ಚೌಕಿದಾರ್ ಚೋರ್ ಹೇಳಿಕೆಗೆ ಮತ್ತೆ ವಿಷಾದ ವ್ಯಕ್ತಪಡಿಸಿದ ರಾಹುಲ್

Update: 2019-04-29 17:17 GMT

ಹೊಸದಿಲ್ಲಿ, ಎ.29: ರಫೇಲ್ ಪ್ರಕರಣದ ತೀರ್ಪಿನ ಕುರಿತ ತನ್ನ ವ್ಯಾಖ್ಯಾನದ ಬಗ್ಗೆ ಸುಪ್ರೀಂಕೋರ್ಟ್‌ನಿಂದ ನ್ಯಾಯಾಂಗ ನಿಂದನೆ ನೋಟಿಸ್ ಪಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸರ್ವೋಚ್ಛ ನ್ಯಾಯಾಲಯಕ್ಕೆ ಹೊಸದಾಗಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ‘ಚೌಕಿದಾರ್ ಚೋರ್ ಹೈ’ ಎಂಬ ಹೇಳಿಕೆಯ ಬಗ್ಗೆ ಮತ್ತೊಮ್ಮೆ ವಿಷಾದ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಎಪ್ರಿಲ್ 23ರಂದು ರಾಹುಲ್‌ಗೆ ನೋಟಿಸ್ ಜಾರಿಗೊಳಿಸಿತ್ತು. ಮೀನಾಕ್ಷಿ ಲೇಖಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯು ನ್ಯಾಯಾಲಯದ ಪ್ರಕ್ರಿಯೆಯ ನಿಂದನೆಯಾಗಿದೆ ಎಂದು ಹೇಳಿದ್ದ ರಾಹುಲ್ ಗಾಂಧಿ ಈ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.

ಚುನಾವಣೆಯ ಪ್ರಚಾರದ ಭರದಲ್ಲಿ ತಾನು ನೀಡಿರುವ ಹೇಳಿಕೆಯಲ್ಲಿ ಸುಪ್ರೀಂಕೋರ್ಟ್‌ನ ಆದೇಶವನ್ನು ತಪ್ಪಾಗಿ ಉಲ್ಲೇಖಿಸಿರುವ ಬಗ್ಗೆ ವಿಷಾದ ಸೂಚಿಸುತ್ತೇನೆ. ಆದರೆ ಈ ಪ್ರಕರಣದಲ್ಲಿ ನ್ಯಾಯಾಲಯ ಯಾವುದೇ ತೀರ್ಪು ನೀಡಿಲ್ಲ ಎಂದು ವ್ಯಾಖ್ಯಾನಿಸಲಾಗದು. ಸುಪ್ರೀಂಕೋರ್ಟ್ ಅನ್ನು ರಾಜಕೀಯ ವಲಯಕ್ಕೆ ಎಳೆದು ತರಬೇಕೆಂಬ ಕಿಂಚಿತ್ ಉದ್ದೇಶವೂ ತನ್ನಲ್ಲಿಲ್ಲ. 2018ರ ಡಿಸೆಂಬರ್ 14ರಂದು ಸರಕಾರ ರಫೇಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನಗೆ ಕ್ಲೀನ್ ಚಿಟ್ ನೀಡಿದೆ ಎಂದು ಸುಳ್ಳು ಹೇಳಿತ್ತು. ಇದಕ್ಕೆ ಇದಿರೇಟು ನೀಡಲು ತಾನು ಈ ಹೇಳಿಕೆ ನೀಡಿದ್ದೇನೆ. ಕಳೆದ ಹಲವು ತಿಂಗಳುಗಳಿಂದ ದೇಶದಲ್ಲಿ ಪ್ರಮುಖ ಹಗರಣವಾಗಿ ಪರಿಗಣಿಸಲ್ಪಟ್ಟಿರುವ ರಫೇಲ್ ಒಪ್ಪಂದ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಇದು ಮಾಧ್ಯಮಗಳಲ್ಲಿ ಹಾಗೂ ಸಮಾಜದಲ್ಲಿ ನಿರಂತರ ಚರ್ಚೆಯ ವಿಷಯವಾಗಿದೆ ಎಂದು ರಾಹುಲ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News