದಲು 0 ಅಂಕ

 ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ತೆಲುಗು ಭಾಷೆ ಪೇಪರ್‌ನಲ್ಲಿ 99 ಅಂಕ ಗಳಿಸಿದ್ದರೂ ಫಲಿತಾಂಶ ಘೋಷಣೆಯಾದಾಗ ಈಕೆಗೆ ಸಿಕ್ಕಿದ್ದು 0 ಮಾರ್ಕ್. ಉತ್ತರಪತ್ರಿಕೆ ಪರಿಶೀಲನೆಯಲ್ಲಿ ಈ ಎಡವಟ್ಟು ಬೆಳಕಿಗೆ ಬಂದೊಡನೆ ಪರೀಕ್ಷಕರಾದ ಜಿ.ಉಮಾದೇವಿಗೆ 5 ಸಾವಿರ ರೂ.ದಂಡ ವಿಧಿಸಲಾಗಿದೆ ಮತ್ತು ಮೌಲ್ಯಮಾಪನ ಪರಿಶೋಧಿಸಿದ ಖಾಸಗಿ ಕಾಲೇಜಿನ ಉಪನ್ಯಾಸಕ ಎಸ್ ವಿಜಯ್ ಕುಮಾರ್‌ನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಸರಕಾರದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News